Advertisement

ಮಳೆ ಕೊರತೆ; ಕೃಷಿ ಕಾರ್ಯಕ್ಕೆ ಹಿನ್ನಡೆ

11:39 AM Jul 13, 2019 | Naveen |

ಶೃಂಗೇರಿ: ಮಲೆನಾಡಿನಲ್ಲಿ ಕಳೆದ ವರ್ಷ ದಾಖಲೆ ಪ್ರಮಾಣದಲ್ಲಿ ಮಳೆಯಾಗಿತ್ತು. ಆದರೆ, ಈ ವರ್ಷ ಮಳೆಯ ಕೊರತೆಯಿಂದ ಕೃಷಿ ಕಾರ್ಯಕ್ಕೆ ಹಿನ್ನಡೆಯಾಗಿದೆ.

Advertisement

ಕಳೆದ ವರ್ಷ ಅತಿವೃಷ್ಟಿ, ಈ ಸಾಲಿನ ಅನಾವೃಷ್ಟಿಯಿಂದಾಗಿ ಮಲೆನಾಡಿನ ವಾಣಿಜ್ಯ ಬೆಳೆಗಳು ಸೇರಿದಂತೆ ರೈತರ ಮೇಲೂ ತೀವ್ರ ಪರಿಣಾಮ ಬೀರಿದೆ.

ಜೂನ್‌ ಮೂರನೇ ವಾರದವರೆಗೂ ಕೈಕೊಟ್ಟ ಮಳೆ, ಕೊನೆ ವಾರದಲ್ಲಿ ಅಲ್ಪ ಪ್ರಮಾಣದಲ್ಲಿ ಸುರಿದಿದ್ದರಿಂದ ಭತ್ತದ ಬಿತ್ತನೆ ಕಾರ್ಯಕ್ಕೆ ಅನುಕೂಲಕರವಾಗಿದೆ.

ಬಿತ್ತನೆ ಮಾಡುವಷ್ಟು ಮಳೆ ಬಂದಿದ್ದರೂ ನಾಟಿಗೆ ಅಗತ್ಯವಿರುವಷ್ಟು ಮಳೆ ಇನ್ನೂ ಆಗಿಲ್ಲ. ಜು.20ರ ನಂತರವಷ್ಟೇ ತಾಲೂಕಿನಲ್ಲಿ ನಾಟಿ ಆರಂಭಗೊಳ್ಳಲಿದ್ದು, ಮಳೆಯ ನಿರೀಕ್ಷೆಯಲ್ಲಿ ರೈತರಿದ್ದಾರೆ.

ಮಲೆನಾಡಿನಲ್ಲಿ ಸದ್ಯಕ್ಕೆ ಕುಡಿಯುವ ನೀರಿನ ಸಮಸ್ಯೆ ಮಾತ್ರ ಬಗೆಹರಿದಿದ್ದು, ತುಂಬಿ ಹರಿಯಬೇಕಾಗಿದ್ದ ತುಂಗಾ ನದಿ ಸಾಮಾನ್ಯ ಮಟ್ಟದಲ್ಲಿ ಹರಿಯುತ್ತಿದೆ. ಗ್ರಾಮೀಣ ಪ್ರದೇಶದ ಹಳ್ಳ, ಕೆರೆಗಳು ಮಳೆಗಾಲದ ಸೊಬಗನ್ನು ಕಂಡಿಲ್ಲ. ಸರಾಸರಿ ಮಳೆ ಜೂನ್‌ ಕೊನೆಯವರೆಗೆ 30-40 ಇಂಚು ಆಗಬೇಕಿತ್ತು. ಈ ವರ್ಷ ಕೇವಲ 10-15 ಇಂಚು ಮಳೆ ಆಗಿದೆ.

Advertisement

ಕಳೆದ ವರ್ಷ ಬೇಸಿಗೆಯ ಮಳೆಯೂ ಸಮೃದ್ಧಿಯಾಗಿದ್ದು, ಮೇ 29ರಿಂದಲೇ ಮಳೆಗಾಲ ಆರಂಭಗೊಂಡಿತ್ತು. ಜೂನ್‌ ಕೊನೆಯೊಳಗೆ ಎರಡು ಪ್ರವಾಹ ಕಂಡಿದ್ದ ತುಂಗಾ ನದಿ, ಈ ವರ್ಷ ಪ್ರವಾಹ ಉಂಟಾಗಲೇ ಇಲ್ಲ. ಕಳೆದ ವರ್ಷ ಅತಿವೃಷ್ಟಿ ಪರಿಣಾಮ ಬಹುತೇಕ ರೈತರು ಅಡಕೆ, ಕಾಳು ಮೆಣಸು, ಕಾಫಿಯನ್ನು ಕೊಳೆ ರೋಗದಿಂದ ಕಳೆದುಕೊಂಡಿದ್ದರು.

