Advertisement

ಮೀಸಲು ಬದಲು; ಆಕಾಂಕ್ಷಿಗಳಲ್ಲಿ ದಿಗಿಲು!

11:30 AM May 09, 2019 | Naveen |

ಶೃಂಗೇರಿ: ಲೋಕಸಭೆ ಚುನಾವಣೆ ಫಲಿತಾಂಶಕ್ಕೂ ಮುನ್ನವೇ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ರಾಜ್ಯ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿರುವುದು ರಾಜಕೀಯ ನಾಯಕರಿಗೆ ನುಂಗಲಾರದ ತುತ್ತಾಗಿದೆ.

Advertisement

ಮೇ.29ರಂದು ಇಲ್ಲಿನ ಪಟ್ಟಣ ಪಂಚಾಯತ್‌ ಚುನಾವಣೆ ನಡೆಯಲಿದ್ದು, ರಾಜಕೀಯ ಪಕ್ಷಗಳು ತಯಾರಿ ನಡೆಸಿವೆ. ಈ ಮಧ್ಯೆ ಪಪಂ ವ್ಯಾಪ್ತಿಯ 11 ವಾರ್ಡ್‌ಗಳ ಮೀಸಲಾತಿ ಸಂಪೂರ್ಣ ಅದಲು ಬದಲಾಗಿರುವುದು ಸ್ಪರ್ಧಾಕಾಂಕ್ಷಿಗಳಿಗೆ ತಲೆನೋವಾಗಿದೆ. ಕೆಲ ಮಾಜಿ ಸದಸ್ಯರಿಗೆ ತಮ್ಮ ವಾರ್ಡ್‌ ನಲ್ಲಿ ಮತ್ತೂಮ್ಮೆ ಸ್ಪರ್ಧಿಸಲಾಗದ ಸ್ಥಿತಿ ನಿರ್ಮಾಣಗೊಂಡಿದೆ.

ಈ ಹಿಂದೆ ನಿಗದಿಪಡಿಸಿದ್ದ ಮೀಸಲಾತಿ ಮತ್ತೂಮ್ಮೆ ಬದಲಾಗಿದ್ದು, ಇದೇ ವಿಷಯಕ್ಕೆ ಕಾಂಗ್ರೆಸ್‌-ಬಿಜೆಪಿ ಮುಖಂಡರು ಪರಸ್ಪರ ಒಬ್ಬರ ಕಡೆ ಮತ್ತೂಬ್ಬರು ಬೆಟ್ಟು ತೋರಿಸಲಾರಂಭಿಸಿದ್ದಾರೆ. ಅಲ್ಲದೆ, ವಾರ್ಡ್‌ಗಳ ಮೀಸಲು ಹಿಂದೆ ಮುಂದೆಯಾಗಿರುವುದರಿಂದಾಗಿ ಎರಡು ಮೂರು ಬಾರಿ ಪಪಂಗೆ ಆಯ್ಕೆಯಾಗಿರುವ ಸದಸ್ಯರಿಗೆ ಈ ಬಾರಿ ದಿಗಿಲು ಶುರುವಾಗಿದೆ. ಪಪಂ ಸದಸ್ಯತ್ವ ಕಾಯಂ ಎಂಬಂತಾಗಿದ್ದ ಕೆಲ ಸದಸ್ಯರಲ್ಲಿ ಈಗ ಆತಂಕ ಮನೆ ಮಾಡಿದೆ. ತಮ್ಮ ಕುರ್ಚಿ ತಪ್ಪಿ ಹೋದರೆ ನಮ್ಮ ಜೀವನವೇ ಮುಗಿಯತು ಎನ್ನುವಷ್ಟರ ಮಟ್ಟಿಗೆ ವ್ಯಾಮೋಹ ಬೆಳೆಸಿಕೊಂಡಿರುವ ಮಾಜಿ ಅಧ್ಯಕ್ಷರು, ಸದಸ್ಯರು ಅಕ್ಕಪಕ್ಕದ ವಾರ್ಡ್‌ಗೆ ವಲಸೆ ಹೋಗುವ ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ.

