Advertisement

ಹದಗೆಟ್ಟ ರಸ್ತೆ ದುರಸ್ತಿ ಯಾವಾಗ?

03:18 PM Dec 14, 2019 | Naveen |

„ರಮೇಶ್‌ ಕರುವಾನೆ
ಶೃಂಗೇರಿ:
ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನಡೆದು ಆರು ತಿಂಗಳು ಕಳೆದರೂ ಇನ್ನೂ ಕಾಮಗಾರಿ ಆರಂಭವಾಗಿಲ್ಲ. ಹೀಗಾಗಿ, ಹೊಂಡ, ಗುಂಡಿಯಲ್ಲಿ ದಿನವೂ ಸಂಚರಿಸಬೇಕಾದ ಅನಿವಾರ್ಯತೆ ತಾಲೂಕಿನ ಮೆಣಸೆ- ಹಾಲಂದೂರು ಗ್ರಾಮಸ್ಥರಿಗೆ ಬಂದೊದಗಿದೆ.

Advertisement

ರಾಜ್ಯ ಹೆದ್ದಾರಿ ಎಸ್‌.ಎಚ್‌.27 ಮೆಣಸೆಯಿಂದ ಹಾಲಂದೂರು, ಮಸಿಗೆ, ಕಿರಕೋಡು ಮುಂತಾದ ಹತ್ತಾರು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ರೇಣುಕಾಂಬಾ ನಗರದ ಮುಖ್ಯ ರಸ್ತೆ ಅಭಿವೃದ್ಧಿಗೆ ಇನ್ನೂ ಕಾಲ ಕೂಡಿಬಂದಿಲ್ಲ. ರಸ್ತೆ ಡಾಂಬರೀಕರಣವಾದ ನಂತರ ಒಂದೆರಡು ಬಾರಿ ಹೊಂಡ, ಗುಂಡಿಗಳನ್ನು ಮುಚ್ಚಿದ್ದು, ಅದರ ಹೊರತಾಗಿ ರಸ್ತೆ ಅಭಿವೃದ್ಧಿಯನ್ನೇ ಕಂಡಿಲ್ಲ ಎಂಬ ಆರೋಪ ಸ್ಥಳೀಯರದ್ದಾಗಿದೆ.

ರೇಣುಕಾಂಬಾ ನಗರದಲ್ಲಿರುವ ಒಂದು ನೂರಕ್ಕೂ ಹೆಚ್ಚು ಮನೆಗಳ ಜನರು ಸೇರಿದಂತೆ ಅನೇಕ ಹಳ್ಳಿಗಳ ಜನರು ಓಡಾಡಲು ಈ ರಸ್ತೆಯನ್ನೇ ಅವಲಂಬಿಸಿದ್ದಾರೆ. ಹೊಂಡ, ಗುಂಡಿ ತಪ್ಪಿಸಲು ಸಾಧ್ಯವಾಗದ ಸ್ಥಿತಿಯಲ್ಲಿ ರಸ್ತೆ ಇದ್ದು, ಮಳೆಗಾಲದಲ್ಲಿ ಕೆಲವೆಡೆ ಕೆರೆಯಾಗಿ ರಸ್ತೆ ಮಾರ್ಪಾಟಾಗುತ್ತದೆ. ವಾಹನ ಸವಾರರು ಕೆರೆಯಂತಿರುವ ರಸ್ತೆಯಲ್ಲಿ ನೀರಿಗೆ ಇಳಿದು ಹತ್ತಬೇಕಿದೆ.

ಸುತ್ತಮುತ್ತಲಿನ ರಸ್ತೆಗಳು ಅಭಿವೃದ್ಧಿ ಹೊಂದಿದರೂ ಈ ರಸ್ತೆಯ ಗ್ರಹಣ ಮಾತ್ರ ಬಿಟ್ಟಿಲ್ಲ. ಎರಡು ಕಿ.ಮೀ. ರಸ್ತೆ ಮೆಣಸೆಯಿಂದ ಮೂಡಬನದ ಮೂಲಕ ಹಾಲಂದೂರು ಮುಖ್ಯ ರಸ್ತೆಗೆ ಸಂಪರ್ಕಿಸುತ್ತದೆ. ರಸ್ತೆ ಬದಿಯ ಗಿಡಗಂಟಿಗಳು, ಮುಳ್ಳು ಮುಚ್ಚಿಕೊಂಡಿದ್ದು, ರಸ್ತೆಯಲ್ಲಿ ಗುಂಡಿಗಳದ್ದೇ ಸಾಮ್ರಾಜ್ಯವಾಗಿದೆ. ಪ್ರತಿದಿನ ಖಾಸಗಿ ಬಸ್‌ ಸಹಿತ ನೂರಾರು ವಾಹನಗಳು ಈ ರಸ್ತೆಯಲ್ಲಿಯೇ ಸಂಚಾರ ಮಾಡುತ್ತವೆ. ಹಾಗಾಗಿ, ಆದ್ಯತೆ ಮೇಲೆ ರಸ್ತೆ ಮರು ಡಾಂಬರಿಕರಣವಾಗಬೇಕಿದೆ. ಹಲವಾರು ವರ್ಷದಿಂದ ನನೆಗುದಿಗೆ ಬಿದ್ದಿರುವ ರಸ್ತೆ ಕಾಮಗಾರಿಗೆ ಕಳೆದ ಏಪ್ರಿಲ್‌ನಲ್ಲಿ 50 ಲಕ್ಷ ರೂ. ಅನುದಾನದಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಆದರೆ ನಂತರ ಯಾವುದೇ ಕಾಮಗಾರಿ ಆರಂಭವಾಗದೇ ಗ್ರಾಮಸ್ಥರು ಇನ್ನೂ ಹೊಂಡ- ಗುಂಡಿಗಳಲ್ಲೇ ಸಂಚರಿಸಬೇಕಿದೆ.

