Advertisement

ನೆರೆ ಹಾವಳಿಯಿಂದ ಕರ್ನಾಟಕ ನಲುಗಿ ಹೋದರೂ ಸರಕಾರ ಮಾತ್ರ ಕಣ್ಣು ಮುಚ್ಚಿ ಕುಳಿತಿದೆ: ಸಿದ್ದು

08:27 PM Oct 17, 2020 | sudhir |

ಬೆಂಗಳೂರು : ನೆರೆ ಹಾವಳಿಯಿಂದಾಗಿ ಕಲ್ಯಾಣ ಕರ್ನಾಟಕ ನಲುಗಿ ಹೋಗಿದ್ದರೂ ಸಂತ್ರಸ್ತರ ಮೊರೆ ಆಲಿಸಬೇಕಾದ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಪ್ರವಾಹದಿಂದ ಕಲ್ಯಾಣ ಕರ್ನಾಟಕ ಕೊಚ್ಚಿ ಹೋಗುತ್ತಿದೆ. ಜನ ತಮ್ಮ ಜೀವ ಉಳಿದರೆ ಸಾಕು ಎಂದು ಒದ್ದಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸಂತ್ರಸ್ತ್ರರ ಮೊರೆ ಆಲಿಸಬೇಕಾದ, ಅವರಿಗೆ ಸಾಂತ್ವನ ಹೇಳಬೇಕಾದ ಸಚಿವರುಗಳು ನಾಪತ್ತೆಯಾಗಿದ್ದಾರೆ. ಕೆಲ ಸಚಿವರು ಉಪ ಚುನಾವಣೆಯಲ್ಲಿ ಮುಳುಗಿ ಹೋಗಿದ್ದಾರೆ. ಸರ್ಕಾರ ಭ್ರಷ್ಟಾಚಾರದಲ್ಲಿ ನಿರತವಾಗಿ ಪ್ರವಾಹದ ಬಗ್ಗೆ ಮೈ ಮರೆತಿದೆ ಎಂದು ಅವರು ಟೀಕಿಸಿದ್ದಾರೆ.

ಇಂದು ತಮ್ಮನ್ನು ಭೇಟಿಯಾದ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಸಿದ್ದರಾಮಯ್ಯ ಅವರು, ಇನ್ನಾದರೂ ಸರ್ಕಾರ ಪ್ರವಾಹ ಸಂತ್ರಸ್ತ್ರರನ್ನು ಕಣ್ತೆರೆದು ನೋಡಲಿ. ಕೂಡಲೇ ಅವರ ನೆರವಿಗೆ ಧಾವಿಸಲಿ. ಕೊರೊನಾ ನೆಪ ಹೇಳಿ ಜಿಲ್ಲಾ ಉಸ್ತುವಾರಿ ಸಚಿವರುಗಳು ಬೆಂಗಳೂರಿನಲ್ಲಿ ಸಭೆಗಳನ್ನು ನಡೆಸುವುದನ್ನು ಬಿಟ್ಟು ನೆರೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ಕೊಟ್ಟು ನೊಂದವರಿಗೆ ಧೈರ್ಯ ತುಂಬುವ ಕೆಲಸ ಮಾಡಲಿ ಎಂದರು.

ಇದನ್ನೂ ಓದಿ:ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಪರವಾದ ಅಲೆ ನಿರ್ಮಾಣವಾಗುತ್ತಿದೆ : ಡಿಕೆಶಿ

ಸಿದ್ದರಾಮಯ್ಯ ಅವರು ಹೇಳಿದ್ದಿಷ್ಟು :
ನರೇಂದ್ರ ಮೋದಿಯವರು ಕರ್ನಾಟಕಕ್ಕೆ ಸಕಲ ನೆರವು ಎಂದು ಬಾಯಿ ಮಾತಿನಲ್ಲಿ ಹೇಳುತ್ತಾರೆ. ರಾಜ್ಯ ಸರ್ಕಾರ ಹಲವು ಬಾರಿ ಮನವಿ ಸಲ್ಲಿಸಿದರೂ ಕೇಂದ್ರ ಕವಡೆ ಕಾಸಿನ ಕಿಮ್ಮತ್ತು ನೀಡಿಲ್ಲ.