1ನೇ ವಾರ್ಡ್‌ಗೆ ಸಾಮಾನ್ಯ ಮೀಸಲಾತಿ ನಿಗದಿಯಾಗಿರುವುದರಿಂದ ಈ ವಾರ್ಡ್‌ನಲ್ಲಿ ಬಹುಸಂಖ್ಯಾತರಾಗಿರುವ ಮುಸ್ಲಿಂ ಸಮುದಾಯದವರ ನಡುವೆಯೇ ಸ್ಪರ್ಧೆ ಏರ್ಪಡುವುದು ಖಚಿತ ಎನ್ನಲಾಗುತ್ತಿದೆ. ಇಲ್ಲಿ ಮುಸ್ಲಿಂಯೇತರ ಸಮುದಾಯದವರನ್ನು ಕಾಂಗ್ರೆಸ್‌ ಕಣಕ್ಕಿಳಿಸುವ ಪ್ರಯತ್ನ ನಡೆಸಿದೆ ಎಂಬ ಮಾತು ಕೇಳಿ ಬರುತ್ತಿವೆ.

2ನೇ ವಾರ್ಡ್‌ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದು, ಹಾಲಿ ಜಿಪಂ ಸದಸ್ಯ ಬಿ. ಶಿವಶಂಕರ್‌ ಸಹೋದರನನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಸುವ ಪ್ರಯತ್ನ ನಡೆದಿದೆ. ಇನ್ನು 3ನೇ ವಾರ್ಡ್‌ನಲ್ಲಿ ಹಿಂದುಳಿದ ವರ್ಗ ‘ಎ’ ಮಹಿಳೆ, 5ನೇ ವಾರ್ಡ್‌ನಲ್ಲಿ ಹಿಂದುಳಿದ ವರ್ಗ ‘ಎ’, 6ನೇ ವಾರ್ಡ್‌ನಲ್ಲಿ ಹಿಂದುಳಿದ ವರ್ಗ ‘ಬಿ’ಗೆ ಮೀಸಲಾಗಿದ್ದು, ಇದರಿಂದಾಗಿ ಪ್ರಮುಖ ಪಕ್ಷಗಳೆಲ್ಲವು ಆ ಭಾಗದಲ್ಲಿ ಅಭ್ಯರ್ಥಿಗಳು ಸಿಗದಿದ್ದರೆ, ಬೇರೆ ಕಡೆಯಿಂದ ಯಾರಾದರೊಬ್ಬರನ್ನು ಕರೆ ತಂದು ಕಣಕ್ಕಿಳಿಸುವ ಸಾಧ್ಯತೆ ಹೆಚ್ಚಾಗಿದೆ.

Advertisement

4, 9 ಮತ್ತು 10ನೇ ವಾರ್ಡ್‌ಗಳಲ್ಲಿ ಸಾಮಾನ್ಯ ಮಹಿಳೆಗೆ ಮೀಸಲಾತಿ ನಿಗದಿಯಾಗಿದ್ದು, ಈ ವಾರ್ಡ್‌ಗಳಲ್ಲಿ ಬಿರುಸಿನ ಸ್ಪರ್ಧೆ ನಡೆಯುವ ಸಾಧ್ಯತೆ ಹೆಚ್ಚಾಗಿದೆ. 7ನೇ ಮತ್ತು 8ನೇ ವಾರ್ಡ್‌ಗಳಲ್ಲಿ ಸಾಮಾನ್ಯ ಮೀಸಲಾತಿ ನಿಗದಿಯಾಗಿದೆ. ಆದರೆ 8ನೇ ವಾರ್ಡ್‌ನ ಪರಿಸ್ಥಿತಿ ತೀರ ವಿಚಿತ್ರವಾಗಿದೆ. ಪಟ್ಟಣದ ಬೇರೆ ಬೇರೆ ಭಾಗದ ಯಾರೋ ಇಲ್ಲಿಗೆ ಬಂದು ಸ್ಪರ್ಧೆ ಮಾಡುತ್ತಾರೆ. ಈ ವಾರ್ಡ್‌ನ ಹಿತಕ್ಕೆ ಒಂದು ರೀತಿ ಕೊಡಲಿ ಪೆಟ್ಟು ಬಿದ್ದಂತಾಗಲಿದೆ.

7ನೇ ವಾರ್ಡ್‌ನಲ್ಲಿ ಮಾತ್ರ ಸ್ಪರ್ಧಿಸುವ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ. ಈ ವಾರ್ಡ್‌ನಲ್ಲಿ ತುರುಸಿನ ಸ್ಪರ್ಧೆ ಏರ್ಪಡುವ ಸಾಧ್ಯತೆ ಇದೆ. ಇನ್ನು 11ನೇ ವಾರ್ಡ್‌ನ ಹ‌ನುಮಂತನಗರ ಕಳೆದ ಬಾರಿಯಂತೆ ಈ ಬಾರಿಯೂ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದೆ.

ಕಳೆದ ಬಾರಿ ಬಿಜೆಪಿ ಜಯಭೇರಿ: ಕಳೆದ ಬಾರಿ ಚುನಾವಣೆಯಲ್ಲಿ ಒಟ್ಟು 11 ವಾರ್ಡ್‌ಗಳಲ್ಲೂ ಬಿಜೆಪಿ ಗೆದ್ದು ಜಯಭೇರಿ ಬಾರಿಸಿತ್ತು. ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳಿಗೆ ಒಂದು ಸ್ಥಾನವೂ ದೊರೆತಿರಲಿಲ್ಲ. ಪಕ್ಷೇತರರು ಕೂಡ ಮೂಲೆಗುಂಪಾಗಿದ್ದರು.

ಎಲ್ಲಾ 11 ವಾರ್ಡ್‌ಗಳಲ್ಲಿ ಕಳೆದ ಬಾರಿ ಕಾಂಗ್ರೆಸ್‌ ಮತ್ತು ಬಿಜೆಪಿ ತಮ್ಮ ಉಮೇದುವಾರರನ್ನು ಕಣಕ್ಕಿಳಿಸಿದರೆ, ಜೆಡಿಎಸ್‌ 6 ವಾರ್ಡ್‌ಗಳಲ್ಲಿ ಮಾತ್ರ ಸ್ಪರ್ಧೆಗಿಳಿದಿತ್ತು. ಬಿಎಸ್‌ಆರ್‌ ಪಕ್ಷದಿಂದ ಒಬ್ಬರು, ಮೂವರು ಪಕ್ಷೇತರರು ಸ್ಪರ್ಧೆ ಮಾಡಿದ್ದರು. 1ನೇ ವಾರ್ಡ್‌ನಲ್ಲಿ ನಾಲ್ವರು ಅಭ್ಯರ್ಥಿಗಳು ಕಣದಲ್ಲಿದ್ದು, ಚತುಷ್ಕೋನ ಸ್ಪರ್ಧೆ ಏರ್ಪಟ್ಟಿದ್ದು ಹೊರತುಪಡಿಸಿದರೆ ಕೆಲವೆಡೆ ತ್ರಿಕೋನ, ಇನ್ನು ಕೆಲವೆಡೆ ನೇರ ಸ್ಪರ್ಧೆ ಏರ್ಪಟ್ಟಿತ್ತು. ಒಟ್ಟು 31 ಸ್ಪರ್ಧಿಗಳು ಚುನಾವಣಾ ಕಣದಲ್ಲಿದ್ದರು. ಬಿಜೆಪಿಯ ಎಲ್ಲ 11 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. ಕಳೆದ ಐದು ವರ್ಷ ಬಿಜೆಪಿ ನಿರಾತಂಕವಾಗಿ ಅಧಿಕಾರ ನಡೆಸಿದೆ. ಈ ಬಾರಿ ಕಾಂಗ್ರೆಸ್‌ ಪಕ್ಷದ ಶಾಸಕರು ಇಲ್ಲಿ ಪ್ರತಿನಿಧಿಸಿರುವುದರಿಂದ ಗೆಲುವು ಯಾರ ಪಾಲಾಗಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

ರಮೇಶ ಕರುವಾನೆ

Advertisement

Udayavani is now on Telegram. Click here to join our channel and stay updated with the latest news.

Next