ರಮೇಶ್ ಕರುವಾನೆ
ಶೃಂಗೇರಿ: ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಸಕಲ ಸೌಲಭ್ಯಗಳಿದ್ದರೂ ತಜ್ಞ ವೈದ್ಯರಿಲ್ಲದೇ ರೋಗಿಗಳು ಮಣಿಪಾಲ, ಮಂಗಳೂರು ಆಸ್ಪತ್ರೆಗಳಿಗೆ ತೆರಳಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ.
ಸುಸಜ್ಜಿತ ಕಟ್ಟಡ, ಹಾಸಿಗೆಗಳು, ಕೊಠಡಿಗಳು, ಔಷಧ, ಚಿಕಿತ್ಸೆಗೆ ಅಗತ್ಯ ಉಪಕರಣಗಳು ಸೇರಿದಂತೆ ಎಲ್ಲಾ ಮೂಲ ಸೌಕರ್ಯಗಳಿವೆ. ಪ್ರತಿನಿತ್ಯ ಹೊರರೋಗಿಗಳು ಒಳರೋಗಿಗಳು ಆಗಮಿಸುತ್ತಾರೆ. ಆದರೆ, ಕೆಲ ವರ್ಷಗಳಿಂದ ಆಸ್ಪತ್ರೆಯಲ್ಲಿ ತಜ್ಞ ವೈದ್ಯರು-ಸಿಬ್ಬಂದಿ ಕೊರತೆ ಕಾಡುತ್ತಿದೆ. ಪ್ರತಿನಿತ್ಯ 150-200ಕ್ಕೂ ಹೆಚ್ಚು ಹೊರರೋಗಿಗಳು ಇಲ್ಲಿ ಚಿಕಿತ್ಸೆ ಪಡೆಯುತ್ತಾರೆ. ಆದರೆ, 2007ರಲ್ಲಿ 30 ಹಾಸಿಗೆಯ ಆಸ್ಪತ್ರೆಯನ್ನು 100 ಹಾಸಿಗೆಗಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೆ ಏರಿಸಬೇಕೆಂಬ ಸರ್ಕಾರಿ ಆದೇಶ ಬಂದಿತ್ತು. ಆದರೆ, ಇದುವರೆಗೂ ಕಾರ್ಯಗತಗೊಂಡಿಲ್ಲ.
ಜಾಗದ ಕೊರತೆ: ಸುಸಜ್ಜಿತ ಕಟ್ಟಡ ಹೊಂದಿದ್ದರೂ ಜಾಗದ ಕೊರತೆ ಇದೆ. ಈಗಾಗಲೇ ಆಸ್ಪತ್ರೆಯ ಜಾಗ ಒತ್ತುವರಿಯಾಗಿದೆ. 30 ಹಾಸಿಗೆಗೆ ಮಾತ್ರ ಸೀಮಿತವಾಗಿದೆ. ಸಾಧಾರಣವಾಗಿ ಪ್ರತಿನಿತ್ಯ 25 ಒಳರೋಗಿಗಳು ಇರುತ್ತಾರೆ. ರಾತ್ರಿ ಪ್ರತಿನಿತ್ಯ 15-20 ರೋಗಿಗಳು ಬರುತ್ತಾರೆ. ಆಸ್ಪತ್ರೆಯಲ್ಲಿ ಒಟ್ಟು 6 ವೈದ್ಯ ಹುದ್ದೆಗಳಿದ್ದರೂ ಹಾಲಿ ಇರುವುದು ಇಬ್ಬರು ಮಾತ್ರ. ಮತ್ತೂಬ್ಬರು ನಿವೃತ್ತ ವೈದ್ಯರಿದ್ದಾರೆ. ಅವರು ರಕ್ತದೊತ್ತಡ, ಮಧುಮೇಹ, ಕ್ಯಾನ್ಸರ್ ರೋಗ ಪತ್ತೆ ಮುಂತಾದವುಗಳ ಬಗ್ಗೆ ತಪಾಸಣೆ ನಡೆಸಲಿದ್ದಾರೆ. ದಂತ ವೈದರಿಲ್ಲ.
ನರ್ಸ್ ಸಿಬ್ಬಂದಿ ಕೊರತೆ ಇದೆ. ಶಸ್ತ್ರ ಚಿಕಿತ್ಸೆ ತಜ್ಞರು, ಮಕ್ಕಳ ತಜ್ಞರು, ಅರವಳಿಕೆ ತಜ್ಞರ ಹುದ್ದೆ ಖಾಲಿ ಇವೆ. ಇನ್ನು ಇತರೇ ಸಿಬ್ಬಂದಿ ಕೊರತೆಯೂ ಇದೆ. ಸ್ವಚ್ಛತಾ ಕಾರ್ಯಕ್ಕಾಗಿ ಗುತ್ತಿಗೆ ನೌಕರರನ್ನು ನೇಮಿಸಿಕೊಳ್ಳಲಾಗಿದೆ. ವಸತಿ ಗೃಹಗಳ ಸಮಸ್ಯೆ ಬಹಳ ವರ್ಷಗಳಿಂದಲೇ ಇದೆ. ಕನಿಷ್ಠ 20 ವಸತಿ ಗೃಹಗಳ ಅವಶ್ಯಕತೆ ಇದೆ. ಸದ್ಯಕ್ಕೆ ಇರುವುದು 4 ವಸತಿ ಗೃಹಗಳು. ರಾತ್ರಿ ಪಾಳಿಯ ಸಿಬ್ಬಂದಿ ಗೆ ಎಕ್ಸರೆ, ಲ್ಯಾಬ್, ತುರ್ತು ವಾಹನ ಸೇವೆಯಲ್ಲಿ ಇರುವವರಿಗೆ, ನರ್ಸ್‌ಗಳು ಸೇರಿದಂತೆ ಅಗತ್ಯ ತುರ್ತು ಸೇವೆಯಲ್ಲಿರುವವರಿಗೆ ವಸತಿ ಗೃಹಗಳ ವ್ಯವಸ್ಥೆ ಇಲ್ಲ.
