ಮುಂಬೈ: ವೆಸ್ಟ್ ಇಂಡೀಸ್ ಮತ್ತು ಸದ್ಯ ನಡೆಯುತ್ತಿರುವ ಜಿಂಬಾಬ್ವೆ ವಿರುದ್ದದ ಏಕದಿನ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರುತ್ತಿರುವ ಯುವ ಬ್ಯಾಟರ್ ಶುಭ್ಮನ್ ಗಿಲ್ ಗೆ ಪ್ರಮೋಶನ್ ಸಿಗುವ ಲಕ್ಷಣ ಗೋಚರಿಸುತ್ತಿದೆ. ನ್ಯೂಜಿಲ್ಯಾಂಡ್ ಎ ತಂಡದ ವಿರುದ್ಧದ ಸರಣಿಗಾಗಿ ಭಾರತ ಎ ತಂಡಕ್ಕೆ ಗಿಲ್ ನಾಯಕತ್ವ ವಹಿಸುವುದು ಬಹುತೇಕ ಖಚಿತವಾಗಿದೆ.
ಮುಂದಿನ ತಿಂಗಳು ಭಾರತ ಎ ತಂಡ ತವರಿನಲ್ಲಿ ನ್ಯೂಜಿಲ್ಯಾಂಡ್ ಎ ತಂಡದ ವಿರುದ್ಧ ನಾಲ್ಕು ದಿನಗಳ ಟೆಸ್ಟ್ ಪಂದ್ಯಗಳು ಮತ್ತು ಏಕದಿನ ಸರಣಿಯನ್ನು ಆಡಲಿದೆ.
ನ್ಯೂಜಿಲೆಂಡ್ ‘ಎ’ ವಿರುದ್ಧದ ಮೂರು ಪಂದ್ಯಗಳು ಸೆಪ್ಟೆಂಬರ್ 1-4, 8-11 ಮತ್ತು 15-18 ರವರೆಗೆ ನಡೆಯಲಿದ್ದು, ಅವೆಲ್ಲವೂ ಬೆಂಗಳೂರಿನಲ್ಲಿ ನಡೆಯಲಿವೆ. ಮೂರು ಏಕದಿನ ಪಂದ್ಯಗಳು ಸೆ 22, 25, ಮತ್ತು 27 ರಂದು ನಡೆಯಲಿದ್ದು, ಈ ಮೂರು ಪಂದ್ಯಗಳಿಗೆ ಚೆನ್ನೈ ಆತಿಥ್ಯ ವಹಿಸಲಿದೆ.
ಇದನ್ನೂ ಓದಿ:ಕನ್ನಡದಲ್ಲಿ ಬಿಝಿಯಾದ ರಚೆಲ್ ಡೇವಿಡ್
ಭಾರತ ಎ ತಂಡದಲ್ಲಿ ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್ ಆಡಲಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಕಳೆದ ರಣಜಿ ಕೂಟದಲ್ಲಿ ಉತ್ತಮ ಪ್ರದರ್ಶನ ತೋರಿದ್ದ ಸ್ಪಿನ್ನರ್ ಶಮ್ಸ್ ಮಲಾನಿ ಕೂಡಾ ಮೊದಲ ಬಾರಿ ಎ ತಂಡದ ಕರೆ ಪಡೆಯಲಿದ್ದಾರೆ ಎನ್ನಲಾಗಿದೆ. ಯುವ ಆಟಗಾರರಾದ ಸರ್ಫರಾಜ್ ಖಾನ್ ಮತ್ತು ಯಶಸ್ವಿ ಜೈಸ್ವಾಲ್ ಕೂಡ ಬಿಸಿಸಿಐನಿಂದ ತಂಡದಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಿದೆ.