Advertisement

ಪುರಾತನ ದೇಗುಲಕ್ಕೆ ಬೇಕಿದೆ ಕಾಯಕಲ್ಪ

01:26 PM Jan 13, 2020 | Naveen |

ಶಿಕಾರಿಪುರ: ಜಿಲ್ಲೆಯ ಸೊರಬ ತಾಲೂಕಿನ ನಿಸರ್ಗದ ಮಡಿಲಲ್ಲಿ ಶ್ಯಾಡಲಕೊಪ್ಪ ಎಂಬ ಗ್ರಾಮದ ಬೆಟ್ಟದ ಬಳಿ ಪುರಾತನ ಪ್ರಸಿದ್ಧ ಶಿಲಾಯುಗ ಕಾಲದ ಶ್ರೀ ಕಾಳಿಕಾಂಬಾ ಕಮಟೇಶ್ವರ ದೇವಸ್ಥಾನವಿದೆ. ಇಲ್ಲಿಗೆ ಬರುವ ಭಕ್ತರ ಸಂಕಷ್ಟಗಳನ್ನು ನಿವಾರಣೆ ಮಾಡಿ ತಾಯಿ ಮಹಾಕಾಳಿ ಅಭಯವನ್ನು ನೀಡುತ್ತಿದ್ದಾಳೆ. ಆದರೆ ದೇವಾಲಯಕ್ಕೆ ಕೆಲ ಸೌಕರ್ಯ ಒದಗಿಸಿ ಕಾಯಕಲ್ಪ ನೀಡಬೇಕೆಂಬುದು ಭಕ್ತರ ಅಪೇಕ್ಷೆಯಾಗಿದೆ.

Advertisement

ಶಿಲಾಯುಗದ ದೇವಾಲಯ: ಮಲೆನಾಡಿನ ಶಿವಮೊಗ್ಗ ಜಿಲ್ಲೆ ಅನೇಕ ರಾಜ- ಮಹಾರಾಜರ ಆಳ್ವಿಕೆಯನ್ನು ಕಂಡಿದೆ. ಕೆಳದಿ ಶಿವಪ್ಪ ನಾಯಕ, ಚನ್ನಮ್ಮ, ಮಯೂರ ವರ್ಮನ ಜನ್ಮ ಸ್ಥಳ ಹೀಗೆ ಹತ್ತು ಹಲವಾರು ಸಣ್ಣ ಸಣ್ಣ ಸಂಸ್ಥಾನಗಳನ್ನು ಒಳಗೊಂಡ ಸ್ಥಳವಾಗಿತ್ತು. ಅದರಲ್ಲಿ ಶಿಲಾಯುಗದ ಕಾಲದಲ್ಲಿ ಚಿತ್ತ ಅರಸ ಎಂಬ ರಾಜ ಆಳ್ವಿಕೆ ಮಾಡುತ್ತಿದನ್ನು ಈ ಸಂದರ್ಭದಲ್ಲಿ ಶ್ಯಾಡಲ ಎಂಬ ಋಷಿಗೆ ಚಿತ್ತ ಅರಸ ಈ ದೇವಾಲಯವನ್ನು ಕಟ್ಟಿಸಿಕೊಟ್ಟ ಎಂಬ ಪ್ರತೀತಿ ಐತಿಹ್ಯದಲ್ಲಿದೆ. ಆದ್ದರಿಂದ ಶ್ಯಾಡಲ ಋಷಿಯಿಂದ ಈ ಗ್ರಾಮಕ್ಕೆ ಶ್ಯಾಡಲಕೊಪ್ಪ ಎಂಬ ಹೆಸರು ಬಂತು ಮತ್ತು ಚಿತ್ತ ಅರಸ ಆಳ್ವಿಕೆ ಮಾಡುತ್ತಿದ್ದ ಎಂಬ ಕಾರಣಕ್ಕೆ ಚಿಟ್ಟೂರು ಎಂಬ ಹೆಸರು ಬಂದಿದೆ ಎಂದು ಗ್ರಾಮಸ್ಥರು ಅಭಿಪ್ರಾಯ ಪಟ್ಟಿದ್ದಾರೆ.

ಈ ಜಾಗಕ್ಕೆ ಸಂಬಂ ಧಿಸಿದಂತೆ ಕೆಳದಿ ಸಂಸ್ಥಾನದಲ್ಲಿ ದಾಖಲೆಗಳು ಇದೆ ಎಂದು ಹೇಳಲಾಗಿದ್ದು ಯಾರೂ ಕೂಡ ಈ ಬಗ್ಗೆ ಅಧ್ಯಯನ ನಡೆಸಿಲ್ಲ ಎನ್ನುತ್ತಾರೆ ಗ್ರಾಮಸ್ಥರು.

