ಶೃಂಗೇರಿ: ದಾಖಲೆ ಪ್ರಮಾಣದ ಉಷ್ಣಾಂಶ ಏರಿಕೆಯಾಗಿದ್ದರೂ ತುಂಗೆ ಮಾತ್ರ ಶೃಂಗೇರಿಯಲ್ಲಿ ಎಂದಿನಂತೆ ಶಾಂತವಾಗಿ ಹರಿಯುತ್ತಿದ್ದಾಳೆ. ‘ಗಂಗಾ ಸ್ನಾನ, ತುಂಗಾಪಾನ’ ಎಂಬಂತೆ ನದಿಯ ಒಡಲು ಬರದಾಗದೆ, ಸಾಮಾನ್ಯ ಮಟ್ಟದಲ್ಲಿ ಹರಿಯುತ್ತಿದೆ.
ಧರ್ಮಸ್ಥಳ, ಕೊಲ್ಲೂರು, ಉಡುಪಿಯಲ್ಲಿ ನೀರಿನ ಕೊರತೆಯುಂಟಾಗಿದೆ. ಆದರೆ ತುಂಗಾ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಕಡಿಮೆ ಇದ್ದರೂ, ಸಾಮಾನ್ಯ ಮಟ್ಟದಲ್ಲಿ ನೀರು ಹರಿಯುತ್ತಿದೆ. ತಾಲೂಕಿನಲ್ಲಿ ಈ ವರ್ಷ ಬೇಸಗೆಯಲ್ಲಿ ಮಳೆಯ ಪ್ರಮಾಣ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಮಳೆಯ ಪ್ರಮಾಣ ತೀವ್ರ ಕುಸಿತವಾಗಿದೆ. ತೋಟಗಾರಿಕೆ ಬೆಳೆಗೆ ಮೋಟರ್ ಮೂಲಕ ನೀರೆತ್ತುವ ಪ್ರಮಾಣ ಕಡಿಮೆಯಾಗಿರುವುದು, ನೀರಿನ ಹರಿವು ಸಾಮಾನ್ಯ ಮಟ್ಟದಲ್ಲಿ ಹರಿಯುವುದಕ್ಕೆ ಮತ್ತೂಂದು ಕಾರಣವಾಗಿದೆ.
ಪ್ರವಾಸಿಗರ ಸಂಖ್ಯೆ ಹೆಚ್ಚಳ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತೀವ್ರ ನೀರಿನ ಅಭಾವದಿಂದ ಪ್ರವಾಸವನ್ನು ಮುಂದೂಡುವಂತೆ ಧರ್ಮಸ್ಥಳದ ಧರ್ಮಾಧಿಕಾರಿಗಳು ಮನವಿ ಮಾಡಿದ್ದು, ಅದರ ಪ್ರಭಾವ ಶ್ರೀಶಾರದಾ ಪೀಠಕ್ಕೆ ಆಗಮಿಸುತ್ತಿರುವ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗಿದೆ. ಪಿಯುಸಿ, ಎಸ್ಸೆಸ್ಸೆಲ್ಸಿ ಪರೀಕ್ಷೆ, ಚುನಾವಣೆ ಪ್ರಕ್ರಿಯೆ ಮುಗಿದ ಹಿನ್ನ್ನೆಲೆಯಲ್ಲಿ ಶೃಂಗೇರಿಗೆ ಸಹಸ್ರಾರು ಪ್ರವಾಸಿಗರು ಬರುತ್ತಿದ್ದಾರೆ. ಶ್ರೀಮಠದ ಬಳಿ ಸಾಕಷ್ಟು ಪ್ರವಾಸಿಗರು ಕಂಡು ಬರುತ್ತಿದ್ದು, ಗಾಂಧಿ ಮೈದಾನದಲ್ಲಿ ವಾಹನ ನಿಲುಗಡೆ ಸ್ಥಳ ತುಂಬುತ್ತಿರುವುದು ಕಂಡು ಬರುತ್ತಿದೆ.