Advertisement

ಅತಿವೃಷ್ಟಿಯಿಂದಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ 10-15 ಸಾವಿರ ಕೋಟಿ ರೂ. ನಷ್ಟವಾಗಿದೆ. ಈ ರೀತಿಯ ದಪ್ಪ ಚರ್ಮದ ಸರ್ಕಾರವನ್ನು ಎಂದೂ ನೋಡಿಲ್ಲ. ಪ್ರವಾಹದ ಬಗ್ಗೆ ಮುಂಜಾಗ್ರತೆ ವಹಿಸುವಂತೆ ಮೊದಲೇ ಹೇಳಿದ್ದರೂ ಸರ್ಕಾರ ಕಿವಿಗೊಡಲಿಲ್ಲ. ನಮ್ಮ ಸಲಹೆಗಳನ್ನು ಗಂಭೀರವಾಗಿಯೂ ಪರಿಗಣಿಸುವುದಿಲ್ಲ. ಎಷ್ಟೇ ಪತ್ರ ಬರೆದರೂ ಉತ್ತರ ನೀಡುವುದಿಲ್ಲ.

ಮಂತ್ರಿಗಳು ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದ್ದಾರೆ. ಹಣ ಮಾಡುವುದರಲ್ಲಿಯೇ ಅವರು ಮಗ್ನರಾಗಿರುವುದರಿಂದ ಮಳೆಯಲ್ಲಿ ಕೊಚ್ಚಿ ಹೋಗುತ್ತಿರುವ ಜನರ ಕಡೆಗೆ ಕಣ್ಣೆತ್ತಿ ನೋಡುತ್ತಿಲ್ಲ. ಚುನಾವಣೆ ಬಂದಾಗ ಹಣ ಖರ್ಚು ಮಾಡಿ ಗೆಲ್ಲಬಹುದು ಎಂಬ ಭಾವನೆಯಲ್ಲಿ ಜನರನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ.

ಇದನ್ನೂ ಓದಿ:ಬಾಲಿವುಡ್ ನಟಿ ಕಂಗನಾ ಹಾಗೂ ಸಹೋದರಿ ರಂಗೋಲಿ ಚಾಂಡೆಲ್ ವಿರುದ್ಧ FIR ದಾಖಲು

ಈಗ ಚುನಾವಣೆ ಅವರಿಗೆ ಮುಖ್ಯ. ಚುನಾವಣೆಯಲ್ಲಿ ಕೋಟಿಗಟ್ಟಲೆ ಹಣ ಖರ್ಚು ಮಾಡುತ್ತಾರೆ. ಗೆದ್ದರೆ ಪ್ರತಿಪಕ್ಷಗಳು ಎಷ್ಟೇ ಆರೋಪ ಮಾಡಿದರೂ ನಾವು ಗೆಲ್ಲಲಿಲ್ಲವೇ ಎಂದು ಹೇಳುತ್ತಾರೆ. ಆದರೆ ಶಿರಾ ಮತ್ತು ರಾಜರಾಜೇಶ್ವರಿ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಜನ ಬಿಜೆಪಿಗೆ ಪಾಠ ಕಲಿಸಲಿದ್ದಾರೆ ಎಂದಿದ್ದಾರೆ.

ಪ್ರವಾಹದಿಂದ ಕಲ್ಯಾಣ ಕರ್ನಾಟಕದ ಜನ ತೀವ್ರ ತೊಂದರೆಗೆ ಸಿಲುಕಿದ್ದರೂ ರಾಜ್ಯದಿಂದ ಆಯ್ಕೆಯಾಗಿ ಹೋಗಿರುವ ಬಿಜೆಪಿಯ 25 ಸಂಸದರು ನೆರವು ಒದಗಿಸುವಂತೆ ಕೇಂದ್ರವನ್ನು ಒತ್ತಾಯಿಸುತ್ತಿಲ್ಲ. ಪ್ರಧಾನಿಯವರನ್ನು ಭೇಟಿಯಾಗಿ ಜನರ ಕಷ್ಟ ಮನವರಿಕೆ ಮಾಡಿಕೊಡುತ್ತಿಲ್ಲ. 15ನೇ ಹಣಕಾಸು ಆಯೋಗದ ಶಿಫಾರಸು ಅನ್ವಯ ರಾಜ್ಯಕ್ಕೆ ಹಣಕಾಸು ಒದಗಿಸುವಲ್ಲಿಯೂ ಅನ್ಯಾಯವಾಗಿದೆ. ಆ ಬಗ್ಗೆಯೂ ಸಂಸದರು ಚಕಾರ ಎತ್ತುತ್ತಿಲ್ಲ. ಜಿಎಸ್‍ಟಿ ಪರಿಹಾರದ ಬಗ್ಗೆಯೂ ಸಂಸದರು ಮಾತನಾಡುತ್ತಿಲ್ಲ. ಕೋಲೆ ಬಸವನ ರೀತಿ ತಲೆ ಆಡಿಸುತ್ತಿರುವ ಸಂಸದರು ಮುಖ್ಯಮಂತ್ರಿಗಳನ್ನು ಪ್ರಧಾನಿಯವರ ಬಳಿಗೆ ಕೊಂಡೊಯ್ದು ಪರಿಹಾರಕ್ಕೆ ಒತ್ತಾಯಿಸುವ ಕೆಲಸ ಮಾಡಬೇಕು ಎಂದರು.

