Advertisement

ಇನ್ನೂ ದುರಸ್ತಿಯಾಗದ ರಸ್ತೆ, ಕಿರು ಸೇತುವೆ

11:45 AM Jun 16, 2019 | Naveen |

ರಮೇಶ್‌ ಕರುವಾನೆ
ಶೃಂಗೇರಿ:
ತಾಲೂಕಿನಲ್ಲಿ ಕಳೆದ ಸಾಲಿನಲ್ಲಿ ಮುಂಗಾರು ಮಳೆ ದಾಖಲೆ ಪ್ರಮಾಣದಲ್ಲಿ ಸುರಿದಿದ್ದರಿಂದ ತುಂಗಾ ನದಿಯಲ್ಲಿ ಹತ್ತಕ್ಕೂ ಹೆಚ್ಚು ಬಾರಿ ಪ್ರವಾಹ ಉಂಟಾಗಿತ್ತು. ಕಡಿಮೆ ಅವಧಿಯಲ್ಲಿ ಹೆಚ್ಚು ಮಳೆಯಾದ ಕಾರಣ ಭೂಕುಸಿತ, ಮನೆ ಹಾನಿ, ಜೀವ ಹಾನಿ, ರಸ್ತೆ ಕೊರೆತ, ಬೆಳೆ ನಾಶ ಮುಂತಾದ ಘಟನೆಗಳು ಸಂಭವಿಸಿದ್ದವು. ಆದರೆ, ಈ ಬಾರಿ ತಿಂಗಳು ಕಳೆದರೂ ಸಮರ್ಪಕವಾಗಿ ಮಳೆಯಾಗದ ಕಾರಣ ರೈತರು, ಸಾರ್ವಜನಿಕರು ಕಂಗಾಲಾಗಿದ್ದಾರೆ.

Advertisement

ಕಳೆದ ಬಾರಿಯ ಮಳೆಗಾಲದಲ್ಲಿ ವರುಣನ ಅಬ್ಬರಿಂದಾಗಿ ತಾಲೂಕಿನ ಹಲವೆಡೆ ರಸ್ತೆ, ಕಿರು ಸೇತುವೆ ಕೊಚ್ಚಿಕೊಂಡು ಹೋಗಿದ್ದವು. ಆ ಪೈಕಿ ಕೆಲ ರಸ್ತೆಗಳು ದುರಸ್ತಿಯಾಗಿದ್ದರೆ, ಇನ್ನೂ ಕೆಲವು ರಸ್ತೆಗಳು ಹಾಗೂ ಕಿರು ಸೇತುವೆಗಳು ದುರಸ್ತಿಯಾಗದೇ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ.

ಆರ್ಥಿಕ ನಷ್ಟ, ಸಂಕಷ್ಟ: ತಾಲೂಕಿನ ಪ್ರಮುಖವಾಣಿಜ್ಯ ಬೆಳೆಯಾದ ಅಡಕೆ, ಕಾಫಿ, ಕಾಳುಮೆಣಸು ಕಳೆದ ಸಾಲಿನಲ್ಲಿ ಸಂಭವಿಸಿದ ಅತಿವೃಷ್ಠಿಯಿಂದಾಗಿ ಸಾಕಷ್ಟು ಹಾನಿ ಸಂಭ ವಿಸಿತ್ತು. ಅಡಕೆ ಮರಗಳು ಕೊಳೆ ರೋಗಕ್ಕೆ ತುತ್ತಾಗಿ ಬೆಳೆಗಾರರು ಸಾಕಷ್ಟು ನಷ್ಟ ಅನುಭವಿಸಿದ್ದರು. ತೋಟಗಾರಿಕಾ ಇಲಾಖೆ ಸಮೀಕ್ಷೆ ಪ್ರಕಾರ, ಶೇ.72 ರಿಂದ 80ರಷ್ಟು ಅಡಕೆ ಬೆಳೆ ಕೊಳೆ ರೋಗಕ್ಕೆ ತುತ್ತಾಗಿತ್ತು. ಕಾಳು ಮೆಣಸು ರೋಗಕ್ಕೆ ತುತ್ತಾಗಿ ಬೆಳೆ ಕುಸಿತವಾಗಿತ್ತು. ಕಾಫಿ ಫಸಲು ಕೊಳೆ ರೋಗದಿಂದ ತೀವ್ರ ಕುಸಿತವಾಗಿದ್ದು, ಆರ್ಥಿಕವಾಗಿ ರೈತರು ನಷ್ಟ ಅನುಭವಿಸುವಂತಾಗಿತ್ತು.

