ಧಾರವಾಡ: ಹವ್ಯಾಸ, ಆರೋಗ್ಯಕ್ಕಾಗಿ ಕಲಿತ ಯೋಗದಿಂದ ಬದುಕು ಕಟ್ಟಿಕೊಳ್ಳಲು ವಿದೇಶಕ್ಕೆ ಹಾರಿದ ಯೋಗಪಟುಗಳು ಅಲ್ಲಿ ಯೋಗ ಶಿಕ್ಷಕರಾಗಿ ಸೈ ಅನ್ನಿಸಿಕೊಂಡಿದ್ದು, ತಮ್ಮದೇ ಯೋಗ ಕೇಂದ್ರವನ್ನೂ ಆರಂಭಿಸಿದ್ದಾರೆ.
ಹುಬ್ಬಳ್ಳಿ ತಾಲೂಕಿನ ಉಮಚಗಿ ಗ್ರಾಮದ ಸಂತೋಷ ಉಮಚಗಿ, ಧಾರವಾಡದ ದೇವರಾಜ ದೇವಾಡಿಗ ಹಾಗೂ ಕುಂದಗೋಳದ ಮಂಜುನಾಥ ಕಲ್ಮಠ ಅವರೇ ಈ ಯೋಗ ಸಾಧಕರು. ಈ ಮೂವರು ಸೇರಿ ವಿಯೆಟ್ನಾಂ ಎಂಬ ಪುಟ್ಟ ದೇಶದಲ್ಲಿ ಆರಂಭಿಸಿರುವ ಶುಭ, ಯೋಗ ಹೆಸರಿನ ಎರಡು ಕೇಂದ್ರಗಳು ಆ ದೇಶದ ಜನರ ಪ್ರೀತಿಗೆ ಪಾತ್ರವಾಗಿವೆ. ಹೊಚಿಮನ್ ಹಾಗೂ ಬಿನ್ನಹಾ ಎಂಬ ಪ್ರಮುಖ ನಗರಗಳ ಮಧ್ಯೆ ಕೇವಲ 30 ಕಿಮೀ ಅಂತರವಿದೆ. ಈ ಎರಡೂ ನಗರಗಳಲ್ಲಿ ಶುಭ ಯೋಗ ಕೇಂದ್ರಗಳು ಕಳೆದ ನಾಲ್ಕು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿವೆ. ಹಾವೇರಿಯ ವೆಂಕಟೇಶ ನಾಡಕರ್ಣಿ, ಧಾರವಾಡದ ಸುನೀಲ ಜಾಲಿಮರದ, ಗದಗದ ದೊಡ್ಡನಗೌಡ ಪರಂಗಿ ಸಹ ಈ ಕೇಂದ್ರಗಳಲ್ಲಿ ಯೋಗ ಶಿಕ್ಷಕರಾಗಿದ್ದಾರೆ.
ಶುಭಾರಂಭ: ಕಳೆದ 8ರಿಂದ 10 ವರ್ಷ ಯೋಗ ಶಿಕ್ಷಕರಾಗಿ ಕೆಲಸ ಮಾಡಿದವರಿಗೆ ತಮ್ಮದೇ ಯೋಗ ಕೇಂದ್ರ ಆರಂಭಿಸುವ ಕನಸು ಮೊಳಕೆಯೊಡೆದಿದೆ. ಆದರೆ ಅವರ ಮಾಲೀಕತ್ವದಲ್ಲಿ ಕೇಂದ್ರ ಆರಂಭಿಸಲು ಆ ದೇಶದಲ್ಲಿ ಅವಕಾಶವಿಲ್ಲ. ಹೀಗಾಗಿ ಸ್ಥಳೀಯರ ನೆರವಿನೊಂದಿಗೆ ಶುಭ, ಯೋಗ ಎಂಬ ಎರಡು ಕೇಂದ್ರಗಳನ್ನು ಆರಂಭ ಮಾಡಿದ್ದು, ಇದರ ಫಲವಾಗಿ ಈಗ ಮಂಜುನಾಥ ಹಾಗೂ ದೇವರಾಜ ನಿರ್ದೇಶಕರಾಗಿದ್ದರೆ ಸಂತೋಷ ಉಮಚಗಿ ಆ ಕೇಂದ್ರಗಳ ವ್ಯವಸ್ಥಾಪಕರಾಗಿದ್ದಾರೆ. 2015 ಆ.25ರಿಂದ ಕಾರ್ಯಾರಂಭ ಮಾಡಿರುವ ಈ ಕೇಂದ್ರಗಳಲ್ಲಿ ಅಖಂಡ ಧಾರವಾಡದ ಆರು ಜನ ಯೋಗ ಕಲಿಸುತ್ತಿದ್ದಾರೆ.ಬೆಳಗ್ಗೆ 6ರಿಂದ ರಾತ್ರಿ 8 ಗಂಟೆವರೆಗೆ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಸದ್ಯ ಈ ಎರಡೂ ಕೇಂದ್ರದಲ್ಲಿ ನಿತ್ಯ 600 ಜನ ಯೋಗಾಭ್ಯಾಸಕ್ಕೆ ಭೇಟಿ ನೀಡುತ್ತಿದ್ದಾರೆ.