ಅಡ್ಡಗದ್ದೆ ಗ್ರಾಪಂ ವ್ಯಾಪ್ತಿಯ ಎನ್‌.ಎಚ್‌.169ರಿಂದ ಹೆಬ್ಬಿಗೆ, ಮಡಹು, ಕೆರೋಡಿ ಮುಂತಾದ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಜಿಪಂ ರಸ್ತೆ ಸಂಪೂರ್ಣ ಹಾಳಾಗಿದೆ. ತುಂಗಾ ನದಿಯಿಂದ ಮರಳು ಸಾಗಾಟ ನಡೆಸುವುದರಿಂದ ಅತಿ ಭಾರದ ಲಾರಿ ಸಂಚಾರ ಇದಕ್ಕೆ ಕಾರಣವಾಗಿದೆ. ಸರಕಾರಕ್ಕೆ ಸಾಕಷ್ಟು ಆದಾಯವಿದ್ದರೂ ಡಾಂಬರೀಕರಣ ಇನ್ನೂ ಆಗಲಿಲ್ಲ ಎಂಬುದು ಗ್ರಾಮಸ್ಥರ ದೂರಾಗಿದೆ.

Advertisement

ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿರುವ ವಳಲೆ ಮಾವಿನಕಾಡು ರಸ್ತೆಯಲ್ಲಿ ಅತಿವೃಷ್ಟಿಯಿಂದ ಹೊಂಡ-
ಗುಂಡಿಗಳು ಬಿದ್ದಿದ್ದು, ಸರಕಾರ ತುರ್ತು ದುರಸ್ತಿಗೆ ಗಮನ ಹರಿಸಬೇಕಿದೆ. ಮರ್ಕಲ್‌ ಗ್ರಾಪಂನ ಸಿರಿಮನೆ ಜಲಪಾತದ ರಸ್ತೆಯಲ್ಲೂ ಗುಂಡಿಗಳಾಗಿದ್ದು, ಸಂಚಾರ ಮಾಡುವುದೇ ಕಷ್ಟವಾಗಿದೆ. ಜಲಪಾತ ವೀಕ್ಷಿಸಲು ಸಾವಿರಾರು ಪ್ರವಾಸಿಗರು ಆಗಮಿಸುತ್ತಿದ್ದು, ಹದಗೆಟ್ಟ ರಸ್ತೆ ಮೂಲಕ ಸಂಚಾರ ನಡೆಸಬೇಕಿದೆ.

ಪ್ರತಿ ದಿನದ ಅಗತ್ಯವಾಗಿರುವ ರಸ್ತೆ ಕಳೆದ ಮೂರು ದಶಕದಿಂದಲೂ ಇದೇ ರೀತಿಯಾಗಿದೆ. ಪ್ಯಾಚ್‌ವರ್ಕ್‌ ಒಂದೆರಡು ಬಾರಿಯಾಗಿದೆ. ಆದರೂ, ರಸ್ತೆ ಮತ್ತೆ ಹಾಳಾಗಿದೆ. ಅನೇಕ ಕಡೆ ರಸ್ತೆ ಬದಿ ಕಾಲುವೆ ಇಲ್ಲದಿರುವುದು, ಗುಣಮಟ್ಟದ ಕಾಮಗಾರಿ ನಡೆಯದೇ ರಸ್ತೆ ದುಸ್ಥಿತಿಯಲ್ಲಿದೆ. ರಸ್ತೆಯನ್ನು ಕೆಲವೆಡೆ ಎತ್ತರಿಸುವ ಅಗತ್ಯವಿದ್ದು, ಸರಕಾರ ತುರ್ತಾಗಿ ರಸ್ತೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು.
.ಜಯಂತ ಶೆಟ್ಟಿ,
ರೇಣುಕಾಂಬಾನಗರ, ಶೃಂಗೇರಿ

ರಸ್ತೆ ಅಭಿವೃದ್ಧಿಗೆ ಶಾಸಕ ಟಿ.ಡಿ.ರಾಜೇಗೌಡರು 50 ಲಕ್ಷ ರೂ. ಮೀಸಲಿರಿಸಿದ್ದು, ಶಂಕುಸ್ಥಾಪನೆಯನ್ನೂ ನೆರವೇರಿಸಿದ್ದಾರೆ. ಪ್ರಸಕ್ತ ಸಾಲಿನಲ್ಲಿ ರಸ್ತೆಗೆ ಮರು ಡಾಂಬರೀಕರಣದ ಮೂಲಕ ಅಭಿವೃದ್ಧಿಪಡಿಸಲಾಗುತ್ತದೆ.
.ಎಂ.ಪಿ.ಚಂದ್ರಹಾಸ,
ಮೆಣಸೆ ಗ್ರಾಪಂ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next