Advertisement

ಅರ್ಜುನ್‌ ಸರ್ಜಾಗೆ ಬಂಧನ ಭೀತಿ

06:00 AM Oct 28, 2018 | |

 ಬೆಂಗಳೂರು: ನಟ ಅರ್ಜುನ್‌ ಸರ್ಜಾ ಹಾಗೂ ನಟಿ ಶೃತಿ ಹರಿಹರನ್‌ ನಡುವಿನ “ಮೀ ಟೂ’ ವಿವಾದ ತಾರಕಕ್ಕೇರಿದ್ದು, ಮೂರು ವರ್ಷಗಳ ಹಿಂದೆ ನಡೆದ “ವಿಸ್ಮಯ’ ಸಿನಿಮಾ ಚಿತ್ರೀಕರಣದ ರಿಹರ್ಸಲ್‌ ವೇಳೆ ಅರ್ಜುನ್‌ ಸರ್ಜಾ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ನಟಿ ಶೃತಿ ಹರಿಹರನ್‌ ಕಬ್ಬನ್‌ ಪಾರ್ಕ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Advertisement

ತಮ್ಮ ಪರ ವಕೀಲರ ಜತೆ ಠಾಣೆಗೆ ಆಗಮಿಸಿದ ನಟಿ 5 ಪುಟಗಳ ದೂರು ನೀಡಿದ್ದು  ಅರ್ಜುನ್‌ ಸರ್ಜಾ ವಿರುದ್ಧ ಕಬ್ಬನ್‌ ಪಾರ್ಕ್‌ ಪೊಲೀಸರು ಐಪಿಸಿ ಸೆಕ್ಷನ್‌ 506(ಜೀವ ಬೆದರಿಕೆ), 509(ಮಹಿಳೆಗೆ ಅಶ್ಲೀಲ ಸನ್ನೆ, ಶಬ್ದ, ವರ್ತನೆ ಮೂಲಕ ಅವಮಾನಿಸುವುದು), 354(ಮಹಿಳೆಯ ಮಾನಭಂಗಕ್ಕೆ ಪ್ರಯತ್ನ), 354(ಎ)(ಲೈಂಗಿಕ ಕಿರುಕುಳ) ಆರೋಪದಡಿ ಪ್ರಕರಣ ದಾಖಲಿಸಿದ್ದಾರೆ. ಐಪಿಸಿ ಸೆಕ್ಷನ್‌ 354 ಮತ್ತು 354 (ಎ) ಗಳು ಜಾಮೀನುರಹಿತ ಸೆಕ್ಷನಗಳಾಗಿರುವುದರಿಂದ ಅರ್ಜುನ್‌ ಸರ್ಜಾ ಅವರು ಬಂಧನಕ್ಕೆ ಒಳಗಾಗುವ ಭೀತಿಯನ್ನೂ ಅನುಭವಿಸುತ್ತಿದ್ದಾರೆ. ಹೆಬ್ಟಾಳ ಹಾಗೂ ದೇವನಹಳ್ಳಿಯಲ್ಲಿ ಸಿನಿಮಾ ಚಿತ್ರೀಕರಣ ಸಂದರ್ಭದಲ್ಲಿ ತಮಗಾದ ಅನ್ಯಾಯದ ಬಗ್ಗೆ ಶೃತಿ ದೂರಿನಲ್ಲಿ ಉಲ್ಲೇಖೀಸಿದ್ದಾರೆ. ಮತ್ತೂಂದೆಡೆ ದೂರು ಸ್ವೀಕರಿಸುತ್ತಿದ್ದಂತೆ ಪೊಲೀಸರು ನಟಿ ಶೃತಿಯನ್ನು ಘಟನಾ ಸ್ಥಳಕ್ಕೆ ಕರೆದೊಯ್ದು ಸ್ಥಳ ಮಹಜರು ಮಾಡಿದ್ದಾರೆ.

