ಕೋಟ: ಬ್ರಹ್ಮಾವರ ತಾಲೂಕಿನ ಎರಡು ಹೋಬಳಿಗಳಲ್ಲಿ ಪ್ರಮುಖ ಹೋಬಳಿ ಕೋಟ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ| ಕೆ. ಶಿವರಾಮ ಕಾರಂತರಂಥ ಮಹನೀಯರ ಹೆಸರಿನೊಂದಿಗೆ ಸೇರಿಕೊಂಡಿರುವ ಈ ಕೋಡ ಎಂಬ ಊರು ಇರುವುದು ಮಾತ್ರ ಗಿಳಿಯಾರು ಗ್ರಾಮದ ಪುಟ್ಟ ಪ್ರದೇಶವಾಗಿ.
ಗಿಳಿಯಾರು ಗ್ರಾಮದ ವಿಸ್ತೀರ್ಣ 522.02 ಹೆಕ್ಟೇರ್‌ಗಳು. ಒಟ್ಟು ಜನಸಂಖ್ಯೆ 3982.884 ಕುಟುಂಬಗಳು ಇಲ್ಲಿ ವಾಸವಿವೆ. ಗ್ರಾಮದ ವ್ಯಾಪ್ತಿ ಯಲ್ಲಿ ಮೂಡುಗಿಳಿಯಾರು, ಕೋಟ, ಹರ್ತಟ್ಟು ಮುಂತಾದ ಪ್ರದೇಶಗಳಿವೆ. ಭತ್ತ ಇಲ್ಲಿನ ಕೃಷಿಕರ ಪ್ರಮುಖ ಬೆಳೆ. ಶೇಂಗಾ, ಕಲ್ಲಂಗಡಿ ಹಾಗೂ ಸೌತೆ, ಕುಂಬಳಕಾಯಿ ಮತ್ತಿತರ ತರಕಾರಿಗಳನ್ನು ಹೇರಳವಾಗಿ ಬೆಳೆಯಲಾಗುತ್ತದೆ.
ಗಿಳಿಯಾರು ಗ್ರಾಮದ ವ್ಯಾಪ್ತಿಯಲ್ಲಿ ಕೋಟ ಹೋಬಳಿ ನಾಡಕಚೇರಿ, ಅಟಲ್ ಜೀ ಜನಸ್ನೇಹಿ ಕೇಂದ್ರ, ಕಂದಾಯ ನಿರೀಕ್ಷಕರ ಕಚೇರಿ, ಸಮುದಾಯ ಆರೋಗ್ಯ ಕೇಂದ್ರ, ಪೊಲೀಸ್ ಠಾಣೆ, ಮುಖ್ಯ ಅಂಚೆ ಕಛೇರಿ, ಕೋಟ ಗ್ರಾ.ಪಂ. ಕಚೇರಿ, ಹೋರಿಪೈರು, ಎ.ಪಿ.ಎಂ.ಸಿ. ಸಂತೆ ಮಾರುಕಟ್ಟೆ ಬರುತ್ತದೆ. ಪ್ರಸಿದ್ಧ ಅಮೃತೇಶ್ವರೀ, ಹಿರೇಮಹಾಲಿಂಗೇಶ್ವರ ದೇವಸ್ಥಾನಗಳಿವೆ. ಡಿವೈನ್‌ಪಾರ್ಕ್‌ನ ಸಹಸಂಸ್ಥೆ ಸರ್ವಕ್ಷೇಮ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿರುವ ವಿವೇಕಾನಂದರ ವಿಶ್ವದ ಅತೀ ಎತ್ತರದ ಪ್ರತಿಮೆ ಇಲ್ಲಿದೆ. ಶೈಕ್ಷಣಿಕವಾಗಿ ಗಿಳಿಯಾರು ಸರಕಾರಿ ಹಿ.ಪ್ರಾ. ಶಾಲೆ, ಸ. ಪ್ರೌಢಶಾಲೆ, ಖಾಸಗಿ ಅನುದಾನಿತ ಶಾಲೆಗಳಿವೆ.
