ಮುಂಡಗೋಡ: ತಾಲೂಕಿನಾದ್ಯಂತ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ತಾಲೂಕಿನ ವಿವಿಧ ಭಾಗಗಳಲ್ಲಿ ಗೋವಿನ ಜೋಳದ ಗದ್ದೆಗೆ ನೀರು ನಿಂತು ಬೇರು ಕೊಳೆ ರೋಗ ಹಾಗೂ ಹಳದಿ ರೋಗ ಕಾಣಿಸಿಕೊಂಡಿರುವುದರಿಂದ ರೈತರನ್ನು ಸಂಕಷ್ಟಕ್ಕೆ ದೂಡಿದೆ.
ಕಳೆದ ಕೆಲವು ವರ್ಷಗಳಿಂದ ವರುಣನ ಮೇಲಾಟದಿಂದ ತಾಲೂಕಿನ ರೈತರು ತೀವ್ರವಾಗಿ ಹಾನಿ ಅನುಭವಿಸುತ್ತಾ ಬಂದಿದ್ದರು. ಇದಕ್ಕಾಗಿಯೇ ಪರ್ಯಾಯವಾಗಿ ಬೆಳೆ ಬೆಳೆಯಲು ಕಡಿಮೆ ವೆಚ್ಚದಲ್ಲಿ ಹೆಚ್ಚು ಆದಾಯ ಬರುವ ಗೋವಿನಜೋಳ ಬೆಳೆಯುವತ್ತ ಮುಖ ಮಾಡಿದ್ದರು. ಆದರೆ ಕಳೆದ 15 ದಿನಗಳಿಂದ ಮಳೆ ಸುರಿಯುತ್ತಿರುವುದರಿಂದ ಭೂಮಿಯಲ್ಲಿ ನೀರು ನಿಂತು ಬೇರು ಕೊಳೆ ರೋಗ ಕಾಣಿಸಿಕೊಂಡಿದ್ದು, ಕೆಲ ಕಡೆಗಳಲ್ಲಿ ಗೋವಿನಜೋಳಕ್ಕೆ ಸೈನಿಕ ಹುಳುಗಳ ಬಾಧೆ ಕಾಣುತ್ತಿದೆ.
ನ್ಯಾಸರ್ಗಿ ಗ್ರಾಮದಲ್ಲಿ ನಿಂಗಪ್ಪ ಕುರಬರ, ಅಂದಾನೆಪ್ಪ ಕುರಬರ ಎಂಬುವರ ಗದ್ದೆಯಲ್ಲಿ ಮೂರು ಎಕರೆಯಲ್ಲಿ ಬೆಳೆದ ಗೋವಿನ ಜೋಳ ಬೆಳೆ ಮಳೆಯ ನೀರಿನಿಂದ ಸಂಪೂರ್ಣ ಹಾನಿಯಾಗಿದೆ. ಅಲ್ಲದೆ ಬಾಚಣಕಿ, ಅರಶಿಣಗೇರಿ, ಹುನಗುಂದ ಮಜ್ಜಿಗೇರಿ, ನ್ಯಾಸರ್ಗಿ, ಚಿಗಳ್ಳಿ, ಚವಡಳ್ಳಿ, ಮನವಳ್ಳಿ ಸೇರಿದಂತೆ ಅನೇಕ ಭಾಗದಲ್ಲಿ ಗೋವಿನ ಜೋಳ ಬೆಳೆ ಮಳೆಯಿಂದ ಹಾನಿಯಾಗಿದೆ. ಆದರೆ ಸಂಬಂಧಪಟ್ಟ ಅಧಿಕಾರಿಗಳು ಹಾನಿಯಾದ ಬೆಳೆ ಪ್ರದೇಶಕ್ಕೆ ಹೋಗಿ ಪರಿಶೀಲಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಹಾನಿಗೊಳಗಾದ ರೈತರು ಅಸಮಾದಾನ ವ್ಯಕ್ತಪಡಿಸುತ್ತಿದ್ದಾರೆ.
ಈಗಾಗಲೇ ಕೆಲವು ಪ್ರದೇಶಕ್ಕೆ ನಾನೇ ಖುದ್ದಾಗಿ ಭೇಟಿ ನೀಡಿ ರೈತರಿಗೆ ಕೆಲ ಸಲಹೆ ನೀಡಿದ್ದೇನೆ. ತಾಲೂಕಿನ ರೈತರು ತಗ್ಗು ಪ್ರದೇಶ, ಭತ್ತದ ಗದ್ದೆಯಲ್ಲಿ ಗೋವಿನ ಜೋಳ ಬೆಳೆಯನ್ನು ಹಾಕಿರುವುದು ಹಾಗೂ ತಡವಾಗಿ ಬಿತ್ತನೆ ಮಾಡಿದ ಗದ್ದೆಗಳಲ್ಲಿ ಬೇರು ಕೊಳೆ ರೋಗ ಹಾಗೂ ಹಳದಿ ರೋಗ ಕಾಣಿಸುತ್ತಿದೆ. ಹೀಗೆಯೇ ನಿರಂತರ ಮಳೆಯಾದರೆ ಇಂತಹ ಪ್ರದೇಶದಲ್ಲಿ ಬೆಳೆ ಹಾನಿ ಇಲ್ಲವೇ ಇಳುವರಿ ಕಡಿಮೆಯಾಗುತ್ತದೆ. ಕಂದಾಯ ಹಾಗೂ ಕೃಷಿ ಇಲಾಖೆ ಜಂಟಿಯಾಗಿ ಹಾನಿಯಾದ ಪ್ರದೇಶಕ್ಕೆ ತೆರಳಿ ಸರ್ವೇ ಮಾಡುತ್ತೇವೆ.
-ಎಂ.ಎಸ್. ಕುಲಕರ್ಣಿ, ಸಹಾಯಕ ಕೃಷಿ ನಿರ್ದೇಶಕ
ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ನಮ್ಮ ಜಮೀನಲ್ಲಿ ಬೆಳೆದ ಗೋವಿನಜೋಳ ಸಂಪೂರ್ಣ ಹಾನಿಯಾಗಿದೆ. ಇದಲ್ಲದೆ ಕೆರೆ ತುಂಬಿಸುವ ನೀರಾವರಿ ಯೋಜನೆ ಕಾಮಗಾರಿ ಮಾಡುವ ಸಮಯದಲ್ಲಿ ನೀರು ಹೋಗುವ ಕಾಲುವೆಯನ್ನು ಮುಚ್ಚಿದ್ದಾರೆ. ಇದರಿಂದ ಅಲ್ಲಿರುವ ಕೆರೆ ಕೋಡಿ ಬಿದ್ದಿದ್ದರಿಂದ ಆ ನೀರು ರೈತರ ಜಮೀನಿಗೆ ಹೋಗಿ ಬೆಳೆ ಹಾನಿಯಾಗಿದೆ. ಆದಷ್ಟು ಬೇಗ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸ್ಥಳ ಪರಿಶೀಲಿಸಿ ರೈತರಿಗೆ ಪರಿಹಾರ ನೀಡಬೇಕು. –
ನಿಂಗಪ್ಪ ಕುರಬರ, ಬಾಚಣಕಿ ಗ್ರಾಮದ ರೈತ ಮುಖಂಡ