Advertisement

Congress Politics: ಡಿನ್ನರ್‌ ಮೀಟಿಂಗ್‌ಗೆ ಮಹತ್ವ ಬೇಡ: ಸಚಿವ ಡಾ.ಎಚ್‌.ಸಿ.ಮಹದೇವಪ್ಪ

03:06 AM Oct 10, 2024 | Team Udayavani |

ಮೈಸೂರು: “ಮುಖ್ಯಮಂತ್ರಿ ಬದಲಾವಣೆ’ ಹಾಗೂ “ದಲಿತ ಮುಖ್ಯಮಂತ್ರಿ’ ಕುರಿತ ಚರ್ಚೆಗೆ ಅಸಮಾಧಾನ ವ್ಯಕ್ತಪಡಿಸಿ ಕಾಂಗ್ರೆಸ್‌ ಹೈಕಮಾಂಡ್‌ ಎಚ್ಚರಿಕೆ ನೀಡಿದ ಬೆನ್ನಲ್ಲೇ, ಡಿನ್ನರ್‌ ಮೀಟಿಂಗ್‌ ಹಾಗೂ ಸಿಎಂ ಬದಲಾವಣೆ ಕುರಿತ ಚರ್ಚೆಗೆ ಗರಂ ಆದ ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ| ಎಚ್‌.ಸಿ. ಮಹದೇವಪ್ಪ ಅವರು ಊಹಾಪೋಹಗಳಿಗೆ ಮಹತ್ವ ಕೊಡುವ ಅಗತ್ಯವಿಲ್ಲ ಎಂದು ವಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ.

Advertisement

ತಮ್ಮ ಮನೆಯಲ್ಲಿ ಮಂಗಳವಾರ ರಾತ್ರಿ ದಲಿತ ಸಚಿವತ್ರಯರ “ಡಿನ್ನರ್‌ ಮೀಟಿಂಗ್‌’ ಹಾಗೂ ಸಿಎಂ ಬದಲಾ ವಣೆ ಸಂಬಂಧ ಸುದ್ದಿಗಾರರ ಪ್ರಶ್ನೆಗೆ ಕೆಂಡಾ ಮಂಡಲವಾದ ಎಚ್‌.ಸಿ. ಮಹದೇವಪ್ಪ, ಸಿಎಂ ಬದಲಾವಣೆ ಆಗುತ್ತಾರೆ ಎಂದವರು ಯಾರು? ಬಿಜೆಪಿಯವರಿಗೆ ಹಾಗೂ ಜೆಡಿಎಸ್‌ನವರಿಗೆ ರಾಜ್ಯ ಸರಕಾರಕ್ಕೂ ಏನು ಸಂಬಂಧ ಎಂದು ಪ್ರಶ್ನಿಸಿದರು.

ಸಿಎಂ ಬದಲಾಗುತ್ತಾರೆ ಎನ್ನಲು ವಿಜಯೇಂದ್ರ ಯಾರು? ಅವರಿಗೆ ಕಾಂಗ್ರೆಸ್‌ ಜಿಪಿಎ ಕೊಟ್ಟವರು ಯಾರು? ಬಿಜೆಪಿಯರಿಗೆ ಮಾಡಲು ಕೆಲಸ ಇಲ್ಲ. ದಿನ ಬೆಳಗಾದರೆ ಏನೇನೋ ಹೇಳುತ್ತಾರೆ. ಅದಕ್ಕೆಲ್ಲ ನೀವ್ಯಾಕೆ ಪ್ರಾಮುಖ್ಯ ನೀಡು ತ್ತೀರಿ? ನಿಮ್ಮ ಉದ್ದೇಶವೇನು ಎಂದು ಸುದ್ದಿಗಾರರ ವಿರುದ್ಧವೇ ಕಿಡಿಕಾರಿದರು.

