Advertisement

ಚರಂಡಿ ದುರ್ನಾತಕ್ಕೆ ತತ್ತರಿಸಿದ ನಾಗರಿಕರು

07:48 PM Dec 26, 2019 | Naveen |

● ಕೆ.ವಿ.ನಾಗರಾಜ್‌

Advertisement

ಶ್ರೀನಿವಾಸಪುರ: ಪುರಸಭೆಯಲ್ಲಿ ಸ್ವಚ್ಛತೆಗಾಗಿ 30ಕ್ಕೂ ಹೆಚ್ಚು ಕಾರ್ಮಿಕರು ಇದ್ದಾರೆ. ಅದೇ ರೀತಿ 23 ವಾರ್ಡ್‌ಗಳಲ್ಲಿ ಸ್ವಚ್ಛತಾ ಕೆಲಸ ಪ್ರತಿದಿನ ನಡೆಯುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ, ರಾಜ ಕಾಲುವೆ, ಮುಖ್ಯ ಚರಂಡಿಗಳು ಕಸ ತುಂಬಿಕೊಂಡು, ನೀರು ಹರಿಯದೇ ದುರ್ನಾತ ಬೀರುತ್ತಿವೆ. 31 ಸಾವಿರ ಜನಸಂಖ್ಯೆ ಹೊಂದಿರುವ ಪಟ್ಟಣದಲ್ಲಿ ಸ್ವಚ್ಛತೆ, ಕುಡಿಯುವ ನೀರು, ಬೀದಿದೀಪ ಅಳವಡಿಸುವುದು ಮುಖ್ಯವಾಗಿದೆ. ನಿರ್ದಿಷ್ಟ ಸ್ಥಳಗಳಲ್ಲಿ ಕಸ ಹಾಕಿ ಎಂದು ಹೇಳುವ ಪುರಸಭೆ, ಈ ಬಗ್ಗೆ ಕರಪತ್ರಗಳನ್ನೂ ಹಂಚಿ, ಧ್ವನಿವರ್ಧಕಗಳ ಮೂಲಕ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಆದರೆ, ಪಟ್ಟಣದ ಎಂ.ಜಿ.ರಸ್ತೆ ಚರಂಡಿ ನೋಡಿದ್ರೆ ಸ್ಥಳೀಯ ಆಡಳಿತ ಎಷ್ಟರ ಮಟ್ಟಿಗೆ ಸ್ವಚ್ಛತೆ ಕಾಪಾಡುತ್ತಿದೆ ಎಂಬುದು ತಿಳಿಯುತ್ತದೆ.

ಕಸ ಕೊಳೆತು ದುರ್ನಾತ: ಕಸದ ರಾಶಿಗಳಿಂದ ಎಂ.ಜಿ. ರಸ್ತೆಯ ಚರಂಡಿ, ಇಂದಿರಾ ಕ್ಯಾಂಟೀನ್‌ ಮುಂದಿನ ಕಾಲುವೆ ತುಂಬಿ ತುಳುಕುತ್ತಿದ್ದು, ಕಸ ಕೊಳೆತು ದುರ್ವಾಸನೆ ಬೀರುತ್ತಿದೆ. ಬಾಲಕರ ವಿದ್ಯಾರ್ಥಿ ನಿಲಯದ ಪಕ್ಕದ ರಸ್ತೆಯಲ್ಲಿ ಕಸದ ರಾಶಿ ಬಿದ್ದು ವರ್ಷಗಳೇ ಉರುಳಿವೆ. ಈ ಎಲ್ಲಾ ಸ್ಥಳಗಳಲ್ಲಿ ಕಲುಷಿತ ನೀರಿನ ಜೊತೆ ಕಸ ಕೊಳೆತು ನಾರುತ್ತಿದೆ.

ಇಂದಿರಾ ಕ್ಯಾಂಟೀನ್‌ ಎದುರಿಗೆ ಗಲೀಜು, ಗ್ರಾಹಕರಿಗೆ ವಾಕರಿಕೆ: ಇಂದಿರಾ ಕ್ಯಾಂಟೀನ್‌ ಮುಂಭಾಗದ ಚರಂಡಿಯಲ್ಲಿನ ದುರ್ವಾಸನೆ ಊಟ, ತಿಂಡಿ ತಿನ್ನುವವರಲ್ಲಿ ವಾಕರಿಕೆ ತರಿಸುತ್ತದೆ. ಇದೇ ರಸ್ತೆಯ ಮುಂದೆ ಬಾಲಕಿಯರ ಕಾಲೇಜು, ಕನ್ನಡ ಮಾಧ್ಯಮಿಕ ಮಾದರಿ ಶಾಲೆಯ ವಿದ್ಯಾರ್ಥಿಗಳು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಬಿಆರ್‌ಸಿ ಕೇಂದ್ರ, ಸಮೂಹ ಸಮನ್ವಯ ಶಿಕ್ಷಣ ಕೇಂದ್ರ, ಕಾಲೇಜು ಹಾಗೂ ಪ್ರೌಢಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಮೂಗು ಮುಚ್ಚಿಕೊಂಡು ಓಡಾಡಬೇಕಿದೆ.

