Advertisement
ಅನಂತರ ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿರುವ ಗೆಳತಿ ಸಹಾಯ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಆಸ್ಪತ್ರೆಯ ಇನ್ನೊಂದು ಪಾರ್ಶ್ವದಲ್ಲಿ ಎರಡನೆಯ ಮಹಡಿಯ ಕೊನೆಯಲ್ಲಿರುವ ಗೆಳತಿ ಕೇಂದ್ರವು ಆಸ್ಪತ್ರೆಯ ಪ್ರವೇಶ ದ್ವಾರದಿಂದ ಬಹಳ ದೂರದಲ್ಲಿದ್ದು, ಸರಿಯಾದ ಸೂಚನಾ ಫಲಕಗಳನ್ನು ಅಳವಡಿಸದೆ ಇರುವುದನ್ನು ಗಮನಿಸಿದರು. ಇಂತಹ ಅವ್ಯವಸ್ಥೆಯು ಅಗತ್ಯವಿರುವ ನಾಗರಿಕರಿಗೆ ಯಾವುದೇ ರೀತಿಯ ಪ್ರಯೋಜನ ನೀಡುವುದಿಲ್ಲ. ಜಿಲ್ಲಾ ಆಸ್ಪತ್ರೆಯಲ್ಲಿರುವ ಗೆಳತಿ ಕೇಂದ್ರದ ಮಾಹಿತಿಯು ಬಹುತೇಕ ಜನರಿಗೆ ತಿಳಿದಿಲ್ಲ ಎಂದು ಖೇದ ವ್ಯಕ್ತಪಡಿಸಿದರು.
ಜಿಲ್ಲಾ ಆಸ್ಪತ್ರೆಯಲ್ಲಿರುವ ಗೆಳತಿ ಕೇಂದ್ರಕ್ಕೆ ಸೂಕ್ತ ಸ್ಥಳಾವಕಾಶ ಕಲ್ಪಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲೆಯಲ್ಲಿ ಕಟ್ಟಡ ಕಾಮಗಾರಿ ನಿರ್ವಹಿಸುವ ಮಹಿಳಾ ಕಾರ್ಮಿಕರ ಮತ್ತು ಅವರ ಮಕ್ಕಳ ಯೋಗಕ್ಷೇಮದ ಮಾಹಿತಿ ಪಡೆದರು. ಕೇಂದ್ರ ಸರಕಾರದ ಮಹಿಳಾ ಅಭಿವೃದ್ಧಿ ಮತ್ತು ಮಹಿಳಾ ಸಶಕ್ತೀಕರಣ ಯೋಜನೆಗಳ ಕುರಿತು ಸಮಗ್ರ ಮಾಹಿತಿ ನೀಡುವ ಉದ್ದೇಶದಿಂದ ಒಂದು ದಿನದ ಮಾಹಿತಿ ಮತ್ತು ತರಬೇತಿ ಕಾರ್ಯಾಗಾರವನ್ನು ಉಭಯ ಜಿಲ್ಲೆಗಳ ಗ್ರಾಮ-ತಾಲೂಕು-ಜಿ.ಪಂ.ಗಳ ಮಹಿಳಾ ಸದಸ್ಯರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಸಮಾಜ ಸೇವಾ ಕಾರ್ಯಕರ್ತರು, ಶಾಲಾ ಕಾಲೇಜುಗಳ ವಿದ್ಯಾರ್ಥಿನಿಯರು, ಎನ್‌ಜಿಒಗಳ ಸದಸ್ಯರು, ಹಾಗೂ ಇನ್ನಿತರ ಸಂಘ-ಸಂಸ್ಥೆಗಳ ಮಹಿಳಾ ಸದಸ್ಯರಿಗೆ ಶೀಘ್ರದಲ್ಲಿ ಆಯೋಜಿಸಬೇಕು ಎಂದು ಸೂಚಿಸಿದರು. ಬೇಟಿ ಬಚಾವೋ ಬೇಟಿ ಪಡಾವೋ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿಯ ಸದಸ್ಯ ಪ್ರೊ| ಶ್ರೀನಾಥ್ ರಾವ್, ವಿವಿಧ ಇಲಾಖೆಗಳ ನಿರ್ದೇಶಕರು, ಉಪನಿರ್ದೇಶಕರು, ಹಿರಿಯ ಅಧಿಕಾರಿಗಳು, ಸಮನ್ವಯಕಾರರು ಮತ್ತು ಸಿಬಂದಿ ವಿಚಾರ ವಿನಿಮಯ ಮಾಡಿದರು. ಅಧಿಕಾರಿಗಳೊಂದಿಗೆ ಸಭೆ
ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಅಪರ ಜಿಲ್ಲಾಧಿಕಾರಿ ಕೆ. ವಿದ್ಯಾ ಕುಮಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಾಜ ಸೇವಾ ಇಲಾಖೆ ಹಾಗೂ ಇನ್ನಿತರ ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ರಾಷ್ಟ್ರೀಯ ಮಹಿಳಾ ಆಯೋಗವು ನೂತನವಾಗಿ ದೇಶಾದ್ಯಂತ ಪ್ರತೀ ಗ್ರಾಮದಲ್ಲಿ ಆಯೋಜಿಸಲಿರುವ ನಾರೀ ಅದಾಲತ್ ಕುರಿತು ಮಾಹಿತಿ ನೀಡಿದರು. ಸಾಂತ್ವನ ಕೇಂದ್ರದ ಮೂಲಕ ನೀಡಲಾಗುತ್ತಿರುವ ಸೇವೆಗಳು, ಬಗೆಹರಿಸಲ್ಪಟ್ಟ ದೂರುಗಳು, ಕೆಡಿಪಿ ಸಭೆಗಳು, ಮಾತೃ ಪೂರ್ಣ, ಗೊಂಚಲು ಸಭೆ, ಪೋಕ್ಸೋಕಾಯ್ದೆ ಮತ್ತು ಬೇಟೀ ಬಚಾವೋ ಬೇಟೀ ಪಡಾವೋ ಅಭಿಯಾನಗಳ ಕುರಿತು ಚರ್ಚೆ ನಡೆಸಿದರು.