Advertisement

ಬುಖಾರಿ ಹತ್ಯೆ: ಶಾಂತಿಮಂತ್ರ ನಿರರ್ಥಕ

06:00 AM Jun 16, 2018 | Team Udayavani |

ಕಾಶ್ಮೀರದ ಹಿರಿಯ ಪತ್ರಕರ್ತ, ರೈಸಿಂಗ್‌ ಕಾಶ್ಮೀರ್‌ ಪತ್ರಿಕೆಯ ಸಂಪಾದಕ ಶುಜಾತ್‌ ಬುಖಾರಿಯ ಹತ್ಯೆ ಕೇಂದ್ರವು ಕಾಶ್ಮೀರದ ಕುರಿತಾದ ನಿಲುವನ್ನು ಪರಾಮರ್ಶಿಸುವ ಅಗತ್ಯವನ್ನು ಎತ್ತಿ ತೋರಿಸಿದೆ. ರಂಜಾನ್‌ ಮಾಸದಲ್ಲೇ ಉಗ್ರರು ಈ ಕೃತ್ಯವೆಸಗಿದ್ದಾರೆ. ಕೇಂದ್ರ ಸರಕಾರ ಏಕಪಕ್ಷೀಯವಾಗಿ ಘೋಷಿಸಿದ್ದ ಕದನ ವಿರಾಮ ಕೊನೆಯಾಗಲು ಎರಡು ದಿನ ಬಾಕಿಯಿರುವಂತೆ ಚಿಂತಕನನ್ನು ಸಾಯಿಸುವುದು ಕದನ ವಿರಾಮದ ಘೋರ ವೈಫ‌ಲ್ಯವನ್ನು ತಿಳಿಸುತ್ತದೆ. ಹಾಗೇ ನೋಡಿದರೆ ಕದನ ವಿರಾಮದ ಕಾಶ್ಮೀರದಲ್ಲಿ ಹಿಂಸಾಚಾರವೇನೂ ಕಡಿಮೆಯಾಗಿರಲಿಲ್ಲ, ಬದಲಾಗಿ ಹೆಚ್ಚೇ ಆಗಿತ್ತು. ಉಗ್ರರೆದುರು ಶಾಂತಿಯ ಮಂತ್ರ ಜಪಿಸುವುದು ನಿರರ್ಥಕ ಎನ್ನುವುದು ಇದರಿಂದ ಸಾಬೀತಾಗಿದೆ. ಬುಖಾರಿಯನ್ನು ಹತ್ಯೆಗೈದು ದಿನವೇ ಉಗ್ರರು, ರಂಜಾನ್‌ ಹಬ್ಬಕ್ಕಾಗಿ ರಜೆ ಪಡೆದುಕೊಂಡು ಮನೆಗೆ ಬಂದಿದ್ದ ಯೋಧರೊಬ್ಬರನ್ನು ಅಪಹರಿಸಿ ಕೊಂದಿದ್ದಾರೆ. ಕಾಶ್ಮೀರಕ್ಕೆ ಸಂಬಂಧಿಸಿ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗ ನೀಡಿರುವ ನಕರಾತ್ಮಕ ವರದಿ ಪ್ರಕಟವಾದ ಸಂದರ್ಭದಲ್ಲೇ ಕಣಿವೆಯಲ್ಲಿ ಹಿಂಸಾಚಾರ ತೀವ್ರಗೊಂಡಿರುವುದು ಇನ್ನೊಂದು ಗಮನಿಸಬೇಕಾದ ಅಂಶ. 