ಇದನ್ನೂ ಓದಿ:ಭಾರತದಲ್ಲಿ ರಷ್ಯಾದ ಸ್ಪುಟ್ನಿಕ್ ಲಸಿಕೆ ಪ್ರಯೋಗಕ್ಕೆ ಕೊನೆಗೂ ಅನುಮತಿ

ಕನ್ನಡದಲ್ಲಿ ಟ್ವೀಟ್ ಮಾಡಿದ ತಕ್ಷಣ ಪ್ರಧಾನಿಯವರು ಕನ್ನಡಿಗರ ಪರ ಇದ್ದಾರೆ ಎಂದರ್ಥವಲ್ಲ. ನೆರೆ ಪೀಡಿತ ಸ್ಥಳಗಳಿಗೆ ನಾನು ಭೇಟಿ ನೀಡುತ್ತೇನೆ.

ಡಿ.ಜೆ.ಹಳ್ಳಿ ಮತ್ತು ಕೆ.ಜಿ. ಹಳ್ಳಿ ಘಟನೆ ಕುರಿತು ಶಾಸಕ ಅಖಂಡ ಶ್ರೀನಿವಾಸಮೂರ್ತಿಯವರು ಸಂಪತ್ ರಾಜ್ ಅವರ ವಿರುದ್ಧ ಆರೋಪ ಮಾಡಿದ್ದಾರೆ. ಈ ಕುರಿತು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರ ಜೊತೆ ಮಾತುಕತೆ ನಡೆಸುತ್ತೇನೆ. ಬಿಜೆಪಿಯವರ ತಪ್ಪಿನಿಂದ, ಪೊಲೀಸರ ನಿರ್ಲಕ್ಷ್ಯದಿಂದ ಈ ಘಟನೆ ಸಂಭವಿಸಿದೆ ಎಂದು ನಾನು ವಿಧಾನಸಭೆಯಲ್ಲಿ ಹೇಳಿದ್ದೇನೆ. ಆ ಹೇಳಿಕೆಗೆ ಈಗಲೂ ಬದ್ಧನಾಗಿದ್ದೇನೆ.

ದೂರು ಕೊಟ್ಟ ತಕ್ಷಣ ನವೀನ್ ನನ್ನು ಬಂಧಿಸಿದ್ದರೆ ಗಲಭೆ ಸಂಭವಿಸುತ್ತಿರಲಿಲ್ಲ. ನವೀನ್ ಬಂಧನಕ್ಕೆ ಪೊಲೀಸರು ವಿಳಂಬ ಮಾಡಲು ಕಾರಣ ಏನು ? ಗುಪ್ತಚರ ಇಲಾಖೆ ಏನು ಮಾಡುತ್ತಿತ್ತು. ಪೊಲೀಸರ ವೈಫಲ್ಯ ಸಾಕಷ್ಟಿದೆ. ಘಟನೆ ಹಿಂದೆ ಎಸ್‍ಡಿಪಿಐ ಕೈವಾಡ ಇದೆ ಎಂದು ಸಚಿವರಾದ ಬಸವರಾಜ ಬೊಮ್ಮಾಯಿ ಮತ್ತು ಅಶೋಕ್ ಹೇಳಿದ್ದರು. ಈಗ ಅವರು ಏನು ಹೇಳುತ್ತಿದ್ದಾರೆ. ನಾವು ಯಾವುದನ್ನು ನಂಬಬೇಕು ಎಂದು ಹೇಳಿದರು.

