ಶೃಂಗೇರಿ: ಸರ್ಕಾರ ಜಿಲ್ಲೆಯ ಎರಡೂ ತಾಲೂಕು ಕೇಂದ್ರದಲ್ಲಿ ಜಲ ಹವಾಮಾಪನ ಕೇಂದ್ರ ಸ್ಥಾಪಿಸಿ ರೈತರಿಗೆ ಕಾಲ ಕಾಲಕ್ಕೆ ಹವಾಮಾನದ ವ್ಯತ್ಯಯಗಳ ಬಗ್ಗೆ ವಿವರಿಸುತ್ತಿದ್ದು, ಶೃಂಗೇರಿ ಹಾಗೂ ಕಡೂರಿನಲ್ಲಿ ಕೇಂದ್ರವನ್ನು ಸ್ಥಾಪಿಸಿ ಸಮಗ್ರ ಮಾಹಿತಿ ನೀಡಲಾಗುತ್ತಿದೆ.
ಕಳೆದ ಎರಡು ದಶಕದ ಹಿಂದೆ ಪಟ್ಟಣದ ಹೊರವಲಯದ ಪ್ರವಾಸಿ ಕೇಂದ್ರದಲ್ಲಿ ಜಲಮಾಪನ ಕೇಂದ್ರವನ್ನು ಸ್ಥಾಪಿಸಿ ಮಳೆಯ ಪ್ರಮಾಣದ ದಾಖಲೆ ಮಾತ್ರ ನೀಡಲಾಗುತ್ತಿತ್ತು. ಇದೀಗ ಜಲ ಹವಾಮಾಪನಾ ಕೇಂದ್ರದಿಂದ ಅನೇಕ ಮಾಹಿತಿಗಳು ದಾಖಲಾಗುತ್ತಿದ್ದು, ಸಾರ್ವಜನಿಕರಿಗೆ, ರೈತರಿಗೆ ಹವಮಾನದಲ್ಲಿ ಆಗುವ ಬದಲಾವಣೆಗಳನ್ನು ತಿಳಿಯಲು ಸಹಾಯಕವಾಗಲಿದೆ.
ಯಂತ್ರೋಪಕರಣಗಳ ಮೂಲಕ ಮಾಹಿತಿಯನ್ನು ಸಂಗ್ರಹಿಸಿ ಎಲ್ಲಾ ಇಲಾಖೆಗಳಿಗೆ ದಾಖಲೆ ಸಂಗ್ರಹವಾಗುತ್ತಿದೆ. ಕೇಂದ್ರದಿಂದ ಪ್ರತಿ ದಿನ ಮೂರು ಭಾರಿ ದಾಖಲೆಯನ್ನು ಸಂಗ್ರಹಿಸಿ ಮುನ್ನೆಚ್ಚರಿಕೆ ಕ್ರಮಗಳಿಗಾಗಿ ಮಾಹಿತಿ ಕಳುಹಿಸಲಾಗುತ್ತಿದೆ.
ಸಾಧಾರಣ ಮಳೆ ಮಾಪನ, ನೀರಿನ ಭಾಷ್ಪೀಕರಣದ ಮಾಪನ, ಸ್ವಯಂಚಾಲಿ ಮಳೆಮಾಪನ, ಹವಮಾನದಲ್ಲಿ ನೀರಿನ ಮತ್ತು ತೇವಾಂಶಗಳ ಗುರುತಿಸುವಿಕೆ, ವಾತಾವರಣದಲ್ಲಿರುವ ತೇವಾಂಶ ಮಾಪನ, ನೀರಿನ ಉಷ್ಣಾಂಶದ ಮಾಪನ, ಗಾಳಿಯ ದಿಕ್ಕಿನಿಂದ ತಿಳಿಯುವ ಮಾಪನ, ಗಾಳಿಯ ವೇಗ ಕಂಡು ಹಿಡಿಯುವ ಮಾಪನ ಸೇರಿದಂತೆ ಹಲವಾರು ಮಾಪನಗಳಿದ್ದು ಇದರಿಂದ ಜಲಮಾಪನ ಕೇಂದ್ರದಲ್ಲಿ ಎಲ್ಲ ಮಾಹಿತಿಗಳನ್ನು ದಾಖಲಿಸಲಾಗುತ್ತಿದೆ.
ಪ್ರತೀ ಗ್ರಾಮ ಪಂಚಾಯ್ತಿಗಳಲ್ಲಿರುವ ಮಳೆ ಮಾಪನ ಕೇಂದ್ರದಲ್ಲಿ ಮಳೆ ಪ್ರಮಾಣವನ್ನು ಮಾತ್ರ ಸಂಗ್ರಹಿಸಲಾಗುತ್ತಿತ್ತು. ಇದೀಗ ಮಳೆಯ ವಿವರವಲ್ಲದೆ ಸೂರ್ಯನ ಪ್ರಖರತೆಯ ಮಾಹಿತಿಗಳು ಸಿಗಲಿದೆ. ಕೇಂದ್ರದಲ್ಲಿ ವೀಕ್ಷಕರಾಗಿ ಪಟ್ಟಣದ ಹವಾಮಾನ ಇಲಾಖೆಯ ಜಿ.ವಿ ಮೋಹನ್ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಯೊಂದಿಗೆ ಮಾತನಾಡಿದ ಅವರು, ಕೇಂದ್ರದಲ್ಲಿ ಅತ್ಯಾಧುನಿಕ ಯಂತ್ರೋಪಕರಣ ಅಳವಡಿಸಲಾಗಿದ್ದು, ಕಾಲ ಕಾಲಕ್ಕೆ ಮಾಹಿತಿಗಳನ್ನು ನೀಡಲಾಗುತ್ತದೆ ಎಂದರು.