Advertisement

ಸಿದ್ಧಗಂಗಾ ಶ್ರೀ ಚೆನ್ನೈಗೆ; ವ್ಹೀಲ್‌ ಚೇರ್‌ ಬೇಡ ಎಂದ ಶ್ರೀಗಳು!!

09:33 AM Dec 07, 2018 | Team Udayavani |

ತುಮಕೂರು: ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಅವರ ಆರೋಗ್ಯದಲ್ಲಿ ಸ್ಥಿರತೆ ಕಂಡು ಬಂದಿದ್ದರೂ ಹೆಚ್ಚಿನ ಚಿಕಿತ್ಸೆ ಅಗತ್ಯವಿರುವ ಹಿನ್ನಲೆಯಲ್ಲಿ ಶುಕ್ರವಾರ ಬೆಳಗ್ಗೆ  ಚೆನ್ನೈಗೆ ಕರೆದೊಯ್ದು   ರೇಲಾ ಇನ್ಸ್ ಟಿಟ್ಯೂಟ್ ಮೆಡಿಕಲ್ ಸೆಂಟರ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.  

Advertisement

ಡಾ.ಮೊಹಮದ್‌ ರೆಲಾರಿಂದ ಚಿಕಿತ್ಸೆ 
ಮೂರರಿಂದ ನಾಲ್ಕು ದಿನಗಳ ಕಾಲ ಶ್ರೀಗಳಿಗೆ ಚಿಕಿತ್ಸೆ ನೀಡಲು ವೈದ್ಯರು ನಿರ್ಧರಿಸಿದ್ದು, 5 ದಿನದ ಹಸುಗೂಸಿಗೂ ಲಿವರ್ ಕಸಿ ಮಾಡಿ ಗಿನ್ನೆಸ್‌ ರೆಕಾರ್ಡ್‌ ಮಾಡಿರುವ ಪ್ರಖ್ಯಾತ ವೈದ್ಯ   ಡಾ.ಮೊಹಮ್ಮದ್ ರೇಲಾ ಅವರು ಶ್ರೀಗಳಿಗೆ ಚಿಕಿತ್ಸೆ ನೀಡಲಿದ್ದಾರೆ. 

ವ್ಹೀಲ್‌ ಚೇರ್‌ ಬೇಡ ಎಂದ ಶ್ರೀಗಳು!!
ಶ್ರೀಗಳು ಲವವಲಿಕೆಯಿಂದ ಇದ್ದು , ಚೆನ್ನೈನಲ್ಲಿ ವ್ಹೀಲ್‌ ಚೇರ್‌ ಬೇಡ ಎಂದು ಕಾಲ್ನಡಿಗೆಯಲ್ಲೇ ಒಳಗೆ ತೆರಳಿದ್ದಾರೆ. 

ಮಠದಿಂದ ಪೊಲೀಸ್‌ ಬೆಂಗಾವಲಿನೊಂದಿಗೆ ಅಂಬುಲೆನ್ಸ್‌ನಲ್ಲಿ ಬೆಂಗಳೂರಿಗೆ ಕರೆತಂದು ಎಚ್‌ಎಎಲ್‌ನಿಂದ ಏರ್‌ ಅಂಬುಲೆನ್ಸ್‌ ಮೂಲಕ  ಚೆನ್ನೈಗೆ ಕರೆದೊಯ್ಯಲಾಗಿದೆ.  

ಗುರುವಾರ ರಾತ್ರಿ ಆಗಮಿಸಿದ್ದ  ಚೆನ್ನೈನ ವೈದ್ಯರ ತಂಡ ತಪಾಸಣೆ ನಡೆಸಿ ಹೆಚ್ಚಿನ ಚಿಕಿತ್ಸೆ ಅಗತ್ಯವಿದೆ ಎಂದಿದ್ದರು.

Advertisement

ಈಗಾಗಲೇ ಶ್ರೀಗಳ ಶಿಷ್ಯವೃಂದದವರು ಚೆನ್ನೈಗೆ ತೆರಳಿದ್ದು ,ಆಸ್ಪತ್ರೆಯಲ್ಲೂ ಶ್ರೀಗಳ ಪೂಜಾ ವಿಧಿಗಳಿಗೆ ಅನುಕೂಲವಾಗುವಂತೆ ವ್ಯವಸ್ಥೆ ಮಾಡಲಿದ್ದಾರೆ. 
 
ಶುಕ್ರವಾರವೂ  ಎಂದಿನಂತೆ ಶ್ರೀಗಳು ಬೆಳಗ್ಗೆ ಇಷ್ಟಲಿಂಗ ಪೂಜೆ ಮಾಡಿ ಪ್ರಸಾದ ಸೇವಿಸಿ ಹಳೇ ಮಠದಲ್ಲಿ ಲವಲವಿಕೆಯಿಂದ ಇದ್ದು, ವಿಶ್ರಾಂತಿ ಪಡೆಯುತ್ತಿದ್ದಾರೆ. 