ಸಿಎಂ ಬದಲಾವಣೆ ಇಲ್ಲ
ಸಿದ್ದರಾಮಯ್ಯ ಮುಖ್ಯ ಮಂತ್ರಿ ಆಗಿದ್ದಾರೆ. ಕಾಂಗ್ರೆಸ್‌ನಲ್ಲಿ ಸಿಎಂ ಬದಲಾವಣೆ ಬಗ್ಗೆ ಯಾವ ಚರ್ಚೆಯೂ ನಡೆದಿಲ್ಲ. ಊಹಾಪೋಹಗಳಿಗೆ ಮಹತ್ವ ಕೊಡುವ ಅಗತ್ಯವಿಲ್ಲ ಎಂದ ಮಹದೇವಪ್ರಸಾದ್‌, ಮೈಸೂರು ಅತಿಥಿ ಸತ್ಕಾರಕ್ಕೆ ಹೆಸರುವಾಸಿಯಾಗಿದೆ. ದಸರಾ ಅಂದ ಮೇಲೆ ಸಚಿವರು ಒಂದಿಲ್ಲೊಂದು ಕಾರ್ಯಕ್ರಮಕ್ಕೆ ಬರುತ್ತಾರೆ. ಹೀಗೆ ಒಟ್ಟಿಗೆ ಸೇರಿ ಊಟ ಮಾಡಿದ್ದೇವೆ.

ಇದರಲ್ಲಿ ತಪ್ಪೇನು? ನನ್ನ ಪುತ್ರ ಸುನಿಲ್‌ ಬೋಸ್‌ ಮೊದಲ ಬಾರಿಗೆ ಸಂಸದರಾಗಿರುವ ಹಿನ್ನೆಲೆ ಯಲ್ಲಿ ಪಕ್ಷದ ಹಿರಿಯರಿಗೆ ಭೋಜನ ಕೂಟ ಏರ್ಪಡಿಸಿದ್ದರು. ಹೀಗಾಗಿ ಕೂಟದಲ್ಲಿ ನಾನು, ನನ್ನ ಸಹೋದ್ಯೋಗಿ ಮಿತ್ರರಾದ ಡಾ| ಜಿ. ಪರಮೇಶ್ವರ್‌, ಸತೀಶ್‌ ಜಾರಕಿಹೊಳಿ ಒಟ್ಟಿಗೆ ಊಟ ಮಾಡಿದ್ದೆವು. ಇದಕ್ಕೆ ಬೇರೆ ಅರ್ಥ ಕಲ್ಪಿಸಬೇಕಾಗಿಲ್ಲ ಎಂದರು.

Advertisement

ಡಾ| ಪರಮೇಶ್ವರ್‌ ಅರಮನೆ ಆವರಣದಲ್ಲಿ ಏರ್ಪಡಿಸಿದ್ದ ಪೊಲೀಸ್‌ ಬ್ಯಾಂಡ್‌ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಹಾಗೆಯೇ ಸತೀಶ್‌ ಜಾರಕಿಹೊಳಿ ಮೈಸೂ ರಿಗೆ ಆಗಮಿಸಿದ್ದರು. ಇದೇ ಸಂದರ್ಭ ರಸ್ತೆ, ಕುಡಿಯುವ ನೀರು ಅಂತ ಬೇರೆ ಬೇರೆ ಕೆಲಸಕ್ಕೆ ಶಾಸಕರನ್ನು ಭೇಟಿಯಾಗಿದ್ದಾರೆ ಅಷ್ಟೇ ಎಂದು ತಮ್ಮ ನಿವಾಸದಲ್ಲಿ ಸಚಿವತ್ರಯರ ಡಿನ್ನರ್‌ ಮೀಟಿಂಗ್‌ನ ರಹಸ್ಯವನ್ನು ಬಿಟ್ಟು ಕೊಡಲಿಲ್ಲ.

ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ: ಗೃಹ ಸಚಿವ ಪರಮೇಶ್ವರ್‌
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಐದು ವರ್ಷ ಸಿಎಂ ಆಗಿರುತ್ತಾರೆ. ಅವರನ್ನು ಬದಲಾಯಿಸುವ ಪ್ರಶ್ನೆಯೇ ಇಲ್ಲ ಎಂದು ಗೃಹ ಸಚಿವ ಡಾ| ಜಿ.ಪರಮೇಶ್ವರ್‌ ಸ್ಪಷ್ಟಪಡಿಸಿದ್ದಾರೆ. ಬುಧವಾರ ಸುದ್ದಿಗಾರರೊಂದಿಗೆ ಸಚಿವ ಮಹದೇವಪ್ಪ ಅವರ ನಿವಾಸದಲ್ಲಿ “ಡಿನ್ನರ್‌ ಮೀಟಿಂಗ್‌’ ಕುರಿತು ಪ್ರತಿಕ್ರಿಯಿಸಿ, ಅಲ್ಲಿ ಊಟ ಮಾಡಿದ್ದೇವೆಯೇ ಹೊರತು ಯಾವ ಸಭೆಯನ್ನೂ ಮಾಡಿಲ್ಲ. ಇದಕ್ಕೆ ಯಾವುದೇ ಅರ್ಥ ಕಲ್ಪಿಸುವ ಅಗತ್ಯ ಇಲ್ಲ.