ರೋಗದ ಭೀತಿ: ಜನರಲ್‌ ಹಾಸ್ಟೆಲ್‌ ಪಕ್ಕದ ರಸ್ತೆಯಲ್ಲಿ ಕಸದ ರಾಶಿ ಗುಡ್ಡದಂತೆ ಕಾಣುತ್ತದೆ. ಇಂದಿರಾ ಕ್ಯಾಂಟೀನ್‌ ಆವರಣದಲ್ಲಿ ಲೋಕೋಪಯೋಗಿ ಇಲಾಖೆ ಕಚೇರಿ ಹಾಗೂ ತಾಂತ್ರಿಕ ಎಂಜನಿಯರ್‌ ಕಚೇರಿಗಳು ಇವೆ. ಈ ಕಚೇರಿಗಳ ಸಿಬ್ಬಂದಿ ಇಂದಿರಾ ಕ್ಯಾಂಟೀನ್‌ ಪಕ್ಕದಲ್ಲಿ ಹಾದು ಹೋಗಬೇಕಾಗಿದೆ. ಇಂತಹ ಪರಿಸ್ಥಿತಿಯ ನಡುವೆ ದುರ್ವಾಸನೆ ಬೀರುವ ಸ್ಥಳದಲ್ಲಿ ಕಸದ ರಾಶಿ ಹಾಕಿದ್ದು, ಹಂದಿ, ನಾಯಿಗಳ ಕಾಟ ಹೆಚ್ಚಾಗಿ, ಸಾಂಕ್ರಾಮಿಕ ರೋಗ ಭೀತಿಯಿದೆ.

Advertisement

ಪಟ್ಟಣದ 23 ವಾರ್ಡ್‌ಗಳಲ್ಲೂ ಸ್ವಚ್ಛತೆ ಕಾರ್ಯ ನಡೆಯುತ್ತಿದೆ ಎಂದು ಪುರಸಭೆ ಅಧಿಕಾರಿಗಳು ಹೇಳುತ್ತಾರೆ. ಮನೆ ಮನೆ ಭೇಟಿ, ಮಧ್ಯಾಹ್ನದ ವೇಳೆಯಲ್ಲೂ ಕೆಲಸ ಮಾಡಲಾಗುತ್ತಿದೆ ಎನ್ನುತ್ತಾರೆ. ಗುರುತಿಸಿದ ಈ ಸ್ಥಳಗಳಲ್ಲಿ ಕಸ ಏಕೆ ತೆಗೆಯುತ್ತಿಲ್ಲ ಎನ್ನುವುದು ಈಗ ಸಾರ್ವಜನಿಕರ ಪ್ರಶ್ನೆ.

ಪೌರ ಕಾರ್ಮಿಕರು ಪ್ರತಿದಿನ ಮನೆಗಳ ಬಳಿ ಬಂದು ಕಸ ಸಂಗ್ರಹಿಸುತ್ತಾರೆ. ಆದರೂ ಕೆಲವರು ಚರಂಡಿಗೆ ಸುರಿಯುತ್ತಾರೆ. ಪಟ್ಟಣದ 10 ಕಡೆ ಸಿಸಿ ಕ್ಯಾಮರಾ ಅಳವಡಿಕೆಗೆ ಪುರಸಭೆಯಲ್ಲಿ ಯೋಜನೆ ರೂಪಿಸಲಾಗಿದೆ. ಅದನ್ನು ನೋಡಿ ಕ್ರಮ ಕೈಗೊಳ್ಳಲಾಗುತ್ತದೆ.
● ರಮೇಶ್‌,
ಪುರಸಭೆ ಆರೋಗ್ಯ ನಿರೀಕ್ಷಕ

ಕಸವನ್ನು ಸೂಕ್ತ ಸ್ಥಳದಲ್ಲಿ ಹಾಕುವ ಜವಾಬ್ದಾರಿ ಸಾರ್ವಜನಿಕರ ಮೇಲೂ ಇದೆ. ಮನೆಗಳಲ್ಲಿ ಸಮಾರಂಭ ನಡೆದಾಗ ಕಸವನ್ನು ಚರಂಡಿ, ರಸ್ತೆ ಪಕ್ಕದಲ್ಲಿ ಹಾಕಲಾಗುತ್ತಿದೆ. ಅದರ ಬದಲು ನಮಗೆ ತಿಳಿಸಿದ್ರೆ ಟ್ರ್ಯಾಕ್ಟರ್‌ ಮೂಲಕ ಸಾಗಿಸುತ್ತೇವೆ. ಸಾರ್ವಜನಿಕರಿಗೆ ಕಸದ ಬಗ್ಗೆ ಅರಿವು ಇರಬೇಕು. ಕಸ ಎಲ್ಲೆಂದರಲ್ಲಿ ಹಾಕಿದ್ದಲ್ಲಿ ಅವರಿಗೆ ದಂಡ ವಿಧಿಸಲಾಗುತ್ತದೆ.
● ವಿ.ಮೋಹನ್‌ ಕುಮಾರ್‌,
ಪುರಸಭೆ ಮುಖ್ಯಾಧಿಕಾರಿ

ಕಸ ದೂರ್ನಾತ ಬೀರುತ್ತಿದ್ದು ವಿದ್ಯಾರ್ಥಿಗಳು, ಸಾರ್ವಜನಿಕರು ಸಹ ಮೂಗು ಮುಚ್ಚಿ ಕೊಂಡು ಹೋಗುವ ಸ್ಥಿತಿ ಇದೆ. ಪುರಸಭೆಯಲ್ಲಿ ಸ್ವಚ್ಛತೆ ಕೆಲಸ ಮಾಡುವವರ ಸಂಖ್ಯೆ ಕಡಿಮೆ ಇದೆಯೇ ಈ ಬಗ್ಗೆ ಕೂಡಲೇ ಗಮನ ಹರಿಸಬೇಕಾಗಿದೆ.
ಗಿರೀಶ್‌,
ಶ್ರೀನಿವಾಸಪುರ ನಿವಾಸಿ

Advertisement

Udayavani is now on Telegram. Click here to join our channel and stay updated with the latest news.

Next