ಬೆಳ್ತಂಗಡಿ: ಗೋವಿಂದ ಭಟ್ಟರು ಸರ್ವಾಂಗ ಸುಂದರ ಕಲಾವಿದ. ಯಕ್ಷಗಾನದ ಎಲ್ಲ ಕ್ಷೇತ್ರಗಳ ಆಳ ಅರಿವು ಬಲ್ಲವರು ಎಂದು ಎಡನೀರು ಮಠದ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ನುಡಿದರು.
ಅವರು ರವಿವಾರ ಸಂಜೆ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ವಠಾರದಲ್ಲಿ ನಡೆದ ಗೋವಿಂದ ಕಲಾಭಾವಾರ್ಪಣಂ ಕಾರ್ಯಕ್ರಮದಲ್ಲಿ ಯಕ್ಷಗಾನ ಕಲಾವಿದ ಗೋವಿಂದ ಭಟ್ಟರಿಂದ ಕಲಾಧರ್ಮ ಗೌರವ ಸ್ವೀಕರಿಸಿ ಆಶೀರ್ವಚನ ನೀಡಿದರು.
ಕರ್ನಾಟಕ ಲೋಕಸೇವಾ ಆಯೋಗ ಅಧ್ಯಕ್ಷ ಟಿ. ಶ್ಯಾಮ ಭಟ್ ಗೋವಿಂದ ಕಲಾಧರ್ಮ ಗೌರವ ಸ್ವೀಕರಿಸಿ, ಯಾವುದೇ ಕಲಾವಿದರಿಗೆ ಮಾದರಿಯಾಗಬಲ್ಲ ಸಮರ್ಥ ಕಲಾವಿದ ಗೋವಿಂದ ಭಟ್ಟರು. ಯಕ್ಷಗಾನದೆಡೆಗೆ ನಾನು ಆಕರ್ಷಿತನಾಗಲು ಕಾರಣರು ಅವರು ಶೇಣಿಯವರ ಮಾತುಗಾರಿಕೆ ಹಾಗೂ ಎಡನೀರು ಶ್ರೀಗಳ ಶಿಷ್ಯತ್ವ ಯಕ್ಷಗಾನದಲ್ಲಿ ಹೆಚ್ಚು ತೊಡಗಿಸಿಕೊಳ್ಳಲು ಸಹಕಾರಿಯಾಯಿತು. ತೆಂಕುತಿಟ್ಟಿನಲ್ಲಿ ಗದಾ ಯುದ್ಧದ ಕೌರವ ಗೋವಿಂದ ಭಟ್ಟರಷ್ಟು ಚೆನ್ನಾಗಿ ನಿರ್ವಹಿಸುವವರು ಇಲ್ಲ ಎಂದರು.
ನೆಡೆ ಸ್ಮೃತಿ ಗೌರವವನ್ನು ನೆಡೆ ನರಸಿಂಹ ಭಟ್,ಕುರಿಯ ಸ್ಮೃತಿ ಗೌರವವನ್ನು ಕುರಿಯ ವೆಂಕಟ್ರಮಣ ಶಾಸಿŒ, ಕಲ್ಲಾಡಿ ಸ್ಮೃತಿ ಗೌರವವನ್ನುಕಲ್ಲಾಡಿ ದೇವಿಪ್ರಸಾದ ಶೆಟ್ಟರಿಗೆ ನೀಡಲಾಯಿತು.
ಗೋವಿಂದ ಕಲಾಭಾವಾರ್ಪಣಂ ಸಮಿತಿ ಗೌರವಾಧ್ಯಕ್ಷ ಯು. ವಿಜಯರಾಘವ ಪಡ್ವೆಟ್ನಾಯ, ಸಾವಿತ್ರಿ ಗೋವಿಂದ ಭಟ್ ಉಪಸ್ಥಿತರಿದ್ದರು.
ಗೋವಿಂದ ಭಟ್ ಅವರು 66 ವರ್ಷ ಕಾಲ
ಯಕ್ಷಗಾನ ತಿರುಗಾಟ, ಧರ್ಮಸ್ಥಳ ಮೇಳವೊಂದ ರಲ್ಲಿಯೇ 50 ವರ್ಷ ತಿರುಗಾಟ ನಡೆಸಿದ ಪ್ರಯುಕ್ತ ಕಲಾಜೀವನಕ್ಕೆ ನೆರವಾದವರಿಗೆ ಗೋವಿಂದ ಭಟ್ಟರು ಸಲ್ಲಿಸಿದ ಗೌರವಾರ್ಪಣ ಕಾರ್ಯಕ್ರಮ ಇದಾಗಿದ್ದು ಸೋಮವಾರ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರಿಗೆ ಕಲಾಭಾವಾರ್ಪಣಂ ಗೌರವ ಸಮರ್ಪಣೆ ನಡೆಯಲಿದೆ. ಅಭಿನಂದನಾ ನುಡಿಯನ್ನು ಉಜಿರೆ ಅಶೋಕ ಭಟ್, ನಿರ್ವಹಣೆಯನ್ನು ಡಾ| ಬಿ.ಎನ್. ಮನೋರಮಾ ನೆರವೇರಿಸಿದರು. ಸೂರಿಕುಮೇರು ಕೆ. ಗೋವಿಂದ ಭಟ್ ಸ್ವಾಗತಿಸಿದರು.