ದಾವಣಗೆರೆ: ತುಮಕೂರು ಸಿದ್ಧಗಂಗಾ ಶ್ರೀ ಶಿವಕುಮಾರ ಸ್ವಾಮೀಜಿ ಅವರು ಸಾಮಾಜಿಕ ನ್ಯಾಯದ ಹರಿಕಾರ, ಕಾಯಕತತ್ವದ ಕರ್ಮಯೋಗಿ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ| ಎಚ್.ಎಸ್. ಮಂಜುನಾಥ್ ಕುರ್ಕಿ ಸ್ಮರಿಸಿದರು. ಕುವೆಂಪು ಕನ್ನಡ ಭವನದಲ್ಲಿ ಸೋಮವಾರ ಸಿದ್ದಗಂಗಾ ಶ್ರೀ ಶಿವಕುಮಾರ ಸ್ವಾಮೀಜಿ ಅವರಿಗೆ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ನುಡಿನಮನ ಸಲ್ಲಿಸಿದರು.
ಒಂದು ಮಠವನ್ನು ಹೇಗೆ ಸಮಾಜದಲ್ಲಿ ನಡೆಸಿಕೊಂಡು ಹೋಗಬಹುದು ಎಂಬುದರ ಬಗ್ಗೆ ತಿಳಿಸಿಕೊಟ್ಟ ದಾಸೋಹಿ, ಕರ್ಮಯೋಗಿ ಸಿದ್ದಗಂಗಾ ಶ್ರೀಗಳು. ಇಡೀ ಮನುಕುಲಕ್ಕೆ ಅವರು ಆದರ್ಶ. ಅವರ ಆದರ್ಶ, ಚಿಂತನೆ, ಸಂದೇಶಗಳು ಸಮಾಜದ ಓರೆಕೋರೆ ತಿದ್ದುವಲ್ಲಿ ಸಹಕಾರಿಯಾಗಿವೆ. ಅವರ ವಿಚಾರಧಾರೆಗಳು ಇಡೀ ಮನುಕುಲಕ್ಕೆ ದಾರಿದೀಪ ಎಂದರು.
ಸಾಹಿತಿ ಶಾಂತಗಂಗಾಧರ್ ಮಾತನಾಡಿ, ಬಡತನದಲ್ಲಿ ಬೆಳೆದು ಯಾರು ಉನ್ನತ ಮಟ್ಟಕ್ಕೆ ಬರುತ್ತಾರೋ ಅವರಿಗೆ ಮಾತ್ರ ಕಷ್ಟಗಳ ಅರಿವು ಇರಲು ಸಾಧ್ಯ. ಸಿದ್ದಗಾಂಗಾ ಶ್ರೀಗಳು ಕೂಡ ಅಂತಹ ಬಡತನದ ಕುಟುಂಬದಲ್ಲಿ ಬೆಳೆದು ಬಂದವರು. 1930ರಲ್ಲಿ ದೀಕ್ಷೆ ತೊಟ್ಟ ಶ್ರೀಗಳು, ನಂತರದಲ್ಲಿ ಸಾಕಷ್ಟು ಕುಗ್ರಾಮಗಳಲ್ಲಿ ಶಾಲೆಗಳನ್ನು ಪ್ರಾರಂಭ ಮಾಡಿದರು. ದಮನಿತರು, ಶೋಷಿತರು, ಅಕ್ಷರ ಸಂಸ್ಕೃತಿ ಕಂಡಿರದವರ ಏಳ್ಗೆಗೆ ಅನ್ನ, ಅಕ್ಷರ, ಆಶ್ರಯ ನೀಡಿ ಶ್ರಮಿಸಿದ ತ್ರಿವಿಧ ದಾಸೋಹಿಗಳು ಎಂದು ಸ್ಮರಿಸಿಕೊಂಡರು.
ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ವಾಮದೇವಪ್ಪ ಮಾತನಾಡಿ, ಬಸವತತ್ವ ಪ್ರಚಾರಕರು, ಅಕ್ಷರ ದಾಸೋಹಿಗಳಾದ ಸಿದ್ದಗಂಗಾ ಶ್ರೀಗಳು ಜಾತ್ಯತೀತವಾಗಿ ಎಲ್ಲಾ ವರ್ಗದವರಿಗೂ ಶಿಕ್ಷಣ ಹಾಗೂ ದಾಸೋಹ ಕಲ್ಪಿಸಿದ ಮಹಾನ್‌ಚೇತನರು ಎಂದು ಅಭಿಪ್ರಾಯಪಟ್ಟರು.
ನಿವೃತ್ತ ಶಿಕ್ಷಕಿ ಎಸ್.ಎಂ. ಮಲ್ಲಮ್ಮ ಮಾತನಾಡಿ, ಸಿದ್ದಗಂಗಾ ಶ್ರೀಗಳ ಶಿಷ್ಯ ವರ್ಗ ಅಪಾರ. ಅವರ ಶಿಷ್ಯ ಬಳಗದವರು ಇಂದು ದೇಶ, ವಿದೇಶಗಳಲ್ಲಿದ್ದರೂ ಕೂಡ ಸಮಾಜಮುಖೀ ಸೇವೆ ಸಲ್ಲಿಸುತ್ತಿದ್ದಾರೆ. ಅಂತಹ ನೈತಿಕ ಶಿಕ್ಷಣವನ್ನು ಶ್ರೀಗಳು ಶಿಷ್ಯ ವರ್ಗಕ್ಕೆ ಕಲಿಸಿದ್ದರು. ಅವರು ಅಪರೂಪದ ಜ್ಞಾನ, ತ್ಯಾಗಜೀವಿ ಎಂದು ಹೇಳಿದರು.
ಕಲಾಕುಂಚ ಸಂಸ್ಥಾಪಕ ಸಾಲಿಗ್ರಾಮ ಗಣೇಶ್ ಶೆಣೈ ಮಾತನಾಡಿ, ಭಾರತರತ್ನ ಪ್ರಶಸ್ತಿಗೆ ಗೌರವ ದೊರಕುವ ನಿಟ್ಟಿನಲ್ಲಿ ಸಿದ್ದಗಂಗಾ ಶ್ರೀಗಳಿದ್ದರು. ಅವರಿಗೆ ಭಾರತ ಸರ್ಕಾರ ಮರಣೋತ್ತರವಾಗಿ ಭಾರತರತ್ನ ನೀಡಬೇಕು ಎಂದು ಒತ್ತಾಯಿಸಿದರು.
ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಎ.ಆರ್. ಉಜ್ಜನಪ್ಪ, ಬುರುಡೆಕಟ್ಟೆ ಮಂಜಪ್ಪ, ಎನ್.ಎಸ್. ರಾಜು, ಸಿರಾಜ್ ಅಹಮದ್, ಜಿ.ಆರ್. ಷಣ್ಮುಖಪ್ಪ, ಬಿ. ದಿಳ್ಳೆಪ್ಪ, ಹನುಮಂತಪ್ಪ ಇತರರು ಇದ್ದರು.