ಇನ್ನೂ ಬಾರದ ಬೆಳೆ ವಿಮೆ ಹಣ: ಅತಿವೃಷ್ಠಿಯಿಂದ ಹಾನಿಗೊಳಗಾದ ರೈತರಿಗೆ ಪರಿಹಾರ ನೀಡಲು ಸರಕಾರ ಅರ್ಜಿ ಪಡೆದುಕೊಂಡಿದ್ದರೂ, ಪರಿಹಾರ ವಿತರಣೆಯಲ್ಲಿ ತೀವ್ರ ವಿಳಂಬವಾಗುತ್ತಿದೆ. ಬಹುತೇಕ ರೈತರು ಬೆಳೆಯನ್ನು ಕಳೆದುಕೊಂಡು ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಸರಕಾರದ ಬೆಳೆ ವಿಮೆ ಜಾರಿಗೊಂಡಿದ್ದರೂ ವಾರ್ಷಿಕ ಬೆಳೆಯಾದ ಅಡಕೆ, ಕಾಳು ಮೆಣಸಿಗೆ ಕಳೆದ ಸಾಲಿನ ವಿಮಾ ಮೊತ್ತ ಇನ್ನೂ ಬಂದಿಲ್ಲ. ಆದರೆ, ಪ್ರಸಕ್ತ ಸಾಲಿನ ವಿಮಾ ಕಂತು ಕಟ್ಟಲು ಮತ್ತೆ ಆದೇಶ ಬಂದಿದ್ದು, ಇದು ರೈತರಿಗೆ ನುಂಗಲಾರದ ತುತ್ತಾಗಿದೆ.

ಜಮೀನು, ರಸ್ತೆ, ಕಿರು ಸೇತುವೆಗೆ ಹಾನಿ: ತಾಲೂಕಿನಾದ್ಯಂತ ಅತಿಯಾದ ಮಳೆಗೆ ಗ್ರಾಮೀಣ ರಸ್ತೆ, ಜಮೀನು ಹಾಗೂ ಕಿರು ಸೇತುವೆಗೆ ಹಾನಿ ಸಂಭವಿಸಿದೆ. ಇದಕ್ಕಾಗಿ ಭಾರೀ ಮೊತ್ತದ ಅನುದಾನ ಅಗತ್ಯವಿದ್ದು, ಬಹುತೇಕ ಕಾಮಗಾರಿ ಇನ್ನೂ ಆಗಬೇಕಿದೆ. ಮರ್ಕಲ್ ಗ್ರಾಪಂ ವ್ಯಾಪ್ತಿಯ ಸಿರಿಮನೆ ರಸ್ತೆ, ಮೆಣಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾಲಂದೂರು ರಸ್ತೆ, ಅಡ್ಡಗದ್ದೆ ಗ್ರಾಪಂನ ಹೆಬ್ಬಿಗೆ ಮಡಹು ರಸ್ತೆ, ನೆಮ್ಮಾರ್‌ ಗ್ರಾಪಂನ ವಳಲೆ ಮಾವಿನಕಾಡು ರಸ್ತೆ ಸೇರಿದಂತೆ ಬಹುತೇಕ ರಸ್ತೆಗಳು ಹಾಳಾಗಿದ್ದರಿಂದ ಸಂಚಾರಕ್ಕೆ ಇನ್ನಿಲ್ಲದ ತೊಂದರೆಯಾಗಿದೆ.

Advertisement

ಜಮೀನು ಪಕ್ಕದ ಹಳ್ಳಗಳು ಉಕ್ಕಿ ಹರಿದ ಪರಿಣಾಮ ಭತ್ತದ ಗದ್ದೆಗಳು ಮಣ್ಣಿನಿಂದ ಆವೃತವಾಗಿ ಸಾಗುವಳಿ ಮಾಡಲಾರದಷ್ಟು ಹಾನಿ ಸಂಭವಿಸಿತ್ತು. ತಾಲೂಕಿನ ಹಂಚಿನಕೊಡಿಗೆ ಕಿರು ಸೇತುವೆ ಸಂಪೂರ್ಣ ಹಾನಿಯಾಗಿದ್ದು, ಮಳೆ ಕಡಿಮೆಯಾದ ನಂತರ ಗ್ರಾಮಸ್ಥರು ತಾತ್ಕಾಲಿಕವಾಗಿ ಮಣ್ಣು ತುಂಬಿ ಸೇತುವೆ ದುರಸ್ತಿ ಮಾಡಿಕೊಂಡಿದ್ದರು. ನಂತರ ಸೇತುವೆ ದುರಸ್ತಿಯಾಗುವ ನಿರೀಕ್ಷೆ ಹುಸಿಯಾಗಿದ್ದು, ಇದೀಗ ಮಳೆ ಆರಂಭವಾದ ನಂತರ ಸೇತುವೆ ಹಾನಿಯಾದರೆ ಸಂಪರ್ಕ ಹೇಗೆ ಎಂಬ ಚಿಂತೆ ಗ್ರಾಮಸ್ಥರನ್ನು ಕಾಡುತ್ತಿದೆ. ಕಿಕ್ರೆ ಹಾಗೂ ಎತ್ತನಟ್ಟಿ ಬಳಿಯ ಕಿರು ಸೇತುವೆಗೂ ಹಾನಿ ಸಂಭವಿಸಿದ್ದು, ಇದರ ದುರಸ್ತಿಯೂ ನಡೆದಿಲ್ಲ.