ಕುಂದಗೋಳ ಶಿವಾನಂದ ಮಠವೇ ಮೂಲ: ವಿಯ್ನೆಟಾಂನಲ್ಲಿ ಭಾರತೀಯ ಮೂಲದ ಯೋಗ ಶಿಕ್ಷಕರಿಗೆ ಭಾರಿ ಬೇಡಿಕೆ ಇದೆ. ಅಲ್ಲಿನ ಬಹುತೇಕ ಯೋಗ ಸೆಂಟರ್‌ನ ಶಿಕ್ಷಕರು ಭಾರತೀಯ ಮೂಲದವರೇ ಇದ್ದು, 50ಕ್ಕೂ ಹೆಚ್ಚು ಕನ್ನಡಿಗರಾಗಿದ್ದಾರೆ. ಈ ಪೈಕಿ ಧಾರವಾಡ ಜಿಲ್ಲೆಯ ಕುಂದಗೋಳದ ಶಿವಾನಂದ ಮಠದಲ್ಲಿರುವ ರಾಷ್ಟ್ರಮಟ್ಟದ ಬಸವೇಶ್ವರ ಯೋಗ ಕೇಂದ್ರದಲ್ಲಿ ಯೋಗ ಕಲಿತ 27 ಜನರಿದ್ದಾರೆ. ಜೂ. 21ರಂದು ವಿಶ್ವ ಯೋಗ ದಿನ ಆಚರಿಸಲು ವಿಶೇಷ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಸತತವಾಗಿ 108 ಸೂರ್ಯ ನಮಸ್ಕಾರ ಮಾಡಲು ನಿರ್ಧರಿಸಲಾಗಿದೆ.
ಕಳೆದ 8 ವರ್ಷದಿಂದ ಯೋಗ ಕಲಿಸುತ್ತ ಇಲ್ಲಿಯೇ ನೆಲೆಸಿದ್ದೇನೆ. ಅದರಲ್ಲೂ ಭಾರತೀಯ ಮೂಲದ ಯೋಗ ಶಿಕ್ಷಕರಿಂದ ಯೋಗ ಕಲಿಯಲು ಹೆಚ್ಚು ಆಸಕ್ತಿಯುಳ್ಳ ಜನರು ಇಲ್ಲಿದ್ದು, ದಿನನಿತ್ಯ ತಮ್ಮ ಅನುಕೂಲಕ್ಕೆ ತಕ್ಕಂತೆ ತಪ್ಪದೇ ಯೋಗಾಭ್ಯಾಸಕ್ಕೆ ಹಾಜರಾಗುತ್ತಾರೆ.
• ಸಂತೋಷ ಉಮಚಗಿ, ವ್ಯವಸ್ಥಾಪಕ, ಶುಭ ಯೋಗ
ಭಾರತೀಯ ಯೋಗ ಶಿಕ್ಷಕರಿಂದ ಯೋಗ ಕಲಿಯಲು ಇಷ್ಟಪಡುತ್ತೇನೆ. ಇದರಿಂದ ಮಾನಸಿಕ ಹಾಗೂ ದೈಹಿಕವಾಗಿ ನನ್ನ ಆರೋಗ್ಯ ಸಮತೋಲನವಾಗಿದೆ. ಯೋಗದ ಪ್ರಭಾವದಿಂದ ನಾನು ನೋಡಲು ಯುವತಿಯಂತೆ ಕಾಣುತ್ತಿದ್ದೇನೆ. ಅದಕ್ಕೆ ನನ್ನ ಶಿಕ್ಷಕರಿಗೆ ಧನ್ಯವಾದಗಳು
.• ವೊ.ತಿ. ಹಾಂಗೇ ಯೆನ್, 58 ವರ್ಷದ ವಿಯೆಟ್ನಾಂ ಪ್ರಜೆ
• ಶಶಿಧರ್ ಬುದ್ನಿ