ಮುಂಬಯಿ: ಪುದುಚೇರಿಯ 19ರ ಹರೆಯದ ಎಡಗೈ ಸ್ಪಿನ್ನರ್ ಸಿದಾಕ್ ಸಿಂಗ್ “ಕರ್ನಲ್ ಸಿ.ಕೆ. ನಾಯ್ಡು ಅಂಡರ್-23′ ಪಂದ್ಯಾವಳಿಯಲ್ಲಿ ಎದುರಾಳಿ ಮಣಿಪುರ ತಂಡದ ಎಲ್ಲ 10 ವಿಕೆಟ್‌ಗಳನ್ನು ಕಿತ್ತು ಸುದ್ದಿಯಾಗಿದ್ದಾರೆ.
ಪುದುಚೇರಿಯ “ಸಿಎಪಿ ಸೀಶೆಮ್ ಗ್ರೌಂಡ್’ನಲ್ಲಿ ನಡೆದ ಪಂದ್ಯದಲ್ಲಿ ಸಿದಾಕ್ ಈ ಸಾಧನೆಗೈದರು. ಅವರ ಬೌಲಿಂಗ್ ಫಿಗರ್ ಹೀಗಿದೆ: 17.5-7-31-10.
ಈ ಸಾಧನೆಯ ಮೂಲಕ ಸಿದಾಕ್ ಸಿಂಗ್ ಭಾರತದ ಸ್ಪಿನ್ ದಂತಕತೆ ಅನಿಲ್ ಕುಂಬ್ಳೆ ಸಾಹಸವನ್ನು ನೆನಪಿಸಿದರು. ಪಾಕಿಸ್ಥಾನ ವಿರುದ್ಧದ 1999ರ ಹೊಸದಿಲ್ಲಿ ಟೆಸ್ಟ್‌ನಲ್ಲಿ ಕುಂಬ್ಳೆ ಈ ಪರಾಕ್ರಮಗೈದಿದ್ದರು.
ಭಾರತದ ಸ್ಪಿನ್ ಚತುಷ್ಟಯರಲ್ಲಿ ಒಬ್ಬರಾಗಿದ್ದ ಬಿಷನ್ ಸಿಂಗ್ ಬೇಡಿ ಅವರ ಬೌಲಿಂಗ್ ಶೈಲಿಯನ್ನು ಹೋಲುವ ಸಿದಾಕ್ ಸಿಂಗ್ ಇದಕ್ಕೂ ಮುನ್ನ ಮುಂಬಯಿ ತಂಡವನ್ನು ಪ್ರತಿನಿಧಿಸುತ್ತಿದ್ದರು. ಮುಂಬಯಿ ಪರ 7 ಟಿ20 ಪಂದ್ಯಗಳನ್ನಾಡಿದ್ದಾರೆ. 2015ರಲ್ಲಿ ಪಶ್ಚಿಮ ವಲಯ ಟಿ20 ಚಾಂಪಿಯನ್‌ಶಿಪ್‌ಗಾಗಿ ಮುಂಬಯಿ ಅಂಡರ್-15 ತಂಡಕ್ಕೆ ಆಯ್ಕೆ ಆಗುವುದರೊಂದಿಗೆ ಸಿದಾಕ್ ಅವರ ಅದೃಷ್ಟ ಖುಲಾಯಿಸುತ್ತ ಹೋಯಿತು. ಮುಂಬಯಿ ತಂಡಕ್ಕೆ ಸೇರ್ಪಡೆಗೊಂಡ 2ನೇ ಅತೀ ಕಿರಿಯ ಕ್ರಿಕೆಟಿಗನೆಂಬ ಹೆಗ್ಗಳಿಕೆಯೂ ಅವರಿಗೆ ಒಲಿಯಿತು. ಮೊದಲಿಗನೆಂದರೆ ಸಚಿನ್ ತೆಂಡುಲ್ಕರ್!
ಆದರೆ ಸಂಶಯಾಸ್ಪದ ಬೌಲಿಂಗ್ ಶೈಲಿ ಎನ್ನುವುದು ಸಿದಾಕ್ ಪಾಲಿಗೆ ಭಾರೀ ಹಿನ್ನಡೆಯಾಗಿ ಪರಿಣಮಿಸಿತು. ಈಗ ಬೌಲಿಂಗ್ ಶೈಲಿ ಬದಲಿಸಿಕೊಂಡು ಬಂದ ಸಿದಾಕ್ ಪುದುಚೇರಿ ತಂಡವನ್ನು ಪ್ರತಿನಿಧಿಸಿ ವಿಶಿಷ್ಟ ಸಾಧನೆಯೊಂದಿಗೆ ಗುರುತಿಸಿಕೊಂಡಿದ್ದಾರೆ.