ಪೇಟೆ ಅಭಿವೃದ್ಧಿ ಇಲ್ಲಿನ ಗೋ ಆಸ್ಪತ್ರೆಯ ಬಳಿ 1ಎಕ್ರೆಗೂ ಹೆಚ್ಚು ಕಂದಾಯ ಇಲಾಖೆಗೆ ಸೇರಿದ ಭೂಮಿ ಇದೆ. ಇದರಲ್ಲಿ 50 ಸೆಂಟ್ಸ್ ನಾಡಕಚೇರಿಗೆ ಕಾಯ್ದಿರಿಸಲಾಗಿದೆ. ವಿಶೇಷ ತಹಶೀಲ್ದಾರರು, ಕಂದಾಯ ಅಧಿಕಾರಿಗಳ ಕಚೇರಿ ಸೇರಿದಂತೆ ಎಲ್ಲಾ ಸರಕಾರಿ ಆಡಳಿತ ಸಂಕೀರ್ಣಗಳು ಒಂದೇ ಸೂರಿನಡಿ ಸ್ಥಾಪನೆ ಯಾದರೆ ಜನರಿಗೆ ಆನುಕೂಲವಾಗಲಿದೆ. ಬ್ರಿಟಿಷರ ಕಾಲದ ಪ್ರವಾಸಿ ಮಂದಿರವು ಪ್ರಸ್ತುತ ಸಂಪೂರ್ಣ ಶಿಥಿಲಾವಸ್ಥೆಯಲ್ಲಿದೆ. ಅದನ್ನು ತೆರವುಗೊಳಿಸಿ ಹೊಸ ಪ್ರವಾಸಿ ಮಂದಿರ ನಿರ್ಮಿಸಬೇಕಿದೆ. ರಿಕ್ಷಾ -ಟ್ಯಾಕ್ಷಿ ನಿಲ್ದಾಣಕ್ಕೆ ಪ್ರತ್ಯೇಕ ವ್ಯವಸ್ಥೆ ಆಗಬೇಕೆಂಬುದು ಬಹುದಿನ ಗಳ ಬೇಡಿಕೆ. ಉದ್ಯಾನವನವೊಂದನ್ನು ಸುಸಜ್ಜಿತ ವಾಗಿ ರೂಪಿಸಿದರೆ ಇಡೀ ಪ್ರದೇಶದ ಸೊಗಸು ಹೆಚ್ಚಲಿದೆ. ಸರ್ವೀಸ್ ರಸ್ತೆ ಗಿಳಿಯಾರು ತಿರುವಿನ ತನಕ ವಿಸ್ತರಣೆಯಾಗಬೇಕಿರುವುದು ತೀರಾ ಅಗತ್ಯ. ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಾಯಕಾರಿ ರೀತಿಯಲ್ಲಿರುವ ಅಮೃತೇಶ್ವರೀ ಜಂಕ್ಷನ್ ಬಳಿ ಸಾಕಷ್ಟು ಅಪಘಾತಗಳು ನಡೆಯುತ್ತಿದ್ದು ಇದಕ್ಕೆ ಪರಿಹಾರ ಹುಡುಕಬೇಕಿದೆ. ಉದ್ಯೋಗಗಳನ್ನು ಸೃಷ್ಟಿಸುವ ಉದ್ಯಮಗಳು, ಸಮುದಾಯ ಆರೋಗ್ಯ ಕೇಂದ್ರದಲ್ಲಿ ಇನ್ನಷ್ಟು ಸೌಲಭ್ಯ ಹಾಗೂ ಸುಸಜ್ಜಿತ ಆಸ್ಪತ್ರೆಗಳು ಅಗತ್ಯವಿವೆ.