Advertisement

ಶುಜಾತ್‌ ಬುಖಾರಿ ಹತ್ಯೆ ಕಾಶ್ಮೀರಕ್ಕೆ ತುಂಬಲಾರದ ನಷ್ಟವೇ ಸರಿ. ಸುಧಾರಣಾವಾದಿ ನಿಲುವು ಹೊಂದಿದ್ದ ಬುಖಾರಿ ದ ಹಿಂದು ಮತ್ತು ಫ್ರಂಟ್‌ಲೆನ್‌ ಪತ್ರಿಕೆಗಳಿಗೆ ವರದಿಗಾರರಾಗಿದ್ದರು. ಸ್ವಂತ ಪತ್ರಿಕೆಯನ್ನು ಪ್ರಾರಂಭಿಸುವವರೆಗೂ ಅವರು ದೇಶದ ಪ್ರಮುಖ ಪತ್ರಿಕೆಗಳಿಗೆ ಕಾಶ್ಮೀರಕ್ಕೆ ಸಂಬಂಧಿಸಿದಂತೆ ಬರೆಯುತ್ತಿದ್ದರು. ಈ ರಕ್ತಪಾತ ಕೊನೆಯಾಗಬೇಕೆಂಬ ಕಾಳಜಿ ಅವರ ಲೇಖನಗಳಲ್ಲಿ ಇರುತ್ತಿತ್ತು. ಸಂಧಾನದಿಂದ ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು ಎಂದು ಅವರು ಪ್ರತಿಪಾದಿ ಸುತ್ತಿದ್ದರು. ಕಾಶ್ಮೀರಕ್ಕೆ ಸಂಬಂಧಿಸಿದಂತೆ ದೇಶದ ಉಳಿದ ಭಾಗದಲ್ಲಿ ಇರುವ ನಕಾರಾತ್ಮಕವಾದ ಅಭಿಪ್ರಾಯಗಳಿಗೆ ಸಂಬಂಧಿಸಿದಂತೆ ಅವರಿಗೆ ನೋವಿತ್ತು. ಈ ಅಭಿಪ್ರಾಯ ಬದಲಾಯಿಸಲು ಅವರು ತನ್ನ ಪತ್ರಿಕೆಯ ಮೂಲಕ ಪ್ರಯತ್ನಿಸುತ್ತಿದ್ದರು. ನಿಷ್ಪಕ್ಷಪಾತವಾಗಿ ಬರೆಯುತ್ತಿದ್ದ, ವಾಸ್ತವವನ್ನು ವಸ್ತುನಿಷ್ಠವಾಗಿ ಓದುಗರ ಮುಂದಿಡುತ್ತಿದ್ದ ಕೆಲವೇ ಪತ್ರಕರ್ತರಲ್ಲಿ ಬುಖಾರಿ ಒಬ್ಬರಾಗಿದ್ದರು. ಸಹೋದರ ಜಮ್ಮು-ಕಾಶ್ಮೀರ ಸರಕಾರದಲ್ಲಿ ಮಂತ್ರಿ ಯಾಗಿದ್ದರೂ ಬುಖಾರಿ ಯಾವುದೇ ಆಮಿಷಗಳಿಗೆ ಬಲಿಯಾಗದೆ ಪತ್ರಿಕಾ ಧರ್ಮವನ್ನು ಪಾಲಿಸುತ್ತಿದ್ದರು. ಕೇಂದ್ರ ಘೋಷಿಸಿದ ಕದನ ವಿರಾಮವನ್ನು ಸ್ವಾಗತಿಸಿದವರಲ್ಲಿ ಅವರು ಮುಂಚೂಣಿಯಲ್ಲಿದ್ದರು.

ಕಣಿವೆಯಲ್ಲಿ ಶಾಂತಿಯ ಅಗತ್ಯವನ್ನು ಪ್ರತಿಪಾದಿಸುತ್ತಿದ್ದ ಬುಖಾರಿ ಉಗ್ರರ ಕೆಂಗಣ್ಣಿಗೆ ಗುರಿಯಾಗಿದ್ದು ಸಹಜವೇ ಆಗಿತ್ತು. ಜೀವ ಬೆದರಿಕೆ ಇದ್ದ ಕಾರಣ ಅವರಿಗೆ ಅಂಗರಕ್ಷಕರನ್ನೂ ಒದಗಿಸಲಾಗಿತ್ತು. ಆದರೆ ಪಾಕಿಸ್ತಾನ ಪ್ರಾಯೋಜಿತ ಉಗ್ರರಿಗೆ ಕಾಶ್ಮೀರದಲ್ಲಿ ಶಾಂತಿ ಸ್ಥಾಪನೆಯಾಗುವುದು ಬೇಕಿಲ್ಲ. ಹಾಗೊಂದು ವೇಳೆ ಕಾಶ್ಮೀರ ಸಹಜ ಸ್ಥಿತಿಗೆ ಬಂದರೆ ಅವರ ಉದ್ದೇಶವೇ ವಿಫ‌ಲ ವಾಗಿಬಿಡುತ್ತದೆ. ರಂಜಾನ್‌ ಸಂದರ್ಭದಲ್ಲೇ ನಡೆದಿರುವ ಹತ್ಯೆಗಳು ಕಾಶ್ಮೀರ ಭದ್ರತಾ ಪಡೆಗಳಿಗೆ ಮಾತ್ರವಲ್ಲದೆ ಶಾಂತಿಯ ಪ್ರತಿಪಾದಕರಿಗೆ ಮತ್ತು ಪತ್ರಕರ್ತರಿಗೂ ಅಪಾಯಕಾರಿ ಸ್ಥಳ ಎನ್ನುವುದನ್ನು ಮತ್ತೆ ನೆನಪಿಸುತ್ತಿದೆ. 2002ರಲ್ಲಿ ಶಾಂತಿ ಸ್ಥಾಪನೆ ಕುರಿತು ಮಾತನಾಡಿದ ಪ್ರತ್ಯೇಕವಾದಿ ನಾಯಕ ಅಬ್ದುಲ್‌ ಘನಿ ಲೋನ್‌ ಅವರನ್ನು ಉಗ್ರರು ಇದೇ ರೀತಿ ಬರ್ಬರವಾಗಿ ಸಾಯಿಸಿದ್ದರು. ಯಾವ ಕಾರಣಕ್ಕೂ ಕಾಶ್ಮೀರದಲ್ಲಿ ಶಾಂತಿ ಸ್ಥಾಪಿಸಲು ಅವಕಾಶ ಕೊಡಬಾರದು ಎನ್ನುವುದೇ ಉಗ್ರರ ಧ್ಯೇಯವಾಗಿರುವುದರಿಂದ ಕೇಂದ್ರ ಕಾಶ್ಮೀರಕ್ಕೆ ಸಂಬಂಧಿಸಿದಂತೆ ತನ್ನ ಧೋರಣೆಯಲ್ಲಿ ಆಮೂಲಾಗ್ರವಾದ ಬದಲಾವಣೆಯನ್ನು ಮಾಡಿಕೊಳ್ಳುವ ಅಗತ್ಯ ಕಂಡು ಬರುತ್ತಿದೆ.