ಮಕ್ಕಳಿಗೆ ಅಕ್ಷರ ಅಭ್ಯಾಸ: ಶಾಲೆಗಳು ಆರಂಭವಾಗುತ್ತಿರುವ ಹಿನ್ನ್ನೆಲೆಯಲ್ಲಿ ಮಕ್ಕಳಿಗೆ ಅಕ್ಷರ ಅಭ್ಯಾಸ ಮಾಡಿಸುವ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಶ್ರೀಮಠದ ಎದುರು ಶ್ರೀಚಂದ್ರಶೇಖರ ಭಾರತೀ ಸಭಾಂಗಣದಲ್ಲಿ ನೂರಾರು ಮಕ್ಕಳಿಗೆ ಅಕ್ಷರಭ್ಯಾಸ ನಿರಂತರವಾಗಿ ನಡೆಯುತ್ತಿದೆ.
ನದಿಯ ನೀರು ಕಲುಷಿತಗೊಳಿಸಬೇಡಿ: ನದಿಯಲ್ಲಿ ನೀರಿನ ಹರಿವು ಕಡಿಮೆಯಾಗಿದ್ದು, ಇದರೊಂದಿಗೆ ನದಿಗೆ ಅಪಾರ ಪ್ರಮಾಣದ ತ್ಯಾಜ್ಯ ಸೇರ್ಪಡೆಯಿಂದ ನದಿ ಕಲುಷಿತವಾಗಿದೆ. ಪಟ್ಟಣದ ಗಾಂಧಿ ಮೈದಾನದಲ್ಲಿ ಪ್ರವಾಸಿಗರು ಬಯಲು ಶೌಚಾಲಯದಿಂದ ಹಾಗೂ ಪ್ಲಾಸ್ಟಿಕ್ ಎಲ್ಲೆಂದರಲ್ಲಿ ಬಿಸಾಡುತ್ತಿರುವುದು, ಮಾಂಸದ ಅಂಗಡಿ ತ್ಯಾಜ್ಯ, ವಾಹನ ತೊಳೆದ ನೀರು ನೇರವಾಗಿ ನದಿಗೆ ಸೇರಿ ನದಿಯ ನೀರು ಕಲುಷಿತವಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ನದಿಯ ನೀರು ಕಲುಷಿತಗೊಳಿಸದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಹಾಗೂ ಭಕ್ತರು ಆಗ್ರಹಿಸಿದ್ದಾರೆ.
ಬೇಸಿಗೆಯ ಮಳೆ ಕೊರತೆಯ ನಡುವೆಯೂ ನದಿಯ ನೀರಿನ ಮಟ್ಟ ಸಾಮಾನ್ಯವಾಗಿದೆ. ನದಿಯ ನೀರನ್ನು ಕಲುಷಿತ ಮಾಡದಂತೆ ತಡೆಗಟ್ಟಬೇಕಾಗಿದ್ದು, ಇದುವರೆಗೂ ಪಟ್ಟಣಕ್ಕೆ ಕುಡಿಯುವ ನೀರಿನ ಸಮಸ್ಯೆಯಾಗಿಲ್ಲ.
ಪೃಥ್ವಿರಾಜ್, ಶೃಂಗೇರಿ.
ರಾಜ್ಯದಲ್ಲಿ ಮಳೆಯ ಕೊರತೆ ತೀವ್ರವಾಗಿದ್ದರೂ, ಶೃಂಗೇರಿಯಲ್ಲಿ ನದಿಯ ನೀರನ್ನು ನೋಡಿ ಸಂತೋಷವಾಗಿದೆ. ಮಠದ ಬಳಿ ಹರಿಯುವ ನೀರು ಸ್ವಚ್ಛಂದವಾಗಿದ್ದು, ಮೀನುಗಳು ನೋಡಲು ಖುಷಿಯಾಗಿದೆ. ನಮ್ಮ ಪ್ರವಾಸ ಉಡುಪಿ, ಧರ್ಮಸ್ಥಳಕ್ಕೆ ಮುಂದುವರೆಯುವ ಬದಲಿಗೆ ಇಲ್ಲಿಯೇ ಇದ್ದು, ಸಿರಿಮನೆ ಜಲಪಾತ ಹಾಗೂ ಹೊರನಾಡಿಗೆ ತೆರಳಲಿದ್ದೇವೆ.
•
ಶಿವಾನಂದಚಾರ್ಯ,
ಬೆಂಗಳೂರು ನಿವಾಸಿ.