Advertisement
ಪಹಣಿಯಲ್ಲಿ ಬೆಳೆ ಮಾಹಿತಿ ದಾಖಲಿಸುವ ಸಮಸ್ಯೆ ನಿನ್ನೆ-ಮೊನ್ನೆಯದಲ್ಲ, ಕಳೆದ 2 ರಿಂದ 3 ವರ್ಷಗಳಿಂದಲೂ ಇದೆ. ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ರೈತರು ಸಹಕಾರ ಸಂಸ್ಥೆ, ವಾಣಿಜ್ಯ ಬ್ಯಾಂಕ್‌ಗಳಲ್ಲಿ ಬೆಳೆ ಸಾಲ ಪಡೆಯುವ ಉದ್ದೇಶಕ್ಕಾಗಿ ಜಮೀನಿನ ಪಹಣಿ ಮತ್ತು ಪಹಣಿಯಲ್ಲಿ ಬೆಳೆ ಮಾಹಿತಿ ಕಡ್ಡಾಯವಾಗಿದೆ. ಆದರೆ ಪಹಣಿಗಾಗಿ ರೈತರು ತಾಲೂಕು ಕಚೇರಿಯಲ್ಲಿ ಸಾಲುಗಟ್ಟಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ, ಪಹಣಿಯ ಬೆಳೆ ಕಾಲಂನಲ್ಲಿ ಬೆಳೆ ಬಗ್ಗೆ ಮಾಹಿತಿ ಇಲ್ಲದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಬಯಲುಸೀಮೆ ಪ್ರದೇಶದಲ್ಲಿ ಬೆಳೆಯುವ ಭತ್ತ, ಶುಂಠಿ ಇವುಗಳೆಲ್ಲ ವಾರ್ಷಿಕ ಬೆಳೆಗಳು. ಪ್ರತಿವರ್ಷವೂ ಪಹಣಿಯಲ್ಲಿ ಬದಲಾವಣೆಯಾಗುವುದು ಸಹಜ. ಆದರೆ ಮಲೆನಾಡಿನ ಪ್ರಮುಖ ಬೆಳೆಯಾದ ಅಡಕೆ ತೋಟ, ತೆಂಗು ಇತ್ಯಾದಿ ಬೆಳೆಗಳು ಪಹಣಿಯ ಬೆಳೆಯ ಕಾಲಂ ಇರಬೇಕು. ಆದರೆ ಬೆಳೆ ಕಾಲಂನಲ್ಲಿ ಶೂನ್ಯವಾಗಿ ಬರೀ ಬಿಳಿ ಹಾಳೆ ಬರುತ್ತದೆ. ಬೆಳೆ ಮಾಹಿತಿ ಇಲ್ಲದ ಪಹಣಿಯನ್ನು ಯಾವುದಾದರೂ ಸಹಕಾರ ಸಂಘ ಅಥವಾ ವಾಣಿಜ್ಯ ಬ್ಯಾಂಕ್‌ಗಳಿಗೆ ನೀಡಿದರೆ ಕವಡೆ ಕಾಸಿನ ಬೆಲೆ ಇಲ್ಲದಾಗಿದೆ. ಬೆಳೆಯಿಲ್ಲದ ಪಹಣಿ ಮೇಲೆ ಸಾಲ ನೀಡಲಾಗದು ಎಂಬ ಸಿದ್ಧ ಉತ್ತರ ಬ್ಯಾಂಕ್‌ನಿಂದ ಬರುತ್ತದೆ. ಕಡ್ಡಾಯ ಬೆಳೆಯ ದೃಢೀಕರಣಕ್ಕಾಗಿ ಮತ್ತೆ ಗ್ರಾಮ ಲೆಕ್ಕಿಗರನ್ನು ಹುಡುಕಿಕೊಂಡು ಹೊರಡಬೇಕಿದೆ.
•ಯಡದಳ್ಳಿ ಪ್ರಕಾಶ್ ಹೆಗ್ಡೆ, ಮಸಿಗೆ ಸುರೇಶ್, ಹಂಚಲಿ ಕೃಷ್ಣಮೂರ್ತಿರಾವ್, ಬೆಳಂದೂರು ದೇವೆಂದ್ರಗೌಡರು.