ದೂರಿನ ಪ್ರತಿಯಲ್ಲಿ ಏನಿದೆ?
2015ರಲ್ಲಿ ವಿಸ್ಮಯ ಚಿತ್ರೀಕರಣದ ಸಂದರ್ಭದಲ್ಲಿ  ದೃಶ್ಯವೊಂದರ ರಿಹರ್ಸಲ್‌ ವೇಳೆ ಅರ್ಜುನ್‌ ಸರ್ಜಾ ತಮ್ಮ ಜತೆ ಅಸಭ್ಯವಾಗಿ ವರ್ತಿಸಿದ್ದು, ಕೈ ಹಿಡಿದು ಎಳೆದು ಅನುಚಿತವಾಗಿ ವರ್ತಿಸಿದರು. ಇದಕ್ಕೆ ವಿರೋಧಿಸಿದಾಗ ಸರ್ಜಾ ಹಿಂಭಾಗದಿಂದ ನನ್ನನ್ನು ಅಪ್ಪಿಕೊಂಡರು. ಇದಕ್ಕೆ ಆಕ್ಷೇಪಿಸಿದಾಗ ತಮ್ಮ ಖಾಸಗಿ ಜಾಗಗಳನ್ನು ಸ್ಪರ್ಶಿಸಿ ಮುಜುಗರ ಉಂಟು ಮಾಡಿದರು. ಇದರಿಂದ ನನಗೆ ಬೇಜಾರಾಗಿತ್ತು. ಈ ವಿಷಯ ನನ್ನ ಜತೆಯಿದ್ದ ಬೋರೇಗೌಡ ಹಾಗೂ ಕಿರಣ್‌ ಬಳಿ ಹೇಳಿಕೊಂಡಾಗ ಅವರು ಸಮಾಧಾನಪಡಿಸಿದರು.

ಅಲ್ಲದೆ, ದೇವನಹಳ್ಳಿಯ ಆಸ್ಪತ್ರೆಯೊಂದರಲ್ಲಿ ಶೂಟಿಂಗ್‌ ಮುಗಿದ ಬಳಿಕ ಈ ದಿನ ಪೂರ್ತಿ ಸಮಯವಿದೆ. ಖಾಸಗಿ ಸ್ಥಳದಲ್ಲಿ ಪ್ರತ್ಯೇಕವಾಗಿರೋಣ ಎಂದು ಸರ್ಜಾ ಕರೆದಿದ್ದರು. ಇದಕ್ಕೆ ನಾನು ನಿರಾಕರಿಸಿದೆ. ಬಳಿಕ 2016 ಜುಲೈ 18ರಂದು ಯುಬಿ ಸಿಟಿಯಲ್ಲಿ ಶೂಟಿಂಗ್‌ಗಾಗಿ ಲಾಬಿಯಲ್ಲಿ ಕಾಯುತ್ತಿದ್ದಾಗ ಹಿಂದಿನಿಂದ ಬಂದ ಸರ್ಜಾ ತಮ್ಮ ಬೆನ್ನನ್ನು ಗಟ್ಟಿಯಾಗಿ ಹಿಡಿದು ಒಬ್ಬರೇ ಏಕೆ ಕಾಯುತ್ತಿದ್ದಿರಿ?ನನ್ನ ರೂಮ್‌ಗೆ ಬರಬಹುದಲ್ಲಾ?ಎಂದಿದ್ದರು. ಬರುವುದಿಲ್ಲ ಎಂದಿದಕ್ಕೆ, ಒಂದು ದಿನ ನನ್ನ ಬಳಿ ನೀನೇ ಬರುವಂತೆ ಮಾಡುತ್ತೇನೆ ಎಚ್ಚರದಿಂದಿರು. ಈ ವಿಷಯವನ್ನು ಯಾರಿಗಾದರೂ ಹೇಳಿದರೆ ಬೇರೆ ಬೇರೆ ಜಾಗಗಳಿಗೆ ಎಳೆಯುತ್ತೇನೆ. ನಿನ್ನ ಜೀವನ ನರಕಯಾತನೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದರು. ಇದು ಖಾಸಗಿತನದ ವಿಚಾರ ಎಂದು ಎಲ್ಲಿಯೂ ಹೇಳಿರಲಿಲ್ಲ. ಇತ್ತೀಚೆಗೆ ಮೀ ಟೂ ಎಂಬ ಅಭಿಯಾನ ಆರಂಭವಾದರಿಂದ ನನ್ನ ಹಿತೈಷಿಗಳ ಜತೆ ಸುಧಿರ್ಘ‌ವಾಗಿ ಚರ್ಚಿಸಿ ದೂರು ಸಲ್ಲಿಸುತ್ತಿದ್ದೇನೆ. ಈ ಹಿನ್ನೆಲೆಯಲ್ಲಿ ನಟ ಅರ್ಜುನ್‌ ಸರ್ಜಾ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಶೃತಿ ದೂರಿನಲ್ಲಿ ಒತ್ತಾಯಿಸಿದ್ದಾರೆ.