ಸರಕಾರದಿಂದ ಪರಿಹಾರವಿಲ್ಲ: ತಾಲೂಕಿನಾದ್ಯಂತ ಸಾಕಷ್ಟು ಮನೆಗಳಿಗೆ ಹಾನಿ ಸಂಭವಿಸಿದ್ದು, ಕೆಲ ಮನೆಗಳು ವಾಸಕ್ಕೆ ಯೋಗ್ಯವಾಗದಷ್ಟು ಹಾನಿಗೊಂಡಿದ್ದವು. ಶಾಸಕರು, ಕಂದಾಯ ಮತ್ತಿತರ ಇಲಾಖಾ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದರೂ ಸಹ ತಮಗೆ ಪರಿಹಾರವಾಗಿ ಬಿಡಿಗಾಸು ಕೂಡ ಬಂದಿಲ್ಲ ಎಂದು ಧರೆಕೊಪ್ಪ ಗ್ರಾಪಂನ ಕೆಸರಕೊಡಿಗೆ ಚಂದ್ರಪ್ಪ ನಾಯ್ಕ, ಗಂಡಘಟ್ಟ ಗ್ರಾಮದ ವಡಗರೆ ಮನೆ ಲಕ್ಷಿ ್ಮೕನಾರಾಯಣ, ತಾಳಕೋಡು ರತ್ನಾಕರ ಮುಂತಾದ ಸಂತ್ರಸ್ತರು ದೂರಿದ್ದಾರೆ.

ಕಳೆದ ಸಾಲಿನಲ್ಲಿ ಸಂಭವಿಸಿದ ಅತಿವೃಷ್ಠಿಯಿಂದ ಬೆಳೆ ಕಳೆದುಕೊಂಡಿರುವ ನಾವು ಸರಕಾರಕ್ಕೆ ಪರಿಹಾರ ಮತ್ತು ಬೆಳೆ ವಿಮೆ ಮೊತ್ತ ಕಟ್ಟಿದ್ದೆವು. ಆದರೆ ಇದುವರೆಗೂ ಸರಕಾರದಿಂದ ಪರಿಹಾರವಾಗಲಿ, ಬೆಳೆ ವಿಮೆ ಪರಿಹಾರ ಬಂದಿಲ್ಲ. ಸರಕಾರ ತುರ್ತಾಗಿ ಪರಿಹಾರ ಹಣ ಬಿಡುಗಡೆ ಮಾಡಬೇಕು.
ಜಯರಾಂ, ರೈತರು, ಶೃಂಗೇರಿ

ತಾಲೂಕಿನ ಪ್ರಮುಖ ವಾಣಿಜ್ಯ ಬೆಳೆ ಅಡಕೆ ಶೇ.75ರಿಂದ 80ರಷ್ಟು ಬೆಳೆ ನಷ್ಟವಾಗಿದೆ ಎಂಬ ವರದಿಯನ್ನು ಸರಕಾರಕ್ಕೆ ಸಲ್ಲಿಸಲಾಗಿದೆ. ಇದರೊಂದಿಗೆ ಕಾಳು ಮೆಣಸು ಸಹ ರೋಗಕ್ಕೆ ತುತ್ತಾಗಿದೆ. ಕಂದಾಯ ಇಲಾಖೆ ಸರಕಾರದಿಂದ ರೈತರಿಗೆ ಬರುವ ಪರಿಹಾರವನ್ನು ನೇರವಾಗಿ ಬ್ಯಾಂಕ್‌ ಖಾತೆಗೆ ಜಮಾ ಮಾಡಲಿದೆ.
ಶ್ರೀಕೃಷ್ಣ, ಸಹಾಯಕ ನಿರ್ದೇಶಕರು
ತೋಟಗಾರಿಕೆ ಇಲಾಖೆ, ಶೃಂಗೇರಿ

Advertisement

Udayavani is now on Telegram. Click here to join our channel and stay updated with the latest news.

Next