Advertisement

ಗಾಯನ ನಿಲ್ಲಿಸಿದ ಗಾನಕೋಗಿಲೆ ಶ್ಯಾಮಲಾ ಜಿ.ಭಾವೆ

06:52 AM May 23, 2020 | Lakshmi GovindaRaj |

ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ಉಭಯ ಗಾನ ವಿದುಷಿ ಡಾ.ಶ್ಯಾಮಲಾ ಜಿ.ಭಾವೆ (79) ಇನ್ನಿಲ್ಲ. ಶುಕ್ರವಾರ ಬೆಳಗ್ಗೆ 7.15ಕ್ಕೆ ಶೇಷಾದ್ರಿಪುರ  ದಲ್ಲಿರುವ ಸ್ವಗೃಹದಲ್ಲಿ ಅವರು ಇಹಲೋಕ ತ್ಯಜಿಸಿದರು. ಸಹೋದರಿ  ನಿರ್ಮಲಾ ಸೇರಿ ಅಪಾರ ಅಭಿಮಾನಿಗಳನ್ನು ಅವರು ಅಗಲಿದ್ದಾರೆ. ಪಾರ್ಶ್ವವಾಯು ಸಮಸ್ಯೆ ಹಿನ್ನೆಲೆಯಲ್ಲಿ ಶ್ಯಾಮಲಾ ಜಿ.ಭಾವೆ ಅವರು ಇತ್ತೀಚೆಗೆ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯತ್ತಿದ್ದರು.

Advertisement

ಆದರೆ ಚಿಕಿತ್ಸೆಗೆ ಅವರ ದೇಹ  ಸ್ಪಂದಿಸುತ್ತಿರಲಿಲ್ಲ. ಮನೆಯಲ್ಲಿಯೇ ಅವರನ್ನು ಆರೈಕೆ ಮಾಡಲಾಗುತ್ತಿತ್ತು. ಶೇಷಾದ್ರಿಪುರದ ನಿವಾಸದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಚಾಮರಾಜಪೇಟೆಯ ಹಿಂದೂ ರುದ್ರಭೂಮಿಯಲ್ಲಿ  ಮಧ್ಯಾಹ್ನ 3.10 ಕ್ಕೆ ಬ್ರಾಹ್ಮಣ ಸಂಪ್ರದಾಯದಂತೆ ಅಂತಿಮ ವಿಧಿವಿಧಾನಗಳು ನಡೆದವು. ಸಂಗೀತ ಕ್ಷೇತ್ರದ ಅಪಾರ ಸಾಧನೆಗಾಗಿ ಶ್ಯಾಮಲಾ ಜಿ.ಭಾವೆ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ, ಉಭಯಗಾನ ವಿಶಾರದೆ,

ಉಭಯ ಗಾನ ವಿದುಷಿ,  ಕರ್ನಾಟಕ ಸಂಗೀತ ಅಕಾಡೆಮಿಯ ಕಲಾ ತಿಲಕ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳು ಅರಸಿ ಬಂದಿದ್ದವು. ಸಚಿವ ಸಿ.ಟಿ.ರವಿ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್‌.ನಾಗಾಭರಣ, ಕೊಳದ ಮಠದ ಶಾಂತವೀರ ಮಹಾಸ್ವಾಮೀಜಿ  ಸೇರಿ ಹಲವು ಗಣ್ಯರು ಅಂತಿಮ ದರ್ಶನ ಪಡೆದರು. ಹಲವು ಪ್ರಕಾರಗಳ ಸಂಗೀತಗಳಲ್ಲಿ ಸಾಧನೆ ಮಾಡಿರುವ ಶ್ಯಾಮಲಾ ಜಿ.ಭಾವೆ ಅವರ ನಿಧನ ಸಂಗೀತ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಎಂದು ಸಚಿವ ಸಿ.ಟಿ.ರವಿ ಸಂತಾಪ ಸೂಚಿಸಿದ್ದಾರೆ.

ಉಭಯ ಗಾನ ವಿದುಷಿ: ಶ್ಯಾಮಲಾ ಜಿ.ಭಾವೆ 1941ರ ಮಾರ್ಚ್‌ 14ರಂದು ಆಚಾರ್ಯ ಪಂಡಿತ್‌ ಗೋವಿಂದ ವಿಠಲ ಭಾವೆ ಹಾಗೂ ವಿದುಷಿ ಲಕ್ಷ್ಮಿ ಜಿ.ಭಾವೆ ಅವರ ಪುತ್ರಿಯಾಗಿ ಜನಿಸಿದರು. ಶ್ಯಾಮಲಾ ಜಿ.ಭಾವೆ ಅವರ ಪೋಷಕರು  ಸಂಗೀತ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದ್ದರು. ಸಂಗೀತದಲ್ಲಿ ಅಪಾರ ಒಲವು ಹೊಂದಿದ್ದ ಶ್ಯಾಮಲಾ ಅವರು ಪೋಷಕರಿಂದ ಹಿಂದೂಸ್ತಾನಿ ಸಂಗೀತ ಮತ್ತು ಬಿ.ದೊರೆಸ್ವಾಮಿ ಹಾಗೂ ಎ.ಸುಬ್ಬರಾಯ ಅವರಲ್ಲಿ ಕರ್ನಾಟಕ ಸಂಗೀತ  ಕಲಿತು ಉಭಯ ಗಾನ ವಿದುಷಿ ಎಂಬ ಹಿರಿಮೆಗೆ ಪಾತ್ರರಾದರು. ಇಡೀ ಜೀವನವನ್ನೇ ಸಂಗೀತಕ್ಕಾಗಿಯೇ ಮುಡುಪಿಟ್ಟಿದ್ದ ಅವರು ಶಾಸ್ತ್ರೀಯ ಸಂಗೀತದ ಜತೆಗೆ ಸುಗಮ ಸಂಗೀ ತದಲ್ಲೂ ವಿಶಿಷ್ಟ ಸಾಧನೆ ಮಾಡಿದರು.