ಮೂವರಿಗೆ ನೋಟಿಸ್‌ ಜಾರಿ
ಪ್ರಕರಣ ದಾಖಲಿಸಿಕೊಂಡ ಕಬ್ಬನ್‌ ಪಾರ್ಕ್‌ ಪೊಲೀಸರು ನಟಿ ಶೃತಿ ಹರಿಹರನ್‌ ದೂರಿನಲ್ಲಿ ಉಲ್ಲೇಖೀಸಿರುವ ತಮ್ಮ ಹಿತೈಷಿಗಳಾದ ಬೋರೇಗೌಡ, ಕಿರಣ್‌ ಸೇರಿ ಮೂವರಿಗೆ ನೋಟಿಸ್‌ ಜಾರಿ ಮಾಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.

Advertisement

ಘಟನಾ ಸ್ಥಳ ಮಹಜರು
ದೂರಿನಲ್ಲಿ ಉಲ್ಲೇಖೀಸಿದಂತೆ ಕಬ್ಬನ್‌ ಪಾರ್ಕ್‌ ಪೊಲೀಸರು ನಟಿ ಶೃತಿಯನ್ನು ವಿಸ್ಮಯ ಸಿನಿಮಾ ಚಿತ್ರೀಕರಣ ನಡೆದ ಹೆಬ್ಟಾಳದ ನಾಗವಾರ ಬಳಿಯ ಬಂಗಲೆ, ಅರಮನೆ ಮೈದಾನ ಹಾಗೂ ಯುಬಿ ಸಿಟಿಗೆ ಕರೆದೊಯ್ದು ಸ್ಥಳ ಮಹಜರು ಮಾಡಿದ್ದು, ಪ್ರತಿ ಘಟನಾ ಸ್ಥಳದಲ್ಲಿ ಶೃತಿ ಅವರಿಂದ ಪ್ರತ್ಯೇಕ ಹೇಳಿಕೆ ದಾಖಲಿಸಿಕೊಂಡಿದ್ದಾರೆ.

ಸ್ವಯಂ ಪ್ರೇರಿತ ದೂರು ದಾಖಲು ನಟಿ ಶೃತಿ ಹರಿಹರನ್‌ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ರಾಜ್ಯ ಮಹಿಳಾ ಆಯೋಗ ಬಹುಭಾಷಾ ನಟ ಅರ್ಜುನ್‌ ಸರ್ಜಾ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದೆ. ಈ ಸಂಬಂಧ ಸಮಗ್ರ ತನಿಖೆ ನಡೆಸುವಂತೆ ನಗರ ಪೊಲೀಸ್‌ ಆಯುಕ್ತ ಟಿ.ಸುನಿಲ್‌ ಕುಮಾರ್‌ಗೆ ಪತ್ರ ಬರೆಯಲಾಗಿದೆ.
ನಾಗಲಕ್ಷ್ಮೀ ಬಾಯಿ, ಮಹಿಳಾ ಆಯೋಗದ ಅಧ್ಯಕ್ಷೆ

ಶೃತಿ ಹರಿಹರನ್‌ ದೂರಿನಲ್ಲಿ ಉಲ್ಲೇಖೀಸಿರುವ ಸ್ಥಳಗಳಿಗೆ ಅವರ ಸಮ್ಮುಖದಲ್ಲೇ ಪೊಲೀಸರು ಸ್ಥಳ ಮಹಜರು ಮಾಡಿದ್ದಾರೆ. ಜತೆಗೆ ನಟ ಅರ್ಜುನ್‌ ಸರ್ಜಾಗೂ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ಕೂಡ ನೀಡಲಾಗಿದೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು.
ದೇವರಾಜ್‌, ಕೇಂದ್ರ ವಲಯ ಡಿಸಿಪಿ

Advertisement

Udayavani is now on Telegram. Click here to join our channel and stay updated with the latest news.

Next