ಭಾರಿ ಪ್ರಮಾಣದ ಮಳೆಗೆ ಭೂ ಕುಸಿತ, ಹಳ್ಳ ಉಕ್ಕಿ ಹರಿದು ಸಾಕಷ್ಟು ಜಮೀನು ಹಾಳಾಗಿತ್ತು. ಈ ವರ್ಷ ಅದಕ್ಕೆ ವ್ಯತಿರಿಕ್ತ ಎಂಬಂತೆ ಬೇಸಿಗೆ ಮಳೆ ತೀರಾ ಕಡಿಮೆಯಾಗಿದೆ. ಮೇ ತಿಂಗಳಿನಲ್ಲಿ ತಾಲೂಕಿನ ಬಹುತೇಕ ಭಾಗದಲ್ಲಿ ಮಳೆ ಇಲ್ಲದೇ ಎಲ್ಲಾ ಬೆಳೆಗಳೂ ಒಣಗುವಂತಾಗಿತ್ತು.

ಬಿತ್ತನೆಗೆ ಆರಂಭ: ತಾಲೂಕಿನಲ್ಲಿ ಮಳೆಯಾಶ್ರಿತ ಭತ್ತದ ಗದ್ದೆಗಳು ಹೆಚ್ಚಾಗಿದ್ದು, ಬಿತ್ತನೆಗೆ ಅಗತ್ಯವಿರುವಷ್ಟು ವಾಡಿಕೆ ಮಳೆ ಆಗಿದೆ. ಕೃಷಿ ಇಲಾಖೆ ಪೂರೈಸುವ ಭತ್ತದ ಬೀಜಕ್ಕಿಂತಲೂ ರೈತರೇ ಉತ್ಪಾದಿಸುವ ಭತ್ತದಿಂದ ಆಯ್ದ ಬೀಜವನ್ನು ಬಳಸುವ ರೈತರ ಸಂಖ್ಯೆ ಹೆಚ್ಚಾಗಿದೆ. ಕೃಷಿ ಇಲಾಖೆ ಎರಡು ತಳಿಯ ಬೀಜ ಪೂರೈಸುತ್ತಿದ್ದು, ಸ್ಥಳೀಯವಾಗಿ ಬೆಳೆಯುವ ಭತ್ತದ ಬಿತ್ತನೆ ಬೀಜ ಲಭ್ಯವಿಲ್ಲ. ಭತ್ತದ ಬಿತ್ತನೆ ಬೀಜ ಕೃಷಿ ಇಲಾಖೆ ಪೂರೈಸುತ್ತಿದ್ದರೂ, ಇಲ್ಲಿ ಬಹುತೇಕ ಸಹಾಯಧನ ನೀಡಿದ್ದರೂ ಬಿತ್ತನೆ ಬೀಜದ ದರ ಅಧಿಕವಾಗಿದೆ. ತಾಲೂಕಿನಲ್ಲಿ ರಸಗೊಬ್ಬರದ ಕೊರತೆ ಇಲ್ಲ.

ತೋಟಗಾರಿಕಾ ಬೆಳೆ: ತಾಲೂಕಿನ ಪ್ರಮುಖ ವಾಣಿಜ್ಯ ಬೆಳೆ ಮೇಲೆ ಮಳೆ ಕೊರತೆ ಪರಿಣಾಮ ಬೀರಿದ್ದು, ಬೇಸಿಗೆಯಲ್ಲಿ ಮಳೆ ಇಲ್ಲದೇ ಫಸಲು ಕಡಿಮೆಯಾಗಿದೆ. ಕೆಲ ತೋಟದಲ್ಲಿ ನೀರಿನ ಕೊರತೆಯಿಂದ ಅಡಕೆ ಮರವೇ ನಾಶವಾಗಿದೆ. ಕಾಳು ಮೆಣಸಿನ ಕಾಯಿ ಕಟ್ಟಲು ಬೇಸಿಗೆಯಲ್ಲಿ ಉತ್ತಮ ಮಳೆಯಾಗಬೇಕು. ನೀರಿಲ್ಲದೇ ಬಳ್ಳಿಗಳು ಸತ್ತಿದ್ದು, ಮೆಣಸಿನ ಫಸಲೂ ತೀವ್ರ ಕಡಿಮೆಯಾಗಿದೆ. ಕಾಫಿ ಬೇಸಿಗೆಯಲ್ಲಿ ಮಾರ್ಚ್‌ ಅಥವಾ ಏಪ್ರಿಲ್ನಲ್ಲಿ ಉತ್ತಮ ಮಳೆಯಾಗಬೇಕು. ನಂತರ 8-10ದಿನದಲ್ಲಿ ಪೂರಕ ಮಳೆಯೂ ಅಗತ್ಯ. ಸಕಾಲದಲ್ಲಿ ಮಳೆಯಾಗದಿದ್ದರೆ, ಆ ವರ್ಷದ ಕಾಫಿ ಫಸಲಿಗೆ ಹಾನಿಯಾಗಲಿದೆ. ಅದೇ ಪರಿಸ್ಥಿತಿ ಈ ವರ್ಷ ಉಂಟಾಗಿದ್ದು, ಸಕಾಲದಲ್ಲಿ ಮಳೆಯಾಗದೇ ಕಾಫಿ ಫಸಲು ಕುಸಿತವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next