ಹೊಸದಿಲ್ಲಿ: ಇಲ್ಲಿನ ಐಎಸ್ ಬಿಂದ್ರಾ ಸ್ಟೇಡಿಯಂನಲ್ಲಿ ನಡೆದ ರಣಜಿ ಪಂದ್ಯ ಹೈಡ್ರಾಮಾವೊಂದಕ್ಕೆ ಕಾರಣವಾಗಿದೆ. ಅಂಪೈರ್ ಔಟ್ ತೀರ್ಪು ನಿಡಿದರೂ ಆಟಗಾರ ಶುಭ್ಮನ್ ಗಿಲ್ ಕ್ರೀಸ್ ಬಿಟ್ಟು ಹೋಗದೆ ಪಂದ್ಯ ಹತ್ತು ನಿಮಿಷಗಳ ಸ್ಥಗಿತವಾಗಿದೆ.
ಪಂಜಾಬ್ ಮತ್ತು ಡೆಲ್ಲಿ ನಡುವಿನ ರಣಜಿ ಪಂದ್ಯದಲ್ಲಿ ಈ ವಿವಾದ ನಡೆದಿದೆ. ಬ್ಯಾಟಿಂಗ್ ಮಾಡುತ್ತಿದ್ದ ಪಂಜಾಬ್ ಬ್ಯಾಟ್ಸಮನ್ ಶುಭ್ಮನ್ ಗಿಲ್ 10 ರನ್ ಗಳಿಸಿದ್ದ ವೇಳೆ ಸುಭೋದ್ ಭಾಟಿ ಎಸೆತದಲ್ಲಿ ವಿಕೆಟ್ ಕೀಪರ್ ಕ್ಯಾಚ್ ನೀಡಿರುವುದನ್ನು ಪರಿಗಣಿಸಿ ಅಂಪೈರ್ ಮೊಹಮ್ಮದ್ ರಫಿ ಔಟ್ ನೀಡಿದರು.
ಆದರೆ ಅಂಪೈರ್ ತೀರ್ಪನ್ನು ಒಪ್ಪದ ಶುಭ್ಮನ್ ಗಿಲ್ ಕ್ರೀಸ್ ಬಿಟ್ಟು ಕದಲಲಿಲ್ಲ. ತಾನು ನಾಟ್ ಔಟ್ ಎಂದು ಪಟ್ಟು ಹಿಡಿದಿದು ಅಂಪೈರ್ ಗಳ ಜೊತೆಗೆ ವಾಗ್ವಾದಕ್ಕೆ ಇಳಿದರು.
ಇದೇ ಮೊದಲ ಬಾರಿಗೆ ರಣಜಿ ಅಂಪೈರಿಂಗ್ ಮಾಡುತ್ತಿರುವ ಸ್ಕ್ವಾರ್ ಲೆಗ್ ಅಂಪೈರ್ ಪಶ್ಚಿಮ್ ಪಾಠಕ್ ಜೊತೆಗೆ ಚರ್ಚಿಸಿದ ಮೊಹಮ್ಮದ್ ರಫಿ ತಮ್ಮ ನಿರ್ಣಯವನ್ನು ಬದಲಾಯಿಸಿ ಗಿಲ್ ನಾಟ್ ಔಟ್ ಎಂಬ ತೀರ್ಮಾನ ನೀಡಿದರು!
ಗಿಲ್ ಗೆ ಮರಳಿ ಆಡಲು ಅವಕಾಶ ನೀಡಿದ ಅಂಪೈರ್ ತೀರ್ಮಾನದಿಂದ ಕುಪಿತರಾದ ದಿಲ್ಲಿ ಆಟಗಾರರು ವಾಕ್ ಔಟ್ ಮಾಡಲು ತೀರ್ಮಾನಿಸಿದ್ದರು ಎಂದು ವರದಿಯಾಗಿತ್ತು.
ಮತ್ತೆ ಬ್ಯಾಟಿಂಗ್ ಮುಂದುವರಿಸಿದ ಶುಭ್ಮನ್ ಗಿಲ್ 23 ರನ್ ಮಾಡಿ ಔಟಾದರು.