ಇದನ್ನೂ ಓದಿ:ಐಪೋನ್-12 ಸರಣಿಯ 5G ಪೋನ್ ಗಳ ಬ್ಯಾಟರಿ ಸಾಮರ್ಥ್ಯ ಎಷ್ಟು ? ಇಲ್ಲಿದೆ ಮಾಹಿತಿ

ರಾಜರಾಜೇಶ್ವರಿ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಗೆ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ನಮ್ಮ ಅಭ್ಯರ್ಥಿ ಕುಸುಮಾ ಅವರು ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಪೊಲೀಸರು ಸುಳ್ಳು ಕೇಸು ದಾಖಲು ಮಾಡಿದ್ದಾರೆ. ಪೊಲೀಸರನ್ನು ತಳ್ಳಿ ನಾನು ಮತ್ತು ಅಭ್ಯರ್ಥಿ ಚುನಾವಣಾಧಿಕಾರಿಗಳ ಕಚೇರಿ ಒಳಗೆ ಹೋಗಿರುವುದಾಗಿ ಎಫ್ ಐ ಆರ್ ನಲ್ಲಿ ತಿಳಿಸಲಾಗಿದೆ. ಈ ಘಟನೆ 11.15 ರಲ್ಲಿ ನಡೆದಿದೆ ಎಂದಿದ್ದಾರೆ. ನಾನು ಚುನಾವಣಾಧಿಕಾರಿಗಳ ಕಚೇರಿ ಬಳಿಗೆ ಹೋದಾಗ 11.45 ಆಗಿತ್ತು. ಸರ್ಕಾರ ಉಪ ಚುನಾವಣೆಯಲ್ಲಿ ಪೊಲೀಸರನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ನಾವು ಗೇಟು ಅಥವಾ ಪೊಲೀಸರನ್ನು ತಳ್ಳಿಲ್ಲ. ಇದು ಸುಳ್ಳು ಆರೋಪ.

ನಾನು ನನ್ನ ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳುತ್ತೇನೆ. ಹೀಗಾಗಿ ಸಚಿವರುಗಳು ನನ್ನ ಬಗ್ಗೆ ಏನೇ ಟೀಕೆ ಮಾಡಿದರೂ ಐ ಡೋಂಟ್ ಕೇರ್.

ಬಡವರು ಮತ್ತು ಕೂಲಿ, ಕಾರ್ಮಿಕರಿಗೆ ಕಡಿಮೆ ದರದಲ್ಲಿ ಆಹಾರ ಸಿಗಬೇಕು ಎಂಬ ಕಾರಣಕ್ಕೆ ಇಂದಿರಾ ಕ್ಯಾಂಟೀನ್ ಆರಂಭಿಸಲಾಗಿತ್ತು. ಬಡವರು, ಕಾರ್ಮಿಕರ ಬಗ್ಗೆ ಕಾಳಜಿ ಇದ್ದರೆ ಸರ್ಕಾರ ಕ್ಯಾಂಟೀನ್‍ಗಳನ್ನು ನಡೆಸಲಿ. ಕ್ಯಾಂಟೀನ್‍ಗಳನ್ನು ನಡೆಸಲು ಸರ್ಕಾರ ಕೂಡಲೇ ಹಣ ಬಿಡುಗಡೆ ಮಾಡಲಿ. ಕೈಯ್ಯಲ್ಲಿ ಆಗದಿದ್ದರೆ ಸರ್ಕಾರ ಬಿಟ್ಟು ಹೋಗಲಿ. ಅಳವುದು, ಅಸಹಾಯಕತೆ ವ್ಯಕ್ತಪಡಿಸಲು ಪ್ರಜಾಪ್ರಭುತ್ವದಲ್ಲಿ ಅವಕಾಶ ಇಲ್ಲ.

ಇಲ್ಲಾ ಉಸ್ತುವಾರಿ ಸಚಿವರುಗಳು ಆಯಾ ಜಿಲ್ಲೆಗಳಿಗೆ ಹೋಗಿ ಪ್ರವಾಹ ಪರಿಸ್ಥಿತಿ ಬಗ್ಗೆ ಪರಿಶೀಲನೆ ನಡೆಸಲಿ. ಕೊರೊನಾ ಇದೆ ಎಂಬ ನೆಪ ಹೇಳಿ ಬೆಂಗಳೂರಿನಲ್ಲೇ ಕುಳಿತು ಸಭೆಗಳನ್ನು ನಡೆಸಿದರೆ ಹೇಗೆ ? ಇಲ್ಲಿ ಮಾಡುವ ಸಭೆಯನ್ನು ಪ್ರವಾಹಪೀಡಿತ ಪ್ರದೇಶಳಿಗೆ ಹೋಗಿಯೇ ಮಾಡಲಿ ಎಂದು ಗುಡುಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next