Advertisement
Related Articles
ತ್ರಿವಿಧ ದಾಸೋಹಿ ಡಾ. ಶಿವಕುಮಾರ ಸ್ವಾಮೀಜಿ ಅವರ ಕಾಯಕವನ್ನು ವಿಶ್ವವೇ ಕೊಂಡಾಡುತ್ತಿದೆ. ಹಾಗಿದ್ದರೂ ಅವರ ಹುಟ್ಟೂರು ಇಂದಿಗೂ ಕುಗ್ರಾಮವಾಗಿಯೇ ಉಳಿದಿದೆ. ಡಾ. ಶಿವಕುಮಾರ ಸ್ವಾಮೀಜಿ ಅವರು ಗಂಗಮ್ಮ- ಹೊನ್ನೇಗೌಡರ ಕೊನೆಯ 13ನೇ ಪುತ್ರ. ಶ್ರೀಗಳೊಂದಿಗೆ ಹುಟ್ಟಿದ 7 ಮಂದಿ ಸಹೋದರರು, 5 ಸಹೋದರಿಯರು ಎಲ್ಲರೂ ಲಿಂಗೈಕ್ಯರಾಗಿದ್ದಾರೆ. ಈ ಊರಿನಲ್ಲಿ ಶ್ರೀಗಳ ಹೆಸರಿಗೆ 8 ಎಕರೆ ಜಮೀನು ಇತ್ತು. ಅದನ್ನು ಮಠದ ಹೆಸರಿಗೆ ದಾನ ನೀಡಲಾಗಿದೆ. ಸ್ವಾಮೀಜಿ ಅವರ ಐದು ಕುಂಟುಂಬಗಳು ಊರಲ್ಲಿ ನೆಲೆ ನಿಂತಿವೆ.
Advertisement
ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ, ಡಾ. ಶಿವಕುಮಾರ ಸ್ವಾಮೀಜಿ ಅವರ ಹುಟ್ಟೂರು ವೀರಾಪುರ ಗ್ರಾಮವನ್ನು ದತ್ತು ಪಡೆದು ಅಭಿವೃದ್ಧಿಪಡಿಸುವುದಾಗಿ ಭರವಸೆ ನೀಡಿದ್ದರು. ಇಂದಿಗೂ ಆ ಮಾತು ಕೇವಲ ಭರವಸೆಯಾಗಿಯೇ ಉಳಿದಿದೆ. ಇದಕ್ಕೂ ಮೊದಲು ಸಚಿವರಾಗಿದ್ದ ಸೋಮಣ್ಣ ಸಹ ಒಮ್ಮೆ ವೀರಾಪುರಕ್ಕೆ ಭೇಟಿ ನೀಡಿ ವಾಗ್ಧಾನ ನೀಡಿದ್ದರು. ಅದೂ ವಾಗ್ಧಾನವಾಗಿಯೇ ಉಳಿದಿದೆ. ವೀರಾಪುರದಲ್ಲಿ ಕುಡಿಯುವ ನೀರಿನ ಕೊರತೆ ಇಲ್ಲ. ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘವಿದೆ. ಶುದ್ಧ ಕುಡಿಯುವ ನೀರಿನ ಘಟಕವೂ ಇದೆ.
ಶಿವಕುಮಾರ ಸ್ವಾಮೀಜಿಗಳ ಅಕ್ಕನ ಮಗ ಪಟೇಲ್ ಸದಾಶಿವಯ್ಯ ಕೂಡ ಶತಾಯುಷಿಯೇ. ಸ್ವಾಮಿಗಳು ಏ.1ರಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರೆ, ಇವರು ಏ.8ಕ್ಕೆ ಆಚರಿಸಿಕೊಳ್ಳಲಿದ್ದಾರೆ. ಏ.1ಕ್ಕೆ ಶ್ರೀಗಳ ಹುಟ್ಟುಹಬ್ಬವನ್ನು ವೀರಾಪುರದಲ್ಲಿ ಅದ್ದೂರಿಯಾಗಿ ಆಚರಿಸಲು ಸಕಲ ಸಿದ್ದತೆ ನಡೆಯುತ್ತಿದೆ.
