ಶ್ವೇತಾ ಶ್ರೀವಾತ್ಸವ್ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿರುವ “ಹೋಪ್’ ಚಿತ್ರ ಜುಲೈ 8ರಂದು ತೆರೆಗೆ ಬರುತ್ತಿದೆ. ಸದ್ಯ ಚಿತ್ರದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಇತ್ತೀಚೆಗೆ ಚಿತ್ರದ ಟ್ರೇಲರ್ ಅನ್ನು ಉನ್ನತ ಶಿಕ್ಷಣ ಸಚಿವ ಡಾ. ಸಿ. ಎಸ್ ಅಶ್ವಥ್ ನಾರಾಯಣ್ ಅವರ ಕೈಯಿಂದ ಬಿಡುಗಡೆಗೊಳಿಸಿತು.
ಇದೇ ವೇಳೆ ಮಾತನಾಡಿದ ಸಚಿವ ಡಾ. ಅಶ್ವಥ್ ನಾರಾಯಣ್, “ಟ್ರೇಲರ್‌ನಲ್ಲಿ ಸರ್ಕಾರಿ ಅಧಿಕಾರಿಗಳ ವರ್ಗಾವಣೆಯಂಥ ಗಂಭೀರ ವಿಷಯವನ್ನು ಹೇಳಲಾಗಿದ್ದು, ಸಿನಿಮಾದ ಕಥಾಹಂದರದ ಬಗ್ಗೆ ಕುತೂಹಲ ಮೂಡಿಸುವಂತಿದೆ. ಸಮಾಜಕ್ಕೆ ಸಂದೇಶ ನೀಡುವಂಥ ಇಂತಹ ಸಿನಿಮಾಗಳ ಸಂಖ್ಯೆ ಹೆಚ್ಚಾಗಲಿ’ ಎಂದು ಹಾರೈಸಿದರು.
“ಹೋಪ್’ ಚಿತ್ರದ ಕಥಾಹಂದರದ ಬಗ್ಗೆ ಮಾತನಾಡಿದ ನಿರ್ದೇಶಕ ಅಂಬರೀಶ್, “ಇದೊಂದು ಕೋರ್ಟ್ ರೂಮ್ ಡ್ರಾಮಾ ಸಿನಿಮಾ. ಕೆಎಎಸ್ ನಂತಹ ಸಿವಿಲ್ ಸರ್ವೀಸ್ ಅಧಿಕಾರಿಗಳ ವರ್ಗಾವಣೆ ಸಾಮಾಜಿಕವಾಗಿ ಹೇಗೆ ಪರಿಣಾಮ ಬೀರುತ್ತದೆ. ವರ್ಗಾವಣೆ ಹಿಂದಿನ ರಾಜಕೀಯ, ವರ್ಗಾವಣೆ ವಿರುದ್ದದ ಕಾನೂನು ಹೋರಾಟ ಹೇಗಿರುತ್ತದೆ ಅನ್ನೋದನ್ನ ಸಿನಿಮಾದಲ್ಲಿ ಹೇಳಿದ್ದೇವೆ. ಜನಸಾಮಾನ್ಯರ ಅರಿವಿಗೆ ಬಾರದಿರುವ ಅಡ್ಮಿನಿಸ್ಟ್ರೇಟಿವ್ ಟ್ರಿಬ್ಯೂನಲ್ (ಆಡಳಿತಾತ್ಮಕ ನ್ಯಾಯಾಧಿಕರಣ) ನಲ್ಲಿ ದಕ್ಷ ಮತ್ತು ಪ್ರಾಮಾಣಿಕ ಮಹಿಳಾ ಅಧಿಕಾರಿಯ ಕಾನೂನು ಹೋರಾಟ ಹೇಗಿರುತ್ತದೆ ಅನ್ನೋದೆ ಸಿನಿಮಾ. ಒಂದು ಗಂಭೀರ ವಿಷಯವನ್ನು ಸಸ್ಪೆನ್ಸ್-ಥ್ರಿಲ್ಲಿಂಗ್ ಆಗಿ ತೆರೆಮೇಲೆ ಹೇಳಲಾಗಿದೆ’ ಎಂದು ಕಥಾಹಂದರ ಪರಿಚಯಿಸಿದರು.