ತಂದೆ  ಆಚಾರ್ಯ ಪಂಡಿತ್‌ ವಿಠಲ ಭಾವೆ ಹಿಂದುಸ್ತಾನಿ ಸಂಗೀತಕ್ಕಾಗಿಯೇ ಸ್ಥಾಪನೆ ಮಾಡಿದ್ದ ಸರಸ್ವತಿ ಸಂಗೀತ ವಿದ್ಯಾಲಯವನ್ನು ಸಮರ್ಥವಾಗಿ ಮುನ್ನಡೆಸಿ ಅನೇಕ ವಿದ್ಯಾರ್ಥಿಗಳಿಗೆ ಸಂಗೀತ ಪಾಠ ಹೇಳಿಕೊಟ್ಟರು. ಜತೆಗೆ ಸಾಕ್ಷಚಿತ್ರ,  ಗ್ರಾಮ ಫೋನ್‌, ಕ್ಯಾಸೆಟ್‌ಗಳಲ್ಲಿ ಧ್ವನಿ ನೀಡಿ ಸಂಗೀತ ಸಂಯೋ ಜನೆ ಮಾಡಿದ್ದರು. ಸುಮಾರು 9 ಭಾಷೆಯ 1,500ಕ್ಕೂ ಹೆಚ್ಚಿನ ಗೀತೆಗಳಿಗೆ ರಾಗಸಂಯೋ ಜನೆ ಮಾಡಿದ್ದಾರೆ. ದೇಶವಷ್ಟೇ ಅಲ್ಲ ವಿದೇಶಗಳಲ್ಲೂ ಸಂಗೀತಾಭಿಮಾನಿ  ಗಳನ್ನು ಹೊಂದಿದ್ದ ಶ್ಯಾಮಲಾ ಜಿ.ಭಾವೆ ಅವರು ಅನೇಕ ಸಂಗೀತ ಕಛೇರಿಗಳನ್ನು ನಡೆಸಿಕೊಟಿದ್ದಾರೆ. ಅಲ್ಲದೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷರಾಗಿ ಸಲ್ಲಿಸಿದ್ದಾರೆ.

Advertisement

ಹಿಂದುಸ್ತಾನಿ ಮತ್ತು ಕರ್ನಾಟಕ ಸಂಗೀತದ ಬಗ್ಗೆ ಆಳವಾದ ಜ್ಞಾನ ಹೊಂದಿದ ಕೆಲವೇ ಕೆಲವರಲ್ಲಿ ವಿದುಷಿ ಶ್ಯಾಮಲಾ ಜಿ.ಭಾವೆ ಅವರೂ ಒಬ್ಬರಾಗಿದ್ದರು. ಯುವ ಕಲಾವಿದರನ್ನು ಪ್ರೋತ್ಸಾಹಿಸುವುದರಲ್ಲೂ ಅವರು  ಮುಂಚೂಣಿಯಲ್ಲಿದ್ದರು. ಇಡೀ ಜೀವನವನ್ನೇ ಸಂಗೀತಕ್ಕೆ ಮೀಸಲಿಟ್ಟಿದ್ದರು.
-ಅನೂರು ಅನಂತಕೃಷ್ಣ ಶರ್ಮ, ಕರ್ನಾಟಕ ಸಂಗೀತ-ನೃತ್ಯ ಅಕಾಡೆಮಿ ಅಧ್ಯಕ್ಷ

ವಿದುಷಿ ಶ್ಯಾಮಲಾ ಜಿ.ಭಾವೆ ಅವರು ಹಿಂದುಸ್ತಾನಿ ಮತ್ತು ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ ಬಹುದೊಡ್ಡ ಹೆಸರು ಮಾಡಿದ್ದಾರೆ. ಅಪಾರ ಸಂಖ್ಯೆಯಲ್ಲಿ ಶಿಷ್ಯರನ್ನು ಬೆಳೆಸುವುದರ ಜತೆಗೆ ಅವರೆಲ್ಲರಿಗೂ ತಾಯ್ತನದ ಪ್ರೀತಿ ನೀಡಿದ್ದಾರೆ. 
-ಟಿ.ಎಸ್‌.ನಾಗಾಭರಣ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next