ಶೃಂಗೇರಿ: ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದ ಉಭಯ ಜಗದ್ಗುರುಗಳಾದ ಶ್ರೀ ಭಾರತೀ ತೀರ್ಥ ಸ್ವಾಮೀಜಿ ಹಾಗೂ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಗಳ ಚಾತುರ್ಮಾಸ್ಯ ವ್ರತಾಚರಣೆ ಶುಕ್ರವಾರ ಸೀಮೋಲ್ಲಂಘನದೊಂದಿಗೆ ಸಂಪನ್ನಗೊಂಡಿತು.
ಉಭಯ ಜಗದ್ಗುರುಗಳು ಶ್ರೀಮಠದ ನರಸಿಂಹ ವನದಲ್ಲಿರುವ ಗುರುಭವನದಲ್ಲಿ ಶ್ರಾವಣ ಮಾಸದ ಹುಣ್ಣಿಮೆಯಂದು ಚಾತುರ್ಮಾಸ್ಯ ವ್ರತ ಆರಂಭಿಸಿದ್ದರು. ಶುಕ್ರವಾರ ಗುರುಭವನದಲ್ಲಿ ಉಮಾಮಹೇಶ್ವರ ವ್ರತವನ್ನು ನೆರವೇರಿಸಿ, ಚಾತುರ್ಮಾಸ್ಯ ಮುಕ್ತಾಯಗೊಳಿಸಿದರು.
ವ್ರತ ಮುಕ್ತಾಯದ ನಂತರ ಸಂಪ್ರದಾಯದಂತೆ ಜಗದ್ಗುರುಗಳು ಶ್ರೀಮಠಕ್ಕೆ ಆಗಮಿಸಿ ಶ್ರೀ ಶಾರದಾಂಬೆ, ಶ್ರೀ ಶಕ್ತಿಗಣಪತಿ ಹಾಗೂ ಹೊರ ಪ್ರಾಂಗಣದ ಶ್ರೀ ವಿದ್ಯಾಶಂಕರ, ಶ್ರೀ ಸುಬ್ರಹ್ಮಣ್ಯ, ತೋರಣ ಗಣಪತಿ, ಶಂಕರಚಾರ್ಯ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿದರು.
ಮಧ್ಯಾಹ್ನ ಬೆಟ್ಟದ ಮಲಹಾನಿಕರೇಶ್ವರ ಸ್ವಾಮಿ ಸನ್ನಿಧಿಗೆ ಕಾಲ್ನಡಿಗೆಯಲ್ಲಿ ತೆರಳಿ ಶ್ರೀ ಭವಾನಿ ಅಮ್ಮನವರು, ಸ್ತಂಭ ಗಣಪತಿ ಹಾಗೂ ಶ್ರೀ ಮಲಹಾನಿಕರೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿದರು. ಆನೆ, ಅಶ್ವ, ಛತ್ರಿ, ಚಾಮರ, ವಾದ್ಯ ಹಾಗೂ ಶ್ರೀ ಸದ್ವಿದ್ಯಾ ಸಂಜೀವಿನಿ ಸಂಸ್ಕೃತ ಪಾಠಶಾಲೆಯ ವಿದ್ಯಾರ್ಥಿಗಳ ವೇದಘೋಷಗಳೊಂದಿಗೆ ಜಗದ್ಗುರುಗಳು ಮೆರವಣಿಗೆಯಲ್ಲಿ ತೆರಳಿದರು. ಶ್ರೀ ಮಠದ ಅಧಿಕಾರಿಗಳಾದ ಶಿವಶಂಕರಭಟ್, ರಾಮಕೃಷ್ಣಯ್ಯ, ಗೋಪಾಲಕೃಷ್ಣ, ಶ್ರೀಪಾದರಾವ್ ಮತ್ತಿತರರು ಉಪಸ್ಥಿತರಿದ್ದರು.
ಭಕ್ತರ ಭೇಟಿ: ವ್ರತಾಚರಣೆಯ ಎರಡು ತಿಂಗಳ ಕಾಲ ಜಗದ್ಗುರುಗಳು ಗುರು ನಿವಾಸದಲ್ಲಿ ವಾಸ್ತವ್ಯ ಹೂಡಿದ್ದರು. ದೇಶದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಪ್ರತಿ ದಿನ ಗುರು ನಿವಾಸಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು. ಈ ಅವಧಿಯಲ್ಲೇ ಸಂಸ್ಕೃತ ವಿದ್ವಾಂಸರ ವಾಕ್ಯಾರ್ಥ ಸಭೆ ಜಗದ್ಗುರುಗಳ ಅಧ್ಯಕ್ಷತೆಯಲ್ಲಿ ನಡೆದಿದ್ದು, ಅದರಲ್ಲಿ ದೇಶದ ನಾನಾ ಭಾಗಗಳ ಸಂಸ್ಕೃತ ಪಂಡಿತರು ಭಾಗವಹಿಸಿದ್ದರು.