ಇದನ್ನೂ ಓದಿ:ತಾಯಿಯಾಗುತ್ತಿರುವ ಸಂತಸ ವ್ಯಕ್ತಪಡಿಸಿದ ಬಾಲಿವುಡ್ ನಟಿ ಆಲಿಯಾ ಭಟ್
“ಹೋಪ್’ ಚಿತ್ರದಲ್ಲಿ ತಮ್ಮ ಪಾತ್ರದ ಬಗ್ಗೆ ಮಾತನಾಡಿದ ನಟಿ ಶ್ವೇತಾ ಶ್ರೀವಾತ್ಸವ್, “ಸುಮಾರು ಏಳು ವರ್ಷದ ನಂತರ ನನ್ನ ಸಿನಿಮಾ ಬಿಡುಗಡೆಯಾಗುತ್ತಿದೆ. ಇದರಲ್ಲಿ ನನ್ನದು ಕೆಎಎಸ್ ಅಧಿಕಾರಿಯ ಪಾತ್ರ. ದಕ್ಷ ಅಧಿಕಾರಿಯೊಬ್ಬಳು ತನ್ನ ವೃತ್ತಿ ಜೀವನದಲ್ಲಿ ಏನೇನು ಸಮಸ್ಯೆ-ಸವಾಲುಗಳನ್ನು ಎದುರಿಸುತ್ತಾಳೆ, ಅದೆಲ್ಲವನ್ನು ಹೇಗೆ ದಿಟ್ಟತನದಿಂದ ಎದುರಿಸಿ ಹೋರಾಡುತ್ತಾಳೆ ಅನ್ನೋದು ನನ್ನ ಪಾತ್ರ. ನನ್ನ ಮಗಳು ಹುಟ್ಟಿ ಎರಡು ವರ್ಷಗಳ ಬಳಿಕ ಮತ್ತೆ ವೃತ್ತಿ ಜೀವನದಲ್ಲಿ ಮುಂದುವರೆಸಬೇಕು ಅಂದುಕೊಂಡಾಗ ಒಂದಷ್ಟು ಒಳ್ಳೆಯ ಸಿನಿಮಾಗಳು ಬರಲು ಶುರುವಾಯ್ತು. ಅಂಥ ಒಂದು ಸಿನಿಮಾ “ಹೋಪ್’. ಸಿನಿಮಾದ ಕಥೆ ಕೇಳಿದಾಗ ಇಷ್ಟವಾಯ್ತು. ಮನಮುಟ್ಟುವಂಥ ಪಾತ್ರ ಸಿನಿಮಾದಲ್ಲಿದ್ದರಿಂದ ಸಿನಿಮಾ ಒಪ್ಪಿಕೊಂಡೆ’ ಎಂದರು.
ನಟರಾದ ಗೋಪಾಲಕೃಷ್ಣ ದೇಶಪಾಂಡೆ, ಪ್ರಮೋದ್ ಶೆಟ್ಟಿ, ಆರ್. ಜೆ ಸಿರಿ ಮೊದಲಾದ ಕಲಾವಿದರು ಚಿತ್ರದಲ್ಲಿ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ಸುಮಲತಾ ಅಂಬರೀಶ್, ಪ್ರಕಾಶ್ ಬೆಳವಾಡಿ, ಅಶ್ವಿನ್ ಹಾಸನ್, ವಿಶಾಲ್ ಹೆಗ್ಡೆ, ಹಿತಾಶ್ರೀ ಮೊದಲಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
“ಗೋಲ್ಡಿ ಪ್ರೊಡಕ್ಷನ್ಸ್’ ಬ್ಯಾನರಿನಲ್ಲಿ ವರ್ಷಾ ಸಂಜೀವ್ “ಹೋಪ್’ ಚಿತ್ರಕ್ಕೆ ಕಥೆ ಬರೆದು ನಿರ್ಮಾಣ ಮಾಡಿದ್ದು, ಚಿತ್ರದ ಬಗ್ಗೆ ಮಾತನಾಡಿದರು. ವಿತರಕರಾದ ಮಾಲಿನಿ, ಸಂಕಲನಕಾರ ಹರೀಶ್ ಕೊಮ್ಮೆ, ಸಂಗೀತ ನಿರ್ದೇಶಕ ರಿತ್ವಿಕ್ ಮುರಳೀಧರ್ ಚಿತ್ರದ ಬಗ್ಗೆ ಮಾತನಾಡಿದರು.