ಆಸ್ಪತ್ರೆ ಮೇಲ್ದರ್ಜೆಗೆ ಏರಿಸಿದ್ದರೂ ಸಾಮರ್ಥ್ಯಕ್ಕೆ ತಕ್ಕಂತೆ ಕಟ್ಟಡ, ಸಿಬ್ಬಂದಿ ಇಲ್ಲ. ಆಸ್ಪತ್ರೆಯಲ್ಲಿ 50ಕೆ.ವಿ. ಸಾಮರ್ಥ್ಯದ ಜನರೇಟರ್ ಇದೆ. ಬೆಳಕಿನ ವ್ಯವಸ್ಥೆಗೆ ಸೋಲಾರ್ ಲೈಟ್, ವಾಟರ್ ಹೀಟರ್ ಸೌಲಭ್ಯವಿದೆ. ಆದರೆ, ಈ ವರ್ಷ ತಾಲೂಕಿನಲ್ಲಿ ದಾಖಲೆ ಪ್ರಮಾಣದಲ್ಲಿ ಮಳೆ ಸುರಿದಿದ್ದು, ತುಂಗಾ ನದಿಯ ಪ್ರವಾಹ, ಮಳೆ-ಗಾಳಿಯಿಂದಾಗಿ ಒಂದು ತಿಂಗಳು ಆಸ್ಪತ್ರೆಗೆ ಕುಡಿಯುವ ನೀರಿನ ಸಮಸ್ಯೆಯಾಗಿತ್ತು. ಈ ಸಂದರ್ಭದಲ್ಲಿ ಟ್ಯಾಂಕರ್ ಮೂಲಕ ಆಸ್ಪತ್ರೆಗೆ ನೀರು ಪೂರೈಸಲಾಗಿತ್ತು. 1 ಟ್ಯಾಂಕರ್‌ಗೆ 800 ರೂ. ಕೊಟ್ಟು ನೀರು ಖರೀದಿಸಲಾಗಿತ್ತು. ಆದರೆ, ಈಗ ನೀರಿನ ಕೊರತೆ ಇಲ್ಲ. ಆಸ್ಪತ್ರೆಯಲ್ಲಿ ಔಷಧ ಸಾಮಗ್ರಿಗಳು ಯಥೇತ್ಛವಾಗಿದ್ದರೂ ಮುಖ್ಯವಾಗಿ ಹಾವು, ನಾಯಿ ಕಚ್ಚಿದಾಗ ಬಳಸುವ ಅಗತ್ಯ ಚುಚ್ಚುಮದ್ದು ಕಳೆದ 1 ವರ್ಷದಿಂದ ಆಸ್ಪತ್ರೆಗೆ ಪೂರೈಕೆಯಾಗುತ್ತಿಲ್ಲ.
ಆಸ್ಪತ್ರೆಯಲ್ಲಿ ಮತ್ತೂಂದು ಮುಖ್ಯ ಸಮಸ್ಯೆ ಎಂದರೆ ಶೌಚಾಲಯ ಮಾತ್ರ ದುರ್ವಾಸನೆ ಬೀರುತ್ತಿದೆ. ಸಮರ್ಪಕವಾದ ಶೌಚಾಲಯ ವ್ಯವಸ್ಥೆ ಇಲ್ಲ. ಆಸ್ಪತ್ರೆಯ ಸಿಬ್ಬಂದಿಗೆ 3-4 ತಿಂಗಳಿನಿಂದ ಸಂಬಳ ದೊರಕುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಆಸ್ಪತ್ರೆಯಲ್ಲಿ ರಾತ್ರಿ ಹೊತ್ತು ಕುಡುಕರ ಹಾವಳಿ ಇದ್ದು, ಅಗತ್ಯ ಪೊಲೀಸ್ ಸಿಬ್ಬಂದಿ ಯನ್ನು ನಿಯೋಜಿಸಬೇಕೆಂಬ ಆಗ್ರಹ ಸಾರ್ವಜನಿಕರಿಂದ ಕೇಳಿಬರುತ್ತಿದೆ. ಸರ್ಕಾರ ರೋಗಿಗಳ ಸಂಖ್ಯೆಗೆ ಅನುಗುಣವಾಗಿ ವೈದ್ಯರನ್ನು ನೇಮಿಸಿದರೆ ಹೆಚ್ಚಿನ ಪ್ರಯೋಜನೆ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಆಗುತ್ತದೆ.