ಮಂಗಳೂರು: ಯವ ವಕೀಲ ಕುಲದೀಪ್ ಅವರ ಮೇಲೆ ದೌರ್ಜನ್ಯ ಎಸಗಿದ ಹಿನ್ನೆಲೆಯಲ್ಲಿ ಪುಂಜಾಲಕಟ್ಟೆಯ ಸಬ್ ಇನ್‌ಸ್ಪೆಕ್ಟರ್ ಅಗಿದ್ದ ಸುತೇಶ್ ಅವರನ್ನು ಸೇವೆಯಿಂದ ಅಮಾನತು
ಗೊಳಿಸಲಾಗಿದೆ.
ಪ್ರಕರಣವೊಂದಕ್ಕೆ ಸಂಬಂಧಿಸಿ ಪುಂಜಾಲಕಟ್ಟೆ ಪೊಲೀಸರು ಡಿ. 2ರಂದು ರಾತ್ರಿ ಕುಲದೀಪ್ ಅವರ ಮನೆಗೆ ತೆರಳಿ ಠಾಣೆಗೆ ಕರೆದೊಯ್ದಿದ್ದರು. ಈ ವೇಳೆ ಕುಲದೀಪ್ ಅವರ ಮೇಲೆ ದೌರ್ಜನ್ಯವೆಸಗಿದ ಬಗ್ಗೆ ಹಾಗೂ ಅವರ ಮನೆಯವರಿಗೆ ಬೆದರಿಕೆ ಹಾಕಿದ ಬಗ್ಗೆ ವಕೀಲರು ಆಕ್ರೋಶ ವ್ಯಕ್ತಪಡಿಸಿದ್ದರು.
ಸಾಮಾನ್ಯ ಪ್ರಕರಣವಾಗಿದ್ದರೂ ಪೊಲೀಸರು ರಾತೋರಾತ್ರಿ ಮನೆಗೆ ನುಗ್ಗಿ ದೌರ್ಜನ್ಯವೆಸಗಿದ್ದಾರೆ ಎಂದು ಆರೋಪಿಸಿ ವಕೀಲರ ಸಂಘದ ನೇತೃತ್ವದಲ್ಲಿ ಬಂಟ್ವಾಳ, ಮಂಗಳೂರು, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಪ್ರತಿಭಟನೆ ನಡೆದಿತ್ತು.
ಈ ಹಿನ್ನೆಲೆಯಲ್ಲಿ ಸುತೇಶ್ ಅವರನ್ನು ಪುಂಜಾಲಕಟ್ಟೆ ಠಾಣೆಯಿಂದ ದ.ಕ. ಎಸ್‌ಪಿ ಕಚೇರಿಗೆ ವರ್ಗಾವಣೆಗೊಳಿಸಲಾಗಿತ್ತು. ಆದರೆ ಅವರನ್ನು ಅಮಾನತುಗೊಳಿಸಬೇಕೆಂದು ವಕೀಲರು ಪಟ್ಟು ಹಿಡಿದಿದ್ದರು. ಸೋಮವಾರವೂ ಪ್ರತಿಭಟನೆ ಮುಂದುವರಿಸಲು ನಿರ್ಧರಿಸಲಾಗಿತ್ತು. ಶನಿವಾರ ಬಂಟ್ವಾಳಕ್ಕೆ ಸಿಎಂ ಬೊಮ್ಮಾಯಿ ಆಗಮಿಸಿದ ವೇಳೆ ವಕೀಲರ ಸಂಘದ ವತಿಯಿಂದ ಮನವಿ ಸಲ್ಲಿಸಿ ಕ್ರಮಕ್ಕೆ ಆಗ್ರಹಿಸಲಾಗಿತ್ತು.
ಐಜಿಪಿ ಆದೇಶ
ರವಿವಾರ ಐಜಿಪಿ ಚಂದ್ರಗುಪ್ತ ಅವರು ಸುತೇಶ್ ಅವರನ್ನು ಅಮಾ ನತುಗೊಳಿಸಿ ಆದೇಶಿಸಿದ್ದಾರೆ.