ಅಂತರಗಂಗೆ ಎನ್ನುವ ಜಲಕಳೆ ಹಲವು ದಶಕದಿಂದ ರೈತರ ಕೃಷಿ ಬೆಳೆಗೆ ಮಾರಕವಾಗಿ ಪರಿಣಮಿಸುತ್ತಿದೆ. ಇದಕ್ಕೆ ಪರಿಹಾರ ಇನ್ನೂ ಸಿಕ್ಕಿಲ್ಲ. ಇಲ್ಲಿನ ದೊಡ್ಡ ಹೊಳೆಯಲ್ಲಿ ಹೂಳೆತ್ತದಿರುವುದು ಹಾಗೂ ಗಿಳಿಯಾರು ಕಿರು ಸೇತುವೆಯ ಗಾತ್ರ ಕಿರಿದಾಗಿರುವುದರಿಂದ ಪ್ರತೀ ವರ್ಷ ನೆರೆ ಹಾವಳಿ ಇದ್ದದ್ದೇ. ಈ ಸಮಸ್ಯೆಗಳಿಗೆ ಪರಿಹಾರ ತಿಳಿದಿರುವುದರಿಂದ ಅನುಷ್ಠಾನಗೊಳಿಸುವುದೊಂದೇ ಬಾಕಿ ಇದೆ. ಎಂ.ಪಿ.ಎಂ.ಸಿ. ಕೇಂದ್ರದಲ್ಲಿ ಕೃಷಿಗೆ ಪೂರಕವಾದ ಮತ್ತಷ್ಟು ಸೌಕರ್ಯಗಳು ಸಿಗುವಂತಾಗಬೇಕು. ಗ್ರಾಮಾಂತರ ಭಾಗದ ಮುಖ್ಯ ರಸ್ತೆಗೆ ಚರಂಡಿ ವ್ಯವಸ್ಥೆ ಒದಗಿಸದಿದ್ದರೆ ಮುಂದೆ ಸಮಸ್ಯೆಯಾಗಲಿದೆ. ಈ ದಿಸೆಯಲ್ಲೂ ಸ್ಥಳೀಯ ಆಡಳಿತ ಹಾಗೂ ಜನಪ್ರತಿನಿಧಿಗಳು ಯೋಚಿಸಬೇಕಿದೆ.
ಗಿಳಿಯಾರು ಬಹಳ ಮುಖ್ಯವಾದ ಗ್ರಾಮ. ಕೋಟ ಪ್ರದೇಶದ ಹೃದಯವಿದು. ಈ ಗ್ರಾಮಕ್ಕೀಗ ಹೊಳೆಯ ಹೂಳೆತ್ತುವಂಥ ಪ್ರಮುಖ ಸಮಸ್ಯೆಗಳಿಂದ ಮೂಲ ಸೌಕರ್ಯಗಳನ್ನು ಒದಗಿಸುವ ಅಭಿವೃದ್ಧಿ ಆಗಬೇಕಿದೆ.
ಭವಿಷ್ಯದ ತಾಲೂಕು ಕೇಂದ್ರ
ಕೋಟ ಹೋಬಳಿ 31 ಗ್ರಾಮ, 14 ಗ್ರಾ.ಪಂ. ಒಂದು ಪ.ಪಂ. ಒಳಗೊಂಡಿರುವ, 96,556 ಜನಸಂಖ್ಯೆ ಇರುವ ಕೋಟ ಹೋಬಳಿಯನ್ನು ಭವಿಷ್ಯದಲ್ಲಿ ತಾಲೂಕು ಕೇಂದ್ರವನ್ನಾಗಿಸಬೇಕು ಎನ್ನುವ ಬೇಡಿಕೆ ಇದೆ. ಒಂದು ವೇಳೆ ಕೋಟ ತಾ| ಕೇಂದ್ರವಾಗಿ ಮೇಲ್ದರ್ಜೆಗೇರಿದಲ್ಲಿ ಗಿಳಿಯಾರು ಗ್ರಾಮ ಮತ್ತಷ್ಟು ಅಭಿವೃದ್ಧಿ ಹೊಂದಲಿದೆ.
