ತುಮಕೂರು: ಸಿದ್ದಗಂಗಾ ಶಿಕುಮಾರ ಶ್ರೀಗಳು ನಡೆದು ಹೋದ ದಾರಿಯನ್ನು ನಾವುಗಳು ಸ್ವಲ್ಪವಾದರೂ ಕ್ರಮಿಸಬೇಕು. ಜ್ಞಾನ ಅನೇಕ ಮೂಲದಿಂದ ಬರಬಹುದು, ಆದರೆ ಅನುಭವದಿಂದ ಬರುವ ಜ್ಞಾನ ಶ್ರೇಷ್ಠವಾದದ್ದು ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.
ತುಮಕೂರು ಸಿದ್ಧಗಂಗಾ ಮಠದಲ್ಲಿ ಡಾ. ಶಿವಕುಮಾರ ಶ್ರೀಗಳ ಪುಣ್ಯ ಸ್ಮರಣೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಶಿವಕುಮಾರ ಶ್ರೀಗಳ ಅನುಭವ ಬಡ, ಧೀನ ದಲಿತ ಮಕ್ಕಳ ಉದ್ದಾರಕ್ಕೆ ಕಾರಣವಾಯಿತು. ತುಮಕೂರು ಜಿಲ್ಲೆ ಇಷ್ಟೂ ದಿನ ಅವರ ಹೆಸರಿನಲ್ಲಿ ಬಿಂಬಿತವಾಗಿತ್ತು. ಆದರೆ ಈಗ ಅವರ ನೆನಪಿನಲ್ಲಿ ಬಿಂಬಿತವಾಗುತ್ತಿದೆ. ಅವರ ಅನ್ನ, ಜ್ಞಾನ, ವಸತಿ ದಾಸೋಹ ವ್ಯವಸ್ಥೆಯನ್ನು ನೆನಪಿಸಿಕೊಳ್ಳಬೇಕಿದೆ. ಶ್ರೀಗಳು ಎಂದಿಗೂ ಉಳ್ಳವರ ಪರವಾಗಿರಲಿಲ್ಲ. ಯಾವುದಾದರೂ ಕಾರ್ಯಕ್ರಮಕ್ಕೆ ಆಹ್ವಾನಿಸಿದರೆ ಮೊದಲು ದಾಸೋಹ ವ್ಯವಸ್ಥೆಗೆ ಏನು ಮಾಡಿಕೊಂಡಿದ್ದೀರಿ ಅಂತ ಕೇಳುತ್ತಿದ್ದರು. ಶಿವಕುಮಾರ ಶ್ರೀಗಳು ನಮ್ಮನ್ನ ಬಿಟ್ಟು ಹೋಗಿದ್ದಾರೆ ಎನ್ನುವ ಭಾವನೆ ನಮ್ಮಲ್ಲಿಲ್ಲ ಎಂದರು.
ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ, ದೇವರು ಅಂದರೆ ಹೇಗೆ ಇರ್ತಾರೆ ಎಂಬುದಕ್ಕೆ ಶಿವಕುಮಾರ ಶ್ರೀಗಳೇ ಸಾಕ್ಷಿ. ಅವರ ಕಾಲಘಟ್ಟದಲ್ಲಿ ಬದುಕಿರುವ ನಾವುಗಳು ಧನ್ಯರು. ದೇವರನ್ನು ನಾವು ನೋಡಿದ್ದೀವಿ ಅನ್ನೋದಕ್ಕೆ ಶ್ರೀಗಳು ಸಾಕ್ಷಿ ಎಂದರು.
ಬಸವಣ್ಣನ ಆಶಯದಂತೆ ಶ್ರೀಗಳು ನಡೆದವರು. ಅನ್ನ ಮತ್ತು ಜ್ಞಾನ ದಾಸೋಹ ಇಡೀ ಸಮಾಜಕ್ಕೆ ಮಾದರಿ. ಜಾತಿಯಿಂದ ದೈವತ್ವ ಸಿಗುವುದಿಲ್ಲ. ದೈವತ್ವಕ್ಕೆ ತನ್ನ ಬದುಕಿನ ಮೂಲಕ ಹೇಳಿದ್ದರು. ಇವತ್ತು ಯಾರ್ಯಾರು ಸೋಕಾಲ್ಡ್ ಸೆಕ್ಯುಲರ್‌ಗಳು ಎಂದು ಹೇಳುತ್ತಿದ್ದಾರೋ ಅವರಂಥ ಜಾತಿವಾದಿಗಳು ಬೇರೊಬ್ಬರಿಲ್ಲಎಂದು ನುಡಿದರು.
ಕುಟುಂಬ ರಾಜಕಾರಣ ತಾಂಡವಾಡುತ್ತಿದೆ. ಇವತ್ತು ರಾಜಕೀಯ ವ್ಯವಸ್ಥೆ, ಶೈಕ್ಷಣಿಕ ವ್ಯವಸ್ಥೆ, ಸಾಮಾಜಿಕ ವ್ಯವಸ್ಥೆಯ ಶುದ್ದೀಕರಣಕ್ಕೂ ನಾಂದಿ ಹಾಡಬೇಕಿದೆ. ಶ್ರೀಗಳು ಮಠಾಧಿಪತಿಯಾಗಿರದೆ ತನ್ನ ಸೇವೆ ಮೂಲಕ ಜನರ ಅಧಿಪತಿಯಾಗಿದ್ದರು. ಮಠ ಪಥಿಗಳು ಜನ ಪಥಿಗಳಾಗಿ ಸಾಮಾಜಿಕ ಆಂದೋಲನ ಮಾಡಬೇಕು ಎಂದರು.