ದೇವಿಯ ಕೃಪೆಯಿಂದ ಗ್ರಾಮವೇ ಸಮೃದ್ಧಿ: ಅನೇಕ ವರ್ಷಗಳ ಹಿಂದೆ 60-70 ವರ್ಷಗಳ ಹಿಂದೆ ಭೀಕರ ಬರಗಾಲದಿಂದ ಈ ಗ್ರಾಮದಲ್ಲಿ ವಾಸವಿದ್ದ ನೂರಾರು ಜನರು ಊರನ್ನು ಬಿಟ್ಟು ಹೋದರು. ದೇವಸ್ಥಾನದ ಪೂಜೆ ನಿಂತಿದ್ದನ್ನು ಗಮನಿಸಿದ ಗ್ರಾಮಸ್ಥರು ದೇವಿಯನ್ನು ಬೇಡಿಕೊಂಡು ಪೂಜಾ ಕಾರ್ಯ ಆರಂಭಿಸಿದ ಮೇಲೆ ಬಂಜರು ಭೂಮಿಯಲ್ಲೂ ನೀರು ಉಕ್ಕಲು ಆರಂಭವಾಯಿತು. ಇದರಿಂದ ದೇವಿಯ ಭಕ್ತರು ಹೆಚ್ಚದ್ದರು. ಸುತ್ತಮುತ್ತಲಿನ ಹತ್ತಾರು ಗ್ರಾಮದ ಜನರು ದೇವಿಯ ದೇವಸ್ಥಾನಕ್ಕೆ ಆಗಮಿಸಿ ತಮ್ಮ ಸಂಕಷ್ಟಗಳನ್ನು ಪರಿಹಾರ ಮಾಡಿಕೊಳ್ಳುತ್ತಾರೆ.

ಅರ್ಚಕರು ಒಂದು ರೂಪಾಯಿಯನ್ನು ಮುಟ್ಟುವುದಿಲ್ಲ :
ವಿಶೇಷ ಎಂದರೆ ಬಹುತೇಕ ಎಲ್ಲಾ ದೇವಾಲಯಗಳಲ್ಲಿ ಕಾಣಿಗೆ ಹುಂಡಿಗಿಂತ ಆರತಿ ತಟ್ಟೆಗೆ ಹಣ ಎಷ್ಟು ಬಿದ್ದಿದೆ ಎಂದು ಅರ್ಚಕರು ನೋಡುತ್ತಾರೆ. ಅದರೆ ಇಲ್ಲಿನ ಅರ್ಚಕರು 15 ವರ್ಷಗಳಿಂದ ದೇವಿಯ ಪೂಜೆಯಲ್ಲಿ ನಿರತರಾಗಿದ್ದು ಒಂದು ರೂಪಾಯಿ ಹಣವನ್ನು ಕೈಯಿಂದ ಮುಟ್ಟುವುದಿಲ್ಲ ಹಾಗೂ ದೇವಾಲಯವನ್ನು ಬಿಟ್ಟು ಹೊರಗಡೆ ಎಲ್ಲೂ ಹೋಗುವುದಿಲ್ಲ. ವರ್ಷಕ್ಕೆ ಒಮ್ಮೆ ಮಾತ್ರ ದೇವಿಯ ರಥ ಊರಿನ ಒಳಗೆ ಹೋಗುವುದರಿಂದ ಅದರ ಜೊತೆ ಹೊಗುತ್ತಾರೆ. ದೇವಿಯ ಪೂಜೆ, ಧ್ಯಾನದಲ್ಲಿ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದು ಬರುವ ಭಕ್ತರಿಗೆ ಸರಿದಾರಿ ತೋರಿಸಿಕೊಂಡು ನಡೆಯುತ್ತಿದ್ದಾರೆ.

Advertisement

ದೇವಿಯ ಅರಣ್ಯ ಇಂದಿಗೂ ಹಸಿರು: ಮಲೆನಾಡಿನ ಬಹುತೇಕ ಅರಣ್ಯ, ಬೆಟ್ಟಗುಡ್ಡಗಳು ಬಗರ್‌ಹುಕುಂ ಹೆಸರಿನಲ್ಲಿ ಸಂಪೂರ್ಣ ನಾಶವಾಗಿವೆ. ಈ ಗ್ರಾಮವೂ ಇದಕ್ಕೆ ಹೊರತಾಗಿಲ್ಲ. ಬಹುತೇಕ ಸುತ್ತಮುತ್ತಲಿನ ಕಾಡು ನಾಶವಾಗಿದೆ. ಆದರೆ ಕಾಳಿಕಾಂಬಾ ದೇವಿಯ ಆಸ್ಥಾನದಲ್ಲಿ ಇರುವ ಕಾಡನ್ನು ಯಾರೂ ಕಡಿಯುವ ಧೈರ್ಯ ಮಾಡಿಲ್ಲ. ದೇವಿಯ ಮೇಲಿನ ಭಕ್ತಿಯಿಂದಲೋ ಅಥವಾ ಭಯದಿಂದಲೋ ಕಾಡು ಮಾತ್ರ ಇಂದಿಗೂ ಹಚ್ಚ ಹಸಿರು ತೋರಣದಂತಿದೆ.

