ಶೃಂಗೇರಿ: ಮಳೆಗಾಲದಲ್ಲಿ ಅನಾಹುತ ಸಂಭವಿಸುವ ಮೊದಲು ತಾಲೂಕು ಮಟ್ಟದ ಅಧಿಕಾರಿಗಳು ಎಚ್ಚೆತ್ತುಕೊಂಡಿರಬೇಕು. ಯಾವುದೇಸಮಸ್ಯೆ ಎದುರಾದರೂ ಪರಿಹರಿಸಲು ಸನ್ನದ್ಧರಾಗಿರಬೇಕು ಎಂದು ಶಾಸಕ ಟಿ.ಡಿ.ರಾಜೇಗೌಡ ತಾಕೀತು ಮಾಡಿದರು.
ತಾಪಂ ಸಭಾಂಗಣದಲ್ಲಿ ಪ್ರಕೃತಿ ವಿಕೋಪ ನಿರ್ವಹಣೆ ಬಗ್ಗೆ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ಕಳೆದ ಸಾಲಿನಲ್ಲಿ ಅತಿವೃಷ್ಠಿಯಿಂದ ಸಾಕಷ್ಟುಹಾನಿ ಸಂಭವಿಸಿದ್ದು, ಪ್ರಸಕ್ತ ಸಾಲಿನ ಮಳೆಗಾಲದಲ್ಲಿ ಎದುರಾಗುವ ಯಾವುದೇ ಸಮಸ್ಯೆಯನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಯಾವುದೇ ಅನಾಹುತ ಸಂಭವಿಸಿದ ತಕ್ಷಣ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸರಕಾರಕ್ಕೆ ವರದಿ ನೀಡಬೇಕೆಂದು ಸೂಚಿಸಿದರು.
ಕ್ಷಿಪ್ರ ಕಾರ್ಯಾಚರಣೆಗೆ ಮುಂದಾಗಿ: ಅಧಿಕಾರಿಗಳು ಮೊಬೈಲ್ ಸ್ವಿಚ್ ಆಫ್ ಮಾಡಬಾರದು. ಅತಿವೃಷ್ಠಿ ಪರಿಹಾರ ಕಾರ್ಯ ನಿರ್ವಹಿಸಲು ತಾಲೂಕು ಮಟ್ಟದ ಅಧಿಕಾರಿಗಳ ತಂಡ ರಚಿಸಬೇಕು. ಅರಣ್ಯ ಇಲಾಖೆ ಸಿಬ್ಬಂದಿ ಮನೆ ಹಾಗೂ ವಿದ್ಯುತ್ ಕಂಬಗಳ ಮೇಲೆ ಮರ ಬಿದ್ದರೆ ತಕ್ಷಣ ತೆರವುಗೊಳಿಸಬೇಕು. ರೈತರ ಬೆಳೆ ಹಾನಿ, ತೋಟಗಾರಿಕೆ ಬೆಳೆಗಳ ಹಾನಿ ಮತ್ತು ಪ್ರಾಣ ಹಾನಿಗೆ ಸಿಗಬೇಕಾದ ಪರಿಹಾರವನ್ನು ಒದಗಿಸಲು ಹಾನಿಯ ಪ್ರಮಾಣದ ಕುರಿತು ವಿವರವಾದ ವರದಿಯನ್ನು ಕೂಡಲೇ ಸಲ್ಲಿಸಬೇಕೆಂದು ತೋಟಗಾರಿಕೆ ಹಾಗೂ ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಸಾಂಕ್ರಾಮಿಕ ರೋಗ ತಡೆಗೆ ಮುಂದಾಗಿ: ಆರೋಗ್ಯ ಇಲಾಖೆ ಮಳೆಗಾಲದಲ್ಲಿ ಹರಡುವ ಸಾಂಕ್ರಾಮಿಕ ರೋಗಗಳ ಬಗ್ಗೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಅಗತ್ಯ ಔಷಧಿ ದಾಸ್ತಾನು ಮಾಡಬೇಕು. ರೋಗಿಗಳ ಚಿಕಿತ್ಸೆಗಾಗಿ ಆ್ಯಂಬುಲೆನ್ಸ್ ಸಿದ್ಧವಾಗಿಡಬೇಕು. ತಾಪಂ, ಪಪಂ ಅಧಿಕಾರಿಗಳು ಚರಂಡಿಗೆ ಹರಿದು ಬರುವ ಕಸ, ಕಡ್ಡಿ, ಪ್ಲಾಸ್ಟಿಕ್ ಮುಂತಾದ ತ್ಯಾಜ್ಯ ವಸ್ತುಗಳನ್ನು ಸ್ವಚ್ಛಗೊಳಿಸಬೇಕು. ಭೂ ಕುಸಿತದಿಂದ ಸಂಚಾರಕ್ಕೆ ಅಡ್ಡಿಯಾದರೆ ಜಿಪಂ ಮತ್ತು ಲೋಕೋಪಯೋಗಿ ಇಲಾಖೆ ರಸ್ತೆ ಸಂಪರ್ಕ ಕಲ್ಪಿಸಲು ಕ್ರಮ ತೆಗೆದುಕೊಳ್ಳಬೇಕು. ದೂರವಾಣಿ ಇಲಾಖೆ ಸಿಬ್ಬಂದಿ ಯಾವುದೇ ಸಬೂಬು ಹೇಳಿ ತಪ್ಪಿಸಿಕೊಳ್ಳಬಾರದು. ಗ್ರಾಹಕರಿಗೆ ಉತ್ತಮ ಸೇವೆ ನೀಡಬೇಕೆಂದು ತಾಕೀತು ಮಾಡಿದರು.
ಸಭೆಯಲ್ಲಿ ತಹಶೀಲ್ದಾರ್ ಭಾಗ್ಯಾ, ತಾಪಂ ಕಾರ್ಯನಿರ್ವಹಣಾಧಿಕಾರಿ ಮೂಕಪ್ಪಗೌಡ, ತಾಪಂ ಸದಸ್ಯ ಕೆ.ಆರ್.ವೆಂಕಟೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಟರಾಜ್ ಮತ್ತಿತರರು ಹಾಜರಿದ್ದರು.