ಶ್ರೀರಂಗಪಟ್ಟಣ: ಕೆಆರ್‌ಎಸ್ ಜಲಾಶಯದ ಒಳಹರಿವು ಪ್ರಮಾಣದಲ್ಲಿ ಮತ್ತೆ ಏರಿಕೆ ಕಂಡು ಬಂದಿದ್ದು, ಜಲಾಶಯದಿಂದ ಕಾವೇರಿ ನದಿಗೆ 20 ಸಾವಿರ ಕ್ಯೂಸೆಕ್ ನೀರು ಹೊರ ಬಿಟ್ಟಿರುವ ಹಿನ್ನೆಲೆಯಲ್ಲಿ ನದಿ ಪಾತ್ರದ ಜನರು ಸುರಕ್ಷಿತ ಪ್ರದೇಶಕ್ಕೆ ತೆರಳಲು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಕಾವೇರಿ ಕಣಿವೆ ಪ್ರದೇಶಗಳಲ್ಲಿ ಮತ್ತೆ ಮಳೆ ಪ್ರಮಾಣ ಹೆಚ್ಚಿರುವ ಹಿನ್ನೆಲೆಯಲ್ಲಿ ಕಾವೇರಿ ನದಿಗೆ ಹೆಚ್ಚಿನ ಒಳಹರಿವು ಬರುತ್ತಿದೆ. ಈಗಾಗಲೇ ಜಲಾಶಯದಲ್ಲಿ ಅಗತ್ಯಕ್ಕೆ ತಕ್ಕಷ್ಟು ನೀರಿನ ಸಂಗ್ರಹ ಮಾಡಿಕೊಂಡಿದ್ದು, ಹೆಚ್ಚುವರಿ ನೀರನ್ನು ಜಲಾಶಯದಿಂದ ಅಷ್ಟೆ ಪ್ರಮಾಣದ ನದಿಗೆ ಬಿಡಲಾಗುತ್ತಿದೆ.
ಇನ್ನಷ್ಟು ನೀರು ಬಿಡುವ ಸಾಧ್ಯತೆ: ಕಳೆದ ವಾರವಷ್ಟೇ ಭರ್ತಿಯಾಗಿದ್ದ ಕೆಆರ್‌ಎಸ್ ಜಲಾಶಯಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಬಾಗಿನ ಅರ್ಪಿಸಿದರು. ಅದೇ ನೀರಿನ ಮಟ್ಟ ಕಾಪಾಡಿಕೊಂಡು ಬರಲಾಗಿತ್ತು. ಕಳೆದ ಮೂರು ದಿನಗಳಿಂದ ಕಾವೇರಿ ಜಲಾನಯನ ಪ್ರದೇಶದಲ್ಲಿ ಮತ್ತೆ ಧಾರಾಕಾರ ಮಳೆ ಸುರಿಯುತ್ತಿದೆ. ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬರುತ್ತಿರುವುದರಿಂದ ಜಲಾಶಯದ ಸುರಕ್ಷತೆ ಕಾಪಾಡಿಕೊಳ್ಳಲು ನೀರಾವರಿ ಅಧಿಕಾರಿಗಳು ಜಲಾಶಯದಿಂದ ಹೆಚ್ಚಿನ ನೀರನ್ನು ಹೊರ ಬಿಡುತ್ತಿರುವುದಾಗಿ ತಿಳಿಸಿದ್ದಾರೆ.
ಪ್ರಸ್ತುತ ಜಲಾಶಯದಲ್ಲಿ ಗರಿಷ್ಟ ಮಟ್ಟ 124.80 ಅಡಿಗಳಷ್ಟು ಸಂಗ್ರಹಿಸಲಾಗಿದ್ದು, ಜಲಾಶಯಕ್ಕೆ 16,840 ಕ್ಯೂಸೆಕ್ ಹರಿದು ಬರುತ್ತಿದೆ. 17,809 ಕ್ಯೂಸೆಕ್ ನೀರನ್ನು ಜಲಾಶಯದಿಂದ ಹೊರಬಿಡಲಾಗುತ್ತಿದೆ. 49.452 ಟಿಎಂಸಿ ನೀರು ಜಲಾಶಯದಲ್ಲಿ ಸಂಗ್ರಹವಾಗಿದೆ.
ಜಲಾಶಯಕ್ಕೆ ಒಳ ಹರಿವು ಹೆಚ್ಚಾಗುವ ಸಾಧ್ಯಯತೆ ಇದ್ದು, ಮಧ್ಯರಾತ್ರಿ ಇನ್ನಷ್ಟು ನೀರನ್ನು ಹೊರಬಿಡಲಾಗುವುದು. ಆದ್ದರಿಂದ ನದಿದಡದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳಲೂ ಸೂಚನೆ ನೀಡಲಾಗಿದೆ.