ಇಂಧೋರ್: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಭಾರತ ಮತ್ತೊಮ್ಮೆ ಬ್ಯಾಟಿಂಗ್ ಪರಾಕ್ರಮ ತೋರಿಸಿದೆ. ಇಂಧೋರ್ ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಶುಭಮನ್ ಗಿಲ್ ಮತ್ತು ಶ್ರೇಯಸ್ ಅಯ್ಯರ್ ಶತಕ ಬಾರಿಸಿ ಮಿಂಚಿದ್ದಾರೆ.
ಟಾಸ್ ಗೆದ್ದ ಆಸ್ಟ್ರೆಲಿಯಾ ಭಾರತವನ್ನು ಮೊದಲು ಬ್ಯಾಟಿಂಗ್ ಗೆ ಆಹ್ವಾನಿಸಿತು. ಇದಕ್ಕೆ ಫಲವಾಗಿ ಆರಂಭದಲ್ಲೇ ರುತುರಾಜ್ ಗಾಯಕ್ವಾಡ್ ವಿಕೆಟ್ ಪಡೆಯುವಲ್ಲಿ ಸಫಲವಾಯಿತು. 8 ರನ್ ಗಳಿಸಿದ್ದ ರುತುರಾಜ್ ಅವರು ಹೇಜಲ್ ವುಡ್ ಬಲೆಗೆ ಬಿದ್ದರು. ಆದರೆ ಬಳಿಕ ಜೊತೆಯಾದ ಶುಭ್ಮನ್ ಗಿಲ್ ಮತ್ತು ಶ್ರೇಯಸ್ ಅಯ್ಯರ್ ಆಸೀಸ್ ಬೌಲರ್ ಗಳ ಬೆಂಡೆತ್ತಿದರು.
ಕ್ರೀಸ್ ಗೆ ಆಗಮಿಸಿದ ಅಯ್ಯರ್ ಆರಂಭದಿಂದಲೇ ಬಿರುಸಿನ ಆಟಕ್ಕೆ ನಿಂತರು. ಇನ್ನಿಂಗ್ಸ್ ನ 9.5 ಓವರ್ ವೇಳೆ ಸ್ವಲ್ಪ ಕಾಲ ಮಳೆ ಕಾಟ ನೀಡಿತು. ಇದುವರೆಗೆ ನಿಧಾನವಾಗಿ ರನ್ ಪೇರಿಸುತ್ತಿದ್ದ ಗಿಲ್ ಬಳಿಕ ಅಯ್ಯರ್ ಜೊತೆಗೆ ತಾನೂ ವೇಗವಾಗಿ ಬ್ಯಾಟ್ ಬೀಸಿದರು. ಮೊದಲ ಪಂದ್ಯವಾಡುತ್ತಿರುವ ಸ್ಪೆನ್ಸರ್ ಜಾನ್ಸನ್ ದುಬಾರಿಯಾದರು.
ಈ ಇಬ್ಬರ ಜೊತೆಯಾಟದಲ್ಲಿ ಮೊದಲು ಶ್ರೇಯಸ್ ಅಯ್ಯರ್ ಶತಕ ಪೂರೈಸಿದರು. ಶಸ್ತ್ರಚಿಕಿತ್ಸೆಯ ಬಳಿಕ ಬ್ಯಾಟಿಂಗ್ ಫಾರ್ಮ್ ಕಂಡುಕೊಂಡ ಅಯ್ಯರ್ ತಮ್ಮ ಮೂರನೇ ಏಕದಿನ ಶತಕ ಬಾರಿಸಿದರು. 86 ಎಸೆತಗಳಲ್ಲಿ ಮೂರು ಸಿಕ್ಸರ್ ಮತ್ತು 10 ಬೌಂಡರಿಯೊಂದಿಗೆ ಅಯ್ಯರ್ ಶತಕ ಪೂರೈಸಿದರು. 105 ರನ್ ಗಳಿಸಿ ಸೀನ್ ಅಬಾಟ್ ಎಸೆತದಲ್ಲಿ ಔಟಾದರು.
ತಮ್ಮ ಅದ್ಭುತ ಫಾರ್ಮ್ ಮುಂದುವರಿಸಿರುವ ಶುಭ್ಮನ್ ಗಿಲ್ ಏಕದಿನ ಕ್ರಿಕೆಟ್ ನಲ್ಲಿ ಮತ್ತೊಂದು ಶತಕ ಬಾರಿಸಿದರು. 92 ಎಸೆತದಲ್ಲಿ ಶತಕ ಪೂರೈಸಿದ ಗಿಲ್ ತಂಡಕ್ಕೆ ಮತ್ತೊಮ್ಮೆ ಉತ್ತಮ ಆರಂಭ ಒದಗಿಸಿದರು. ಒಟ್ಟು ಆರನೇ ಆಟ ಏಕದಿನ ಶತಕ ಬಾರಿಸಿದ ಗಿಲ್ ಈ ವರ್ಷದಲ್ಲೇ ಐದನೇ ಶತಕ ಪೂರೈಸಿದರು.
ಅಯ್ಯರ್ ಮತ್ತು ಗಿಲ್ ಎರಡನೇ ವಿಕೆಟ್ ಗೆ ಭರ್ತಿ ಇನ್ನೂರು ರನ್ ಜೊತೆಯಾಟವಾಡಿದರು.