Advertisement

ಕ್ಷೀಣಿಸುತ್ತಿದೆ ಸಿದ್ಧಗಂಗಾ ಶ್ರೀಗಳ ಆರೋಗ್ಯ

01:30 AM Jan 18, 2019 | Team Udayavani |

ತುಮಕೂರು: ತ್ರಿವಿಧ ದಾಸೋಹಿ, ಸಿದ್ಧಗಂಗಾ ಮಠದ ಹಿರಿಯ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಆರೋಗ್ಯದಲ್ಲಿ ಕ್ಷಣ ಕ್ಷಣಕ್ಕೂ ವ್ಯತ್ಯಾಸವಾಗುತ್ತಿರುವ ಹಿನ್ನೆಲೆಯಲ್ಲಿ ಭಕ್ತರಲ್ಲಿ ಆತಂಕ ಹೆಚ್ಚಾಗುತ್ತಿದೆ. ಈ ನಡುವೆ ಗುರುವಾರ ಸಂಜೆ ಮಠಕ್ಕೆ ಭೇಟಿ ನೀಡಿದ ಬೆಂಗಳೂರು ಬಿಜಿಎಸ್‌ ಆಸ್ಪತ್ರೆ ವೈದ್ಯ ಡಾ.ರವೀಂದ್ರ ಶ್ರೀಗಳ ಆರೋಗ್ಯ ತಪಾಸಣೆ ಮಾಡಿದರು.

Advertisement

ನಂತರ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿ, ಶ್ರೀಗಳ ಆರೋಗ್ಯ ಯಥಾಸ್ಥಿತಿಯಲ್ಲಿದೆ. ಬೇರೆ ಏನೂ ಬದಲಾವಣೆಯಾಗಿಲ್ಲ ಎಂದರು.

ವೈದ್ಯ ಲೋಕಕ್ಕೇ ಸವಾಲು: ಶ್ರೀಗಳ ದೇಹದಲ್ಲಿ ಪ್ರೊಟೀನ್‌ ಅಂಶ ಕಡಿಮೆಯಾಗುತ್ತಲೇ ಇದೆ. ಈಗ ಅವರ ದೇಹದಲ್ಲಿ 2.7 ಮತ್ತು 2.8 ಪ್ರೋಟಿನ್‌ ಅಂಶವಿದೆ. ಶ್ವಾಸಕೋಶದಲ್ಲಿ ಮತ್ತು ಹೊಟ್ಟೆಯಲ್ಲಿ ನೀರು ತುಂಬಿಕೊಳ್ಳುವುದು ಮುಂದುವರಿದಿದೆ. ನೀರು ತುಂಬಿಕೊಂಡಾಗ ಶ್ರೀಗಳ ಉಸಿರಾಟದಲ್ಲಿ ತೊಂದರೆ ಉಂಟಾಗುತ್ತದೆ. ಕಳೆದ ಹತ್ತು ದಿನಗಳ ಹಿಂದೆ ಇದ್ದ ಆರೋಗ್ಯ ಗುರುವಾರ ಇಲ್ಲ ಎಂದರು.

ಶ್ವಾಸಕೋಶದಲ್ಲಿ ನೀರು ತುಂಬುತ್ತಿರುವುದರಿಂದ ಆಗಿಂದಾಗ್ಗೆ ತೆಗೆಯಲಾಗುತ್ತಿದೆ. ಶ್ರೀಗಳು
ಆಸ್ಪತ್ರೆಯಲ್ಲಿದ್ದ ರೀತಿಯಲ್ಲಿಯೇ ಇದ್ದಾರೆ. ಏನೂ ಬದಲಾವಣೆಯಾಗಿಲ್ಲ. 111 ವರ್ಷ ವಯೋಮಾನದ
ಶ್ರೀಗಳ ಆರೋಗ್ಯದ ಬಗ್ಗೆ ಏನೂ ಹೇಳಲು ಆಗುವುದಿಲ್ಲ. ಇದು ವೈದ್ಯ ಲೋಕಕ್ಕೇ ಸವಾಲು ಎಂದು
ನುಡಿದರು.

ಗಣ್ಯರ ಭೇಟಿ: ಗುರುವಾರ ಬೆಳಗ್ಗೆ ಡಿಸಿಎಂ ಪರಮೇಶ್ವರ್‌, ಗೃಹಸಚಿವ ಎಂ.ಬಿ.ಪಾಟೀಲ್‌, ಕೆಪಿಸಿಸಿ
ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಎಐಸಿಸಿ ಕಾರ್ಯದರ್ಶಿ ವೇಣುಗೋಪಾಲ್‌, ವೀರಣ್ಣ ಮತ್ತಿಕಟ್ಟಿ, ಚಿತ್ರದುರ್ಗ ಮಠದ ಮುರುಘಾ ಶರಣರು, ಮಾಜಿ ಸಿಎಂಗಳಾದ ಬಿ.ಎಸ್‌.ಯಡಿಯೂರಪ್ಪ, ಜಗದೀಶ ಶೆಟ್ಟರ್‌, ಮಾಜಿ ಸಚಿವ ಬಿ.ಸೋಮಣ್ಣ ಸೇರಿ ಹಲವಾರು ಮುಖಂಡರು, ವಿವಿಧ ಮಠಗಳ ಸ್ವಾಮೀಜಿಗಳು ಬಂದು ಶ್ರೀಗಳ ದರ್ಶನ ಪಡೆದರು.

Advertisement

ಶ್ರೀಗಳ ಆರೋಗ್ಯ ಸ್ಥಿರ-ಡಿಸಿಎಂ: ಶ್ರೀ ಶಿವಕುಮಾರ ಸ್ವಾಮೀಜಿ ಆರೋಗ್ಯ ಸ್ಥಿರವಾಗಿದ್ದು, ಆಸ್ಪತ್ರೆಯಲ್ಲಿನ ಆರೋಗ್ಯ ಪರಿಸ್ಥಿತಿಯೇ ಮುಂದುವರಿದಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ತಿಳಿಸಿದರು.

ನಗರದ ಸಿದಟಛಿಗಂಗಾ ಮಠದಲ್ಲಿ ಶ್ರೀಗಳ ಆರೋಗ್ಯ ಕುರಿತು ವೈದ್ಯರು ಮತ್ತು ಕಿರಿಯ ಶ್ರೀಗಳೊಂದಿಗೆ ಸಮಾಲೋಚನೆ ನಡೆಸಿ, ಶ್ರೀಗಳ ಆರೋಗ್ಯ ವಿಚಾರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಶ್ರೀಗಳ ಆರೋಗ್ಯ ಪರಿಸ್ಥಿತಿ ಯಥಾಸ್ಥಿತಿಯಲ್ಲಿದೆ. ಆಸ್ಪತ್ರೆಯಿಂದ ಸ್ಥಳಾಂತರವಾದಾಗ ಇದ್ದ ಸ್ಥಿತಿಯೇ ಈಗಲೂ ಇದೆ. ಆರೋಗ್ಯದಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ ಎಂದರು. ಶ್ರೀಗಳು ರಾತ್ರಿ ಕಣ್ಣು ಬಿಟ್ಟು ನೋಡಿದರು ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ನಾನೂ ವೈದ್ಯರ ಜತೆ ಚರ್ಚಿಸಿದ್ದೇನೆ ಎಂದ ಅವರು, ಶ್ರೀಗಳು ಆದಷ್ಟು ಬೇಗ ಗುಣಮುಖರಾಗಬೇಕು ಎಂಬುದು ನಮ್ಮೆಲ್ಲರ ಆಶಯವಾಗಿದೆ ಎಂದರು. ಗೃಹ ಸಚಿವ ಎಂ.ಬಿ.ಪಾಟೀಲ್‌ ಕೂಡ ಸಿದಟಛಿಗಂಗಾ ಮಠದ ಹಳೆಯ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆರೋಗ್ಯ ವಿಚಾರಿಸಿ, ವೈದ್ಯರಿಂದ ಮಾಹಿತಿ ಪಡೆದುಕೊಂಡರು.

ಏರುಪೇರು ಕಂಡುಬಂದಿಲ್ಲ-ಡಾ.ಪರಮೇಶ್‌
ಸ್ವಾಮೀಜಿ ಆರೋಗ್ಯದಲ್ಲಿ ಯಾವುದೇ ರೀತಿಯ ಏರುಪೇರು ಕಂಡು ಬರುತ್ತಿಲ್ಲ ಎಂದು ಶ್ರೀಗಳ ಆಪ್ತ ವೈದ್ಯ ಡಾ.ಪರಮೇಶ್‌ ತಿಳಿಸಿದರು. ಸಿದಟಛಿಗಂಗಾ ಮಠದಲ್ಲಿ ಶ್ರೀಗಳ ಆರೋಗ್ಯದ ಬಗ್ಗೆ ಗುರುವಾರ ಸುದ್ದಿಗಾರರಿಗೆ ಮಾಹಿತಿ ನೀಡಿ, ಬುಧವಾರ ರಾತ್ರಿ ರಕ್ತದೊತ್ತಡ, ಹಾರ್ಟ್‌ಬೀಟ್‌ನಲ್ಲಿ ಕೊಂಚ ಏರುಪೇರಾಗಿತ್ತು. ಇದಕ್ಕೆ ಪೂರಕವಾಗಿ ಚಿಕಿತ್ಸೆ ನೀಡಿದ್ದರಿಂದ ಈಗ ಶ್ರೀಗಳ ಆರೋಗ್ಯ ಸ್ಥಿರವಾಗಿದೆ ಎಂದರು.

ಗುರುವಾರ ಬೆಳಗ್ಗೆ ರಕ್ತ ಪರೀಕ್ಷೆ ನಡೆಸಿದ್ದು, ಶ್ವಾಸಕೋಶದ ಸೋಂಕು ಕಡಿಮೆಯಾಗಿದೆ. ಆದರೆ,
ಶರೀರದಲ್ಲಿ ಪ್ರೋಟಿನ್‌ ಅಂಶ ಮಾತ್ರ ಹೆಚ್ಚಳವಾಗುತ್ತಿಲ್ಲ. ಪ್ರೋಟಿನ್‌ ಅಂಶ ಬೇಗ ಉತ್ಪತ್ತಿಯಾದರೆ ಶ್ರೀಗಳು ಶೀಘ್ರವಾಗಿ ಗುಣಮುಖರಾಗುತ್ತಾರೆ. ಪ್ರೋಟಿನ್‌ ಅಂಶ ಉತ್ಪತ್ತಿಯಾಗದಿದ್ದರೆ ಚೇತರಿಕೆ ವಿಳಂಬವಾಗುವ ಸಾಧ್ಯತೆಯಿದೆ ಎಂದರು. ಶ್ರೀಗಳಿಂದ ಇಷ್ಟಲಿಂಗ ಪೂಜೆ ಮಾಡಲು ಸಾಧ್ಯವಾಗಿಲ್ಲ. ಬದಲಾಗಿ ಕಿರಿಯ ಶ್ರೀಗಳೇ ಐಸಿಯು ಕೊಠಡಿಯಲ್ಲೇ ಕುಳಿತು ಇಷ್ಟಲಿಂಗ ಪೂಜೆ
ನೆರವೇರಿಸಿದ್ದಾರೆ ಎಂದು ಮಾಹಿತಿ ನೀಡಿದರು.

ಆರೋಗ್ಯ ವಿಚಾರಿಸಿದ ಬಿಎಸ್‌ವೈ: ಸಿದಟಛಿಗಂಗಾ ಮಠಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಭೇಟಿ ನೀಡಿ ಶ್ರೀಗಳ ಆರೋಗ್ಯ ವಿಚಾರಿಸಿದರು. ಶ್ರೀಕ್ಷೇತ್ರದ ಹಳೇಮಠದ ಕೊಠಡಿಗೆ ಶಾಸಕ ಎಸ್‌.ಸುರೇಶ್‌ ಕುಮಾರ್‌, ಬಿ.ವೈ. ವಿಜಯೇಂದ್ರರ ಜತೆ ತೆರಳಿದ ಯಡಿಯೂರಪ್ಪ, ಶ್ರೀಗಳ ದರ್ಶನ ಪಡೆದು ಆರೋಗ್ಯ ವಿಚಾರಿಸಿದರು. ಹಳೇಮಠದ ಕೊಠಡಿಯಲ್ಲಿ ಶ್ರೀಗಳಿಗೆ ಚಿಕಿತ್ಸೆ ನೀಡುತ್ತಿರುವ ಸಿದಟಛಿಗಂಗಾ ಆಸ್ಪತ್ರೆ ವೈದ್ಯರು, ಕಿರಿಯ ಶ್ರೀಗಳಾದ ಶ್ರೀ ಸಿದಟಛಿಲಿಂಗ ಸ್ವಾಮೀಜಿ ಅವರೊಂದಿಗೆ ಚಿಕಿತ್ಸೆ ಕುರಿತು ಮಾಹಿತಿ ಪಡೆದು ಚರ್ಚಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ, “ಶ್ರೀಗಳು ಇಚ್ಛಾಮರಣಿ. ಅವರು ಆರೋಗ್ಯದ ಬಗ್ಗೆ ಅವರೇ ತೀರ್ಮಾನ ತೆಗೆದುಕೊಳ್ಳಬೇಕು. ಅವರಆರೋಗ್ಯ ಸುಧಾರಿಸುವಂತೆ ದೇವರಲ್ಲಿ ಪ್ರಾರ್ಥಿಸುತ್ತೇನೆ’ ಎಂದು ಹೇಳಿದರು.

ಸಂಜೆ ಸುತ್ತೂರು ಶ್ರೀಗಳು ಆಗಮಿಸುತ್ತಾರೆ. ಅವರು ಬಂದ ಮೇಲೆ ಶ್ರೀಗಳಿಗೆ ಇನ್ನು ಮುಂದೆ ಯಾವ ರೀತಿ ಚಿಕಿತ್ಸೆ ಕೊಡಬೇಕು ಎಂಬುದರ ಬಗ್ಗೆ ಚರ್ಚೆ ನಡೆಸುವುದಾಗಿ ಹೇಳಿದರು. ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌, ಮಾಜಿ ಸಚಿವ ವಿ.ಸೋಮಣ್ಣ, ಮಾಜಿ ಸಚಿವ ಸೊಗಡು ಶಿವಣ್ಣ, ಮಾಜಿ ಶಾಸಕ ಬಿ.ಸುರೇಶ್‌ ಗೌಡ, ಮತ್ತಿತರರು ಶ್ರೀಗಳ ಆರೋಗ್ಯ ವಿಚಾರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next