ರಾಯಚೂರು: ಕೃಷಿ ಉತ್ಪನ್ನಗಳು ಹಾಗೂ ಕೃಷಿಗೆ ಬಳಸುವ ದುಬಾರಿ ಸಾಮಗ್ರಿಗಳ ಕಳವು ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದಕ್ಕೆ ಕೂಡಲೇ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಸೋಮವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ನಿಖೀಲ್ ಅವರಿಗೆ ಮನವಿ ಸಲ್ಲಿಸಿದರು.
ಹತ್ತಿ, ಮೆಣಸಿನಕಾಯಿ, ಹೊಲದಲ್ಲಿರುವ ಕಡಲೆ ಸೇರಿದಂತೆ ಇನ್ನಿತರ ಬೆಳೆಗಳು, ಜಾನುವಾರು ಹಾಗೂ ಕೃಷಿ ಯಂತ್ರೋಪಕರಣಗಳಾದ ಪಂಪ್‌ಸೆಟ್, ಪೈಪ್‌ಗಳು ಕಳುವಾಗುತ್ತಿವೆ. ರೈತರು ಕಷ್ಟಪಟ್ಟು ಸಾಲ ಸೋಲ ಮಾಡಿ ಕೃಷಿ ಮಾಡಿಕೊಂಡಿದ್ದಾರೆ. ಈಗ ಅದಕ್ಕೂ ರಕ್ಷಣೆ ಇಲ್ಲದಂತಾದ ಸ್ಥಿತಿ ಇದೆ. ಈ ರೀತಿ ಅನೇಕ ಘಟನೆಗಳು ನಡೆದಿದ್ದು, ಸಂಬಂಧಿಸಿದ ಠಾಣೆಗಳಿಗೆ ದೂರು ನೀಡಿದರೆ ಪ್ರಯೋಜನವಾಗುತ್ತಿಲ್ಲ. ಸಾಕ್ಷಿ ಸಮೇತ ಕಳ್ಳರನ್ನು ಪೊಲೀಸರಿಗೆ ಒಪ್ಪಿಸಿದರೆ ದಿನದೊಳಗೆ ದುಷ್ಕರ್ಮಿಗಳು ಹೊರಗೆ ಓಡಾಡುತ್ತಿರುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಗುಂಜಹಳ್ಳಿಯಲ್ಲಿ ಎಮ್ಮೆ ಕಳ್ಳರನ್ನು, ಚಂದ್ರಬಂಡಾದಲ್ಲಿ ಎತ್ತು, ಕುರಿಗಳ್ಳರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿತ್ತು. ಹೊಸೂರು, ಬಾಯಿದೊಡ್ಡಿ ಹಾಗೂ ನೆಲಹಾಳ ಗ್ರಾಮಗಳಲ್ಲಿ ಹತ್ತಿ ಕಳ್ಳತನವಾಗುತ್ತಿದೆ. ಈ ಕುರಿತೂ ಗ್ರಾಮೀಣ ಠಾಣೆಗೆ ದೂರು ನೀಡಿದರೆ ಯಾವುದೇ ಕ್ರಮ ಜರುಗಿಸಿಲ್ಲ. ತಾಲೂಕಿನ ಬಾಪೂರದಲ್ಲಿ ಮೋಟರ್ ಮತ್ತು ಮೊಬೈಲ್ ಕಳ್ಳತನ ಮಾಡಿದ ಆರೋಪಿತನನ್ನು ಹಿಡಿದು ಯರಗೇರಾ ಠಾಣೆಗೆ ಒಪ್ಪಿಸಿದರೆ ಮರುದಿನವೇ ಆತ ರಾಜಾರೋಷವಾಗಿ ಓಡಾಡುತ್ತಿದ್ದಾನೆ ಎಂದು ದೂರಿದರು.
ಇನ್ನಾದರೂ ಪೊಲೀಸರು ರೈತರ ರಕ್ಷಣೆಗೆ ಮುಂದಾಗಬೇಕು. ವರ್ಷಪೂರ್ತಿ ಕಷ್ಟಪಟ್ಟು ಬೆಳೆದ ಬೆಳೆ ರಕ್ಷಣೆಗೆ ನೆರವಾಗಬೇಕು. ಇಲ್ಲವಾದರೆ ರೈತರು ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ವೇಳೆ ಜಿಲ್ಲಾಧ್ಯಕ್ಷ ಲಕ್ಷ್ಮಣಗೌಡ ಕಡಗಂದೊಡ್ಡಿ, ಜಿಲ್ಲಾ ಗೌರವಾಧ್ಯಕ್ಷ ನರಸಿಂಗರಾವ್ ಕುಲಕರ್ಣಿ ಚಂದ್ರಬಂಡಾ, ಸದಸ್ಯರಾದ ಕೆ. ವೀರೇಶ ಗೌಡ, ನರಸರೆಡ್ಡಿ ಬಾಯಿದೊಡ್ಡಿ, ಹುಲಿಗೆಪ್ಪ ಜಾಲಿಬೆಂಚಿ, ಗಾಣಧಾಳ ರಮೇಶ, ಚಂದಾಸಾಬ್, ಎಸ್. ಮಹೆಬೂಬ್ ಸೇರಿದಂತೆ ಇತರರಿದ್ದರು.