ಅಂದು ಶುಕಪುರ; ಇಂದು ಗಿಳಿಯಾರು
ಗಿಳಿಯಾರಿಗೆ ಪುರಾಣ ಕಾಲದಲ್ಲಿ ಶುಕಪುರ ಎನ್ನುವ ಹೆಸರು ಇತ್ತಂತೆ. ರಾವಣನ ಸಂಬಂಧಿ ಖರಾಸುರನು ರಾವಣನಿಗೆ ಎದುರಾದ ಸಮಸ್ಯೆಯೊಂದನ್ನು ದೂರಮಾಡಲೋಸುಗ ಮಾಯನಿಂದ ನಿರ್ಮಿತ ಐದು ಲಿಂಗವನ್ನು ತಂದು ಶುಕಪುರದ ಬೇರೆ-ಬೇರೆ ಕಡೆ ಪ್ರತಿಷ್ಠಾಪಿಸಿ ಪೂಜಿಸಿದನಂತೆ. ಇದರ ಪರಿಣಾಮ ಇಲ್ಲಿನ ಹಿರೇ ಮಹಾಲಿಂಗೇಶ್ವರನ ಕರುಣೆಯಿಂದ ರಾವಣನ ರೋಗ ಪರಿಹಾರವಾಯಿತಂತೆ. ಅನಂತರ ರಾವಣ ಕೂಡ ಒಮ್ಮೆ ಶುಕ ಪುರಕ್ಕೆ ಬಂದು ಮೂರು ಕೆರೆಗಳಲ್ಲಿ ಸ್ನಾನ ಮಾಡಿ, ಐದು ಲಿಂಗಗಳನ್ನು ಅರ್ಚಿಸಿ ತೆರಳಿದ ಎನ್ನುವ ಪ್ರತೀತಿ ಇದೆ.
ಅಭಿವೃದ್ಧಿಗೆ ಒತ್ತು: ಗಿಳಿಯಾರು ಗ್ರಾಮದ ಹೊಳೆಯ ಹೂಳಿನ ಸಮಸ್ಯೆ ಪರಿಹಾರಕ್ಕಾಗಿ ರೈತರು ಈಗಾಗಲೇ ಹೋರಾಟ ನಡೆಸುತ್ತಿದ್ದು ಗ್ರಾ.ಪಂ. ಅಗತ್ಯವಿರುವ ಎಲ್ಲಾ ಸಹಕಾರ ನೀಡುತ್ತಿದೆ. –
ಅಜಿತ್ ದೇವಾಡಿಗ, ಅಧ್ಯಕ್ಷರು ಕೋಟ ಗ್ರಾ.ಪಂ.
ಅಭಿವೃದ್ಧಿಗೆ ಅವಕಾಶ: ಗಿಳಿಯಾರು ಗ್ರಾಮವು ಹೋಬಳಿ ಕೇಂದ್ರ ಕೋಟ ಪೇಟೆಯನ್ನು ಒಳಗೊಂಡಿರುವುದರಿಂದ ಅಭಿವೃದ್ದಿಗೆ ಸಾಕಷ್ಟು ಅವಕಾಶವಿದೆ. ಜತೆಗೆ ಗ್ರಾಮಾಂತರ ಭಾಗದ ಸಮಸ್ಯೆಗಳ ಪರಿಹಾರಕ್ಕೆ ಒತ್ತು ನೀಡಬೇಕಿದೆ. –
ಟಿ.ಮಂಜುನಾಥ ಗಿಳಿಯಾರು,ಸ್ಥಳೀಯರು
-ರಾಜೇಶ್ ಗಾಣಿಗ ಅಚ್ಲಾಡಿ