ಕದನ ವಿರಾಮ ಘೋಷಣೆಯಾದ ಬಳಿಕ ಭದ್ರತಾ ಪಡೆಗಳ ಮೇಲೆ ನಿರಂತರವಾಗಿ ಆಕ್ರಮಣವಾಗಿದೆ ಹಾಗೂ ಗಡಿಯಾಚೆಗಿನಿಂದಲೂ ಪದೇ ಪದೇ ದಾಳಿಯಾಗಿದೆ. ಹಲವು ಉಗ್ರರನ್ನು ಸಾಯಿಸಲಾಗಿದೆ ಹಾಗೂ ಇದೇ ವೇಳೆ ಕೆಲವು ಯೋಧರೂ ಹುತಾತ್ಮರಾಗಿದ್ದಾರೆ. ಮೋದಿ ಸರಕಾರದ ಶಾಂತಿಯ ಕೊಡುಗೆಗೆ ಪಾಕಿಸ್ತಾನ ತೋರ್ಪಡಿಸಿರುವ ಈ ಪ್ರತಿಸ್ಪಂದನ ಮುಂದಿನ ದಿನಗಳಲ್ಲಿ ಕಾಶ್ಮೀರಕ್ಕೆ ಸಂಬಂಧಿಸಿದಂತೆ ಕೈಗೊಳ್ಳುವ ನಿರ್ಧಾರಗಳಿಗೆ ದಿಕ್ಸೂಚಿಯಾಗಬೇಕು. ಪಾಕಿಸ್ತಾನಕ್ಕೆ ಮತ್ತು ಅದು ಪೋಷಿಸುತ್ತಿರುವ ಉಗ್ರರಿಗೆ ಶಾಂತಿಯ ಪಾಠ ಅರ್ಥವಾಗುವುದಿಲ್ಲ ಎಂದಾದರೆ ಅವರಿಗೆ ಅರ್ಥವಾಗುವ ರೀತಿಯಲ್ಲೇ ಪಾಠ ಮಾಡಬೇಕು. ಇದಕ್ಕೂ ಮೊದಲು ಜಮ್ಮು-ಕಾಶ್ಮೀರದ ನಾಗರಿಕರ ಜೀವ ಮತ್ತು ಆಸ್ತಿಪಾಸ್ತಿ ರಕ್ಷಣೆಗೂ ಆದ್ಯತೆ ನೀಡಬೇಕು ಹಾಗೂ ಪತ್ರಕರ್ತರಿಗೆ ಮುಕ್ತವಾಗಿ ಕೆಲಸ ಮಾಡುವ ವಾತಾವರಣವನ್ನು ಸೃಷ್ಟಿಸಬೇಕು. 

Advertisement

Udayavani is now on Telegram. Click here to join our channel and stay updated with the latest news.

Next