ಶ್ರೀನಗರ/ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಜೂ.14ರಂದು ಹಿರಿಯ ಪತ್ರಕರ್ತ ಶುಜಾತ್ ಬುಖಾರಿ ಹತ್ಯೆಗೆ ಸಂಚು ರೂಪಿಸಿದಾತ ಬೆಂಗಳೂರಿನ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಎಂಬಿಎ ಪಡೆದಿದ್ದ. ಜತೆಗೆ ಲ್ಯಾಬ್ ಟೆಕ್ನಿಶಿಯನ್ ಕೂಡ ಆಗಿದ್ದ ಎಂಬ ವಿಚಾರ ಬೆಳಕಿಗೆ ಬಂದಿದೆ. ಈ ಕೃತ್ಯದ ಸೂತ್ರಧಾರನನ್ನು ಲಷ್ಕರ್-ಎ- ತೊಯ್ಬಾ ಉಗ್ರ ಸಂಘಟನೆಯ ಸಜ್ಜದ್ ಗುಲ್ (48) ಎಂದು ಗುರುತಿಸಲಾಗಿದೆ. ಈ ಬಗ್ಗೆ “ದ ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ. ಈತ 2008ರ ಮುಂಬಯಿ ದಾಳಿಯ ರೂವಾರಿ ಹಫೀಜ್ ಸಯೀದ್‌ನ ಆಣತಿಯಂತೆ ಹತ್ಯೆ ಸಂಚು ರೂಪಿಸಿದ್ದಾನೆ ಎಂದು ಕೇಂದ್ರ ಗುಪ್ತಚರ ಮೂಲಗಳು ದೃಢಪಡಿಸಿವೆ.
ಐದು ವರ್ಷಗಳ ಹಿಂದೆ ಈತ ಪಾಕಿಸ್ಥಾನಕ್ಕೆ ತೆರಳಿದ್ದು, ಸದ್ಯ ರಾವಲ್ಪಿಂಡಿಯ ನಿವಾಸಿ. ಆತ ಲಷ್ಕರ್ ಸಂಘಟನೆಗಾಗಿ ಯುವಕರನ್ನು ನೇಮಿಸುವ ಕೃತ್ಯದಲ್ಲಿಯೂ ತೊಡಗಿಸಿಕೊಂಡಿದ್ದಾನೆ ಎನ್ನಲಾಗಿದೆ.
ಮಾರ್ಚ್‌ನಲ್ಲಿ ಪಾಕಿಸ್ಥಾನದಲ್ಲಿಯೇ ಪತ್ರಕರ್ತ ಬುಖಾರಿ ಹತ್ಯೆಗೆ ಸಂಚು ರೂಪಿಸಲು ಸಿದ್ಧತೆ ಶುರುವಾಗಿತ್ತು. ಉಗ್ರ ಸಂಬಂಧಿ ಚಟುವಟಿಕೆಗಳಲ್ಲಿ ಭಾಗಿಯಾ ಗಿದ್ದಕ್ಕೆ ಗುಲ್ ಶ್ರೀನಗರ ಮತ್ತು ದಿಲ್ಲಿಯ ತಿಹಾರ್ ಜೈಲಿನಲ್ಲಿ ಜೈಲು ಶಿಕ್ಷೆಯನ್ನೂ ಅನುಭವಿಸಿದ್ದ. ಗುಲ್ ಕಾಶ್ಮೀರಕ್ಕೆ ಸೇರಿದವ ನಾದ್ದರಿಂದ ಸ್ಥಳೀಯರ ಬಗ್ಗೆ ಹೆಚ್ಚಿನ ಮಾಹಿತಿ ಇರುವ ಕಾರಣದಿಂದಲೇ ಈ ಕೃತ್ಯವನ್ನು ಎಸಗಲು ಆತನಿಗೇ ವಹಿಸಲಾಗಿತ್ತು. ಗುರುವಾರ ಪೊಲೀಸರೂ ಇದೇ ಮಾಹಿತಿ ಖಚಿತಪಡಿಸಿದ್ದಾರೆ ಮಾತ್ರವಲ್ಲ ನಾಲ್ವರು ಶಂಕಿತರ ಫೋಟೋಗಳನ್ನೂ ಬಿಡುಗಡೆ ಮಾಡಿದ್ದಾರೆ.