ಸಂಪೂರ್ಣ ಸಹಕಾರ
  ಶೃಂಗೇರಿಯಲ್ಲಿ ಪ್ರತಿಕ್ರಿಯೆ ನೀಡಿರುವ ಸಿಎಂ ಎಚ್‌.ಡಿ.ಕುಮಾರಸ್ವಾಮಿ,  ಸಿದ್ಧಗಂಗಾ ಶ್ರೀಗಳ ಆರೋಗ್ಯದ ಬಗ್ಗೆ ಆತಂಕ ಬೇಡ. ಆರೋಗ್ಯ ಸ್ಥಿರವಾಗಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತರಿಸಿಕೊಳ್ಳುತ್ತಿದ್ದೇನೆ. ಮಠದ ಕಿರಿಯ ಸ್ವಾಮೀಜಿ ಜತೆ ನಿರಂತರ ಸಂಪರ್ಕದಲ್ಲಿದ್ದೇನೆ. ಹೆಚ್ಚಿನ ಚಿಕಿತ್ಸೆ ಅನಿವಾರ್ಯತೆ ಯಿಂದ ಚೆನ್ನೈ  ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ. ಸರ್ಕಾರ ಸಂಪೂರ್ಣ ಸಹಕಾರ ನೀಡಲಿದ್ದು ಚಿಕಿತ್ಸಾ ವೆಚ್ಚವನ್ನೂ ಭರಿಸಲಿದೆ ಎಂದು ತಿಳಿಸಿದರು. 

ಬಿಎಸ್‌ವೈ ಭೇಟಿ
ಮಠಕ್ಕೆ ಶುಕ್ರವಾರ ಭೇಟಿ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಶ್ರೀಗಳ ಆರೋಗ್ಯ ವಿಚಾರಿಸಿದರು. ಆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಶ್ರೀಗಳು ನಡೆದಾಡುವ ದೇವರು. ಅವರ ಆಶೀರ್ವಾದ ಪಡೆಯುವ ಭಾಗ್ಯ ದೊರಕಿದ್ದು ನಮ್ಮ ಪೂರ್ವ ಜನ್ಮದ ಫ‌ಲ.ಅವರು ಇನ್ನಷ್ಟು ಕಾಲ ಭಕ್ತರಿಗೆ ಆಶೀರ್ವಾದ ಮಾಡಬೇಕು ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದರು. 

ಬುಧವಾರ ರಾತ್ರಿ 9.30ರ ಸುಮಾರಿಗೆ ಹಳೇಮಠದಲ್ಲಿ ಪೂಜೆ ನೆರವೇರಿಸಿ ಪ್ರಸಾದ ಸೇವಿಸಿ ವಿಶ್ರಾಂತಿ ಪಡೆಯುವ ವೇಳೆ ಶ್ರೀಗಳಿಗೆ ಜ್ವರ, ಹೃದಯ ಬಡಿತ ಕಾಣಿಸಿಕೊಂಡಿತು. ಇದರಿಂದ ಮಠದಲ್ಲಿ ಆತಂಕದ ವಾತಾವರಣ ಉಂಟಾಗಿತ್ತು. ತಕ್ಷಣ ಶ್ರೀಗಳ ಆರೋಗ್ಯ ನೋಡಿಕೊಳ್ಳುವ ಡಾ.ಪರಮೇಶ್ವರ್‌ ಮಠಕ್ಕೆ ಬಂದು ಶ್ರೀಗಳ ತಪಾಸಣೆ ನಡೆಸಿದರು. ನಂತರ ಬಿಜಿಎಸ್‌ ವೈದ್ಯ ಡಾ.ರವೀಂದ್ರ ಮತ್ತು ಡಾ.ವೆಂಕಟರಮಣ ಅವರು ಆಗಮಿಸಿ ಮಧ್ಯರಾತ್ರಿ 2.30ರ ವರೆಗೆ ಸಿದ್ಧಗಂಗಾ ಮಠದಲ್ಲಿ ಚಿಕಿತ್ಸೆ ನೀಡಿದ್ದರು. ಬಳಿಕ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿತ್ತು.

ಕಳೆದ ಶನಿವಾರ ಜ್ವರದಿಂದ ಬಳಲಿದ ಶ್ರೀಗಳನ್ನು ಬೆಂಗಳೂರಿನ ಬಿಜಿಎಸ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ರಕ್ತದಲ್ಲಿ ಸೋಂಕು, ಪಿತ್ತನಾಳ ಹಾಗೂ ಪಿತ್ತ ಕೋಶದಲ್ಲಿ ಸೋಂಕು ಕಂಡು ಬಂದಿದ್ದರಿಂದ ಸ್ಟೆಂಟ್‌ ಅಳವಡಿಸಿ ಚಿಕಿತ್ಸೆ ನೀಡಿ ಸೋಮವಾರ ಶ್ರೀಗಳನ್ನು ಮಠಕ್ಕೆ ಕಳುಹಿಸಲಾಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next