ಭೋಜನ ಕೂಟದಲ್ಲಿ ಸತೀಶ್‌ ಜಾರಕಿಹೊಳಿ, ಮಹದೇವಪ್ಪ, ಶಾಸಕ ಎ.ಆರ್‌.ಕೃಷ್ಣಮೂರ್ತಿ ಇದ್ದೆವು. ಈ ವೇಳೆ ಯಾವುದೇ ರಾಜಕೀಯ ಚರ್ಚೆ ಆಗಿಲ್ಲ. ನಿಮಗೆ ಸಿಎಂ ಆಗುವ ಆಸೆ ಇಲ್ಲವೇ ಎಂಬ ಪ್ರಶ್ನೆಗೆ, ಅದರ ಪ್ರಶ್ನೆಯೇ ಇಲ್ಲ. ದಲಿತ ಸಿಎಂ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ ಎಂದರು.

ಸಚಿವರು ರಾಜಕೀಯ ಸಭೆ ನಡೆಸಿಲ್ಲ: ಜಮೀರ್‌
ಬಳ್ಳಾರಿ: ಮೈಸೂರು ದಸರಾ ಹಬ್ಬದ ಹಿನ್ನೆಲೆಯಲ್ಲಿ ಗೃಹ ಸಚಿವ ಡಾ| ಜಿ. ಪರಮೇಶ್ವರ್‌ ಮತ್ತು ಸಚಿವ ಸತೀಶ್‌ ಜಾರಕಿಹೊಳಿ ಅವರು ಸಚಿವ ಮಹದೇವಪ್ಪ ಮನೆಗೆ ಊಟಕ್ಕೆ ತೆರಳಿದ್ದಾರೆಯೇ ಹೊರತು ಅಲ್ಲಿ ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ ಎಂದು ವಸತಿ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಸ್ಪಷ್ಟಪಡಿಸಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ಮೈಸೂರು ದಸರಾ ಹಬ್ಬದಲ್ಲಿ ಡಾ| ಜಿ.ಪರಮೇಶ್ವರ್‌ ಹಾಗೂ ಸತೀಶ್‌ ಜಾರಕಿಹೊಳಿ ಭಾಗಿಯಾಗಿದ್ದರು. ಬಳಿಕ ಎಚ್‌.ಸಿ.ಮಹದೇವಪ್ಪ ಅವರ ಮನೆಗೆ ಊಟಕ್ಕೆ ಹೋಗಿದ್ದಾರೆ. ಅಲ್ಲಿ ಯಾವುದೇ ರಾಜಕೀಯ ಉದ್ದೇಶ ಇರಲಿಲ್ಲ ಎಂದರು.

ತೆರೆಮರೆ ಚಟುವಟಿಕೆ: 
ಮುಖ್ಯಮಂತ್ರಿ ಸಿದ್ದರಾಮಯ್ಯ ಬಗ್ಗೆ ವಿಶ್ವಾಸ ಇಲ್ಲದ ಕಾರಣಕ್ಕೆ ಅವರನ್ನು ಕುರ್ಚಿಯಿಂದ ಕೆಳಗಿಳಿಸಲು ಕಾಂಗ್ರೆಸ್‌ನಲ್ಲೇ ಟೀ ಪಾರ್ಟಿ, ಬ್ರೇಕ್‌ಫಾಸ್ಟ್‌ ಪಾರ್ಟಿ, ಡಿನ್ನರ್‌ ಪಾರ್ಟಿ ಮೂಲಕ ತೆರೆಮರೆಯ ಚಟುವಟಿಕೆ ಜೋರಾಗಿ ನಡೆಯುತ್ತಿದೆ.
– ಸಿ.ಟಿ.ರವಿ, ಬಿಜೆಪಿ ವಿಧಾನ ಪರಿಷತ್‌ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next