ದೇವಸ್ಥಾನ ಮುಂಭಾಗದ ಪುಷ್ಕರಣಿಗೆ ಇಂದಿಗೂ ಹುಲಿ, ಚಿರತೆ, ಕರಡಿ, ನವಿಲು, ಹೀಗೆ ಅನೇಕ ಕಾಡುಪ್ರಾಣಿಗಳು ನೀರು ಕುಡಿಯಲು ಬರುತ್ತವೆ ಎನ್ನುತ್ತಾರೆ ಗ್ರಾಮಸ್ಥರು.

ದೇವಸ್ಥಾನ ಜೀರ್ಣೋದ್ಧಾರಕ್ಕೆ ಮನವಿ: ಇಲ್ಲಿನ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಆಡಳಿತ ಮಂಡಳಿಯೂ ಸಾಕಷ್ಟು ಬಾರಿ ಸರ್ಕಾರಕ್ಕೆ ಮನವಿ ಮಾಡಿದ್ದು ಇಂದಿಗೂ ಅಭಿವೃದ್ಧಿ ಅಷ್ಟೇನೂ ಹೇಳಿಕೊಳ್ಳುವಷ್ಟು ನಡೆದಿಲ್ಲ. ಸಾವಿರಾರು ಭಕ್ತರು ಪ್ರತೀ ಅಮಾವಾಸ್ಯೆಗೆ ಆಗಮಿಸುತ್ತಾರೆ. ಇಂದಿಗೂ ಈ ಗ್ರಾಮಗಳೂ ಡಾಂಬರು ರಸ್ತೆಗಳನ್ನು ಕಂಡಿಲ್ಲ. ದೇವಸ್ಥಾನದವರೆಗೂ ರಸ್ತೆಯ ಅವಶ್ಯಕತೆ ಇದೆ ಮತ್ತು ದೇವಸ್ಥಾನದ ಕಟ್ಟಡವೂ ಹಳೇ ಕಾಲದ್ದಾಗಿರುವುದರಿಂದ ಶಿಥಿಲಾವಸ್ಥೆಯಲ್ಲಿದೆ. ಅದರ ಅಭಿವೃದ್ಧಿಗೂ ಸರ್ಕಾರ, ಜನಪ್ರತಿನಿಧಿಗಳು ಮುಂದಾಗಬೇಕು ಎಂದು ಗ್ರಾಮಸ್ಥರು, ಆಡಳಿತ ಮಂಡಳಿಯವರು ಮನವಿ ಮಾಡಿದ್ದಾರೆ .

ಕಾಳಿ- ಕಮಟೇಶ್ವರ ಒಟ್ಟಿಗೆ ಇರುವುದು ಅಪರೂಪ
ಪುರಾಣ ಕಥೆಗಳಲ್ಲಿ ಓದಿದಂತೆ ಕಾಳಿ ಮಾತೆಯದ್ದು ಮಹಾ ರೌದ್ರಾವತಾರ. ಕಾಳಿಯ ಭಯಾನಕ ಕೋಪದ ಮುಂದೆ ಸಾಕ್ಷತ್‌ ಪರಮೇಶ್ವರನೇ ತಲೆಬಾಗುತ್ತಾನೆ ಎಂಬ ಕಥೆಯನ್ನು ಓದಿದ್ದೇವೆ. ಅದರೆ ಈ ಕ್ಷೇತ್ರದಲ್ಲಿ ಕಾಳಿಕಾಂಬಾ ದೇವಿಯ ಜೊತೆಯಲ್ಲಿ ಕಮಟೇಶ್ವರ ದೇವರು ಇರುವುದು ಅಪರೂಪ ಮತ್ತು ಈ ರೀತಿಯ ದೇವಾಲಯ ಎಲ್ಲಿಯೂ ಸಿಗುವುದಿಲ್ಲ ಎನ್ನುತ್ತಾರೆ ದೇವಿಯ ಆರ್ಚಕರು.

„ರಘು ಶಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next