ಶಿವಕುಮಾರ ಸ್ವಾಮೀಜಿಗೆ ತಾಯಿಯ ಕಡೆಯಿಂದ ಆಗಿರುವ ಪ್ರಭಾವ ಹೆಚ್ಚು. ಅವರು ಆಗಾಗ್ಗೆ ಶಿವಗಂಗೆಗೆ ಹೋಗುತ್ತಿದ್ದರು. ಅವರ ಜೊತೆಯಲ್ಲಿ ಶಿವಣ್ಣ ಕೂಡು ಹೋಗುತ್ತಿದ್ದರಂತೆ. ಹೀಗಾಗಿ ಅವರಿಗೆ ತಾಯಿಯ ಕಡೆಯಿಂದಲೇ ಅಧ್ಯಾತ್ಮದ ಸೆಳೆತ ಉಂಟಾಗಿದೆ ಎಂದು ಊರಿನವರು ಅಭಿಪ್ರಾಯ ಪಡುತ್ತಾರೆ. ಊರಿನ ಮಧ್ಯೆ ಶಿವಕುಮಾರ ಸ್ವಾಮೀಜಿ ಅವರು ಹುಟ್ಟಿದ ಮನೆ ಇದೆ. ಆದರೆ, ಮೂಲ ರೂಪದಲ್ಲಿ ಇಲ್ಲ. ಅವರ ಮೊಮ್ಮಕ್ಕಳು ಆ ಜಾಗದಲ್ಲಿ ಹೊಸ ಮನೆ ಕಟ್ಟಿದ್ದಾರೆ. ಶ್ರೀಗಳ ಅಣ್ಣ ಪುಟ್ಟಹೊನ್ನಯ್ಯ ಅವರ ವಾಸವಿದ್ದ ಮಂಗಳೂರು ಹೆಂಚಿನ, ಕೈಸಾಲೆ ಮನೆ ಈಗಲೂ ಹಾಗೇ ಇದೆ.
ಊರಿಗೆ ಊರೇ ಹೋಗುತ್ತದೆ…ಸ್ವಾಮೀಜಿಗಳು ಪಾದಪೂಜೆಗಾಗಿ ಆಗಾಗ ಊರಿಗೆ ಬರುವ ಪರಿಪಾಠ ಇಟ್ಟುಕೊಂಡಿದ್ದಾರೆ. ಊರಿನವರು ಕೂಡ ಸ್ವಾಮೀಜಿಗಳನ್ನು ನೋಡಲು, ಮಾತನಾಡಿಸಲು ಆಗಾಗ ಸಿದ್ದಗಂಗೆಗೆ ಹೋಗುವುದು ಉಂಟು. ಅದರಲ್ಲೂ ಶಿವರಾತ್ರಿಯ ಸಂದರ್ಭದಲ್ಲಿ ಜರುಗುವ ಜಾತ್ರೆಗೆ ಇಡೀ ಊರಿನವರೆಲ್ಲಾ ಸಿದ್ದಗಂಗೆಯಲ್ಲಿ ಮೂರು ದಿನಗಳ ಕಾಲ ಇದ್ದು, ಭಾಗವಹಿಸುತ್ತಾರೆ. ಇಡೀ ಹಳ್ಳಿ ಸುತ್ತು ಹಾಕಿದರೆ ನೀರನ್ನು ಹೊರತಾಗಿ ಮೂಲ ಸೌಕರ್ಯಗಳ ಕೊರತೆ ಇದೆ. ಸಿದ್ದಗಂಗಾ ಸ್ವಾಮಿಗಳ ಪೂರ್ವಾಶ್ರಮದ ಊರು ಅನ್ನೋದು ಬಿಟ್ಟರೆ, ಇಲ್ಲಿ ವಿಶೇಷವಾದ ಸೌಲಭ್ಯಗಳೇನೂ ಇಲ್ಲ. ರಸ್ತೆ, ಬಸ್ಸಿನ ಸಮಸ್ಯೆ ಹಾಗೇ ಇದೆ. ವಿಶ್ವಮಾನ್ಯ ಸ್ವಾಮೀಜಿ ಅವರು ಊರು ಅಂತ ಹೇಳಲು ಯಾವುದೇ ಫಲಕಗಳು ಕಾಣುವುದಿಲ್ಲ. ಇಂಥ ಕೊರತೆಗಳ ಮಧ್ಯೆಯೂ ಸ್ವಾಮೀಜಿಯ ಊರು ಅನ್ನೋ ಕೌತುಕದಿಂದ ಪ್ರವಾಸಿಗರು ಬರುವುದು ಉಂಟು. – ತಿರುಮಲೆ ಶ್ರೀನಿವಾಸ್