ಶೃಂಗೇರಿ: ಚೈತ್ರದ ಚಿಗುರು ಮೂಡುವ ಕಾಲದಲ್ಲಿ ಹೊಸ ವಿಚಾರವನ್ನು ಕಲಿಯುವ ಸಂಕಲ್ಪವನ್ನು ನಾವು ಮಾಡಬೇಕು ಎಂದು ಕುದ್ರೆಗುಂಡಿ ಕರ್ಣಾಟಕ ಬ್ಯಾಂಕ್ ಪ್ರಬಂಧಕ ಆರವಿಂದ ಸೋಮಯಾಜಿ ಹೇಳಿದರು.
ಅವರು ವಿಕಾರಿನಾಮ ಸಂವತ್ಸರದ ಅಂಗವಾಗಿ ನಾದಸಿರಿ ಸುಗಮ ಸಂಗೀತ ವೃಂದದಿಂದ ಮೆಣಸೆ ಗ್ರಾಪಂನ ಕಿಕ್ರೆ ಗ್ರಾಮದ ಹೊಸ್ತಾರುಬಳ್ಳಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶನಿವಾರ ಏರ್ಪಡಿಸಿದ್ದ ನಾದವಸಂತ-08 ಜ್ಞಾನ, ಗಾನ, ಕುಂಚ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯುಗಾದಿ ಹೊಸ ವರ್ಷದ ಸಂಕೇತವಾಗಿದೆಯಾದರೂ, ನಾವು ಪ್ರತಿ ದಿನವೂ ಕೆಟ್ಟ ಯೋಚನೆಯನ್ನು ಅಳಿಸಿ, ಒಳ್ಳೆಯ ಯೋಚನೆಯನ್ನು ಮಾಡಬೇಕು. ಕಹಿ ಮತ್ತು ಸಿಹಿ ಎಲ್ಲರ ಜೀವನದಲ್ಲೂ ಬರುತ್ತದೆ. ಕಹಿ ಬಂದಾಗ ಕುಗ್ಗದೇ ಸಿಹಿ ಬಂದಾಗ ಹಿಗ್ಗದೇ ಜೀವನಯಾನವನ್ನು ಸುಸೂತ್ರವಾಗಿ ನಡೆಸಿಕೊಂಡು ಹೋಗಬೇಕು. ಸಂವತ್ಸರದ ಫಲವನ್ನು ಮನೆ ಮನೆಯಲ್ಲಿ ಪುರೋಹಿತರಿಂದ ಕೇಳುವ ಪದ್ದತಿ ಈಗ ದೂರವಾಗುತ್ತಿದ್ದು, ಗ್ರಾಮಸ್ಥರೆಲ್ಲಾ ಒಂದೆಡೆ ಸೇರಿ ಪಂಚಾಂಗ ಶ್ರವಣವನ್ನು ಒಟ್ಟಾಗಿ ಸಂಘಟಕರು ಆಯೋಜಿಸಿರುವುದು ಸೂಕ್ತವಾಗಿದೆ ಎಂದರು.
ವಿಕಾರಿನಾಮ ಸಂವತ್ಸರದ ಪಂಚಾಂಗ ಪಠಣ ಮಾಡಿ ಮಾತನಾಡಿದ ವೈಕುಂಠಪುರದ ವೇ|ಬ್ರ| ಮುರುಳಿ ಭಟ್, ಯುಗಾದಿಯಿಂದ ಯುಗಾದಿಗೆ ನಮ್ಮ ವರ್ಷಾಚರಣೆಯಾಗಿದೆ. ಇದರಲ್ಲಿಯ ವಿವಿಧ ರಾಶಿ ಫಲದ ಭವಿಷ್ಯವನ್ನು ಸಾಂಕೇತಿಕವಾಗಿ ನೀಡಲಾಗುತ್ತದೆ. ಯಾವುದೇ ಕರ್ತವ್ಯವವನ್ನು ಪ್ರಾಮಾಣಿಕವಾಗಿ ಮಾಡಬೇಕು. ದೇವರನ್ನು ಭಕ್ತಿಯಿಂದ ಪೂಜಿಸಬೇಕು. ಸಂವತ್ಸರವು ಎಲ್ಲರಿಗೂ ಒಳಿತು ಉಂಟು ಮಾಡಲಿ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸೂರ್ಳಿಯ ಮೃದಂಗವಾದಕ ಗಣೇಶಮೂರ್ತಿ ಮತ್ತು ಯುವ ಪ್ರತಿಭೆ ಸರಿಗಮಪ ಖ್ಯಾತಿಯ ಸ್ವಾನಿಯವರನ್ನು ಸನ್ಮಾನಿಸಲಾಯಿತು. ಸಂಪಗೋಡಿನ ಶ್ರೀನಿವಾಸ ಭಟ್ಟ ಅಧ್ಯಕ್ಷತೆ ವಹಿಸಿದ್ದರು. ಶ್ರೀ ದುರ್ಗಾಪರಮೇಶ್ವರಿ ಸೇವಾ ಸಮಿತಿ ಅಧ್ಯಕ್ಷ ತಿಮ್ಮಪ್ಪ ಗೌಡ ಉಪಸ್ಥಿತರಿದ್ದರು. ಕೊಪ್ಪದ
ಸಾಧ್ವಿನಿ, ಗಣೇಶ್ ಪ್ರಸಾದ್, ಸಣ್ಣಾನೆಗುಂದ ಗೋಪಾಲಕೃಷ್ಣ, ಕಿರಕೋಡು ನಿಷ್ಕಲ, ಜ್ಯೋತಿ ಉದಯ ಭಟ್ ಭಕ್ತಿಗೀತೆ, ಸುಗಮ ಸಂಗೀತ ಹಾಡಿದರು. ಕುಂಚ ಕಲಾವಿದರಾಗಿ ರಾಜಗೋಪಾಲ್ ಸಹಕರಿಸಿದರು.