Advertisement

ಶೃಂಗೇರಿಯಲ್ಲಿ ಲಕ್ಷ ದೀಪೋತ್ಸವ ಸಂಭ್ರಮ

12:58 PM Nov 14, 2019 | Naveen |

ಶೃಂಗೇರಿ: ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದಲ್ಲಿ ಮಂಗಳವಾರ ಕಾರ್ತಿಕ ಲಕ್ಷದೀಪೋತ್ಸವ ಸಂಭ್ರಮದಿಂದ ನೆರವೇರಿತು. ಕಿರಿಯ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಶ್ರೀಮಠದಿಂದ ಮುಖ್ಯ ಬೀದಿಯಲ್ಲಿ ಕಾಲ್ನಡಿಗೆಯಲ್ಲೇ ಬೆಟ್ಟಕ್ಕೆ ತೆರಳಿ ಶ್ರೀ ಮಲಹಾನಿಕರೇಶ್ವರ ದೇವಾಲಯದಲ್ಲಿ ಮೊದಲ ದೀಪ ಬೆಳಗುವ ಮೂಲಕ ಲಕ್ಷದೀಪೋತ್ಸವಕ್ಕೆ ಚಾಲನೆ ನೀಡಿದರು.

Advertisement

ಲಕ್ಷ ದೀಪೋತ್ಸವ ಹಿನ್ನೆಲೆಯಲ್ಲಿ ಶ್ರೀಮಠದಿಂದ ಬೆಟ್ಟದವರೆಗಿನ ಎಲ್ಲೆಡೆ ದೀಪ ಬೆಳಗಿದವು. ಶ್ರೀ ಮಠದ ಆವರಣದಲ್ಲಿ ಹರಿಹರಪುರದ ಸುವರ್ಣ ಕೇಶವ ಹಾಕಿದ್ದ ಬೃಹತ್‌ ರಂಗೋಲಿ ಆಕರ್ಷಕವಾಗಿತ್ತು. ರಸ್ತೆಯುದ್ದಗಲಕ್ಕೂ ರಂಗೋಲಿ ಚಿತ್ತಾರಗಳು ಕಣ್ಮನ ಸೆಳೆದವು. ಮಲ್ಲಪ್ಪ ಬೀದಿಯನ್ನು ವಾಹನ ಚಾಲಕರ ಸಂಘದವರು ತಳಿರು ತೋರಣಗಳಿಂದ ಅಲಂಕರಿಸಿದ್ದರು.

ತಾಲೂಕಿನ ಶಾಲಾ-ಕಾಲೇಜು ವಿದ್ಯಾಥಿಗಳು ಹಾಗೂ ಭಕ್ತಾದಿಗಳು ಶ್ರೀಮಠ ಹಾಗೂ ಮುಖ್ಯ ಬೀದಿಯಲ್ಲಿ ಹಣತೆಯಿಟ್ಟು ದೀಪ ಹಚ್ಚಿ ದೀಪೋತ್ಸವ ಸಂಭ್ರಮಕ್ಕೆ ಸಾಕ್ಷಿಯಾದರು. ಶ್ರೀಮಠದಲ್ಲಿ ಶ್ರೀ ಶಾರದಾಂಬ ಬಂಗಾರ ರಥೋತ್ಸವ, ಮಹಾ ಮಂಗಳಾರತಿ, ಅಷ್ಟಾವಧಾನ ಸೇವೆಗಳ ಬಳಿಕ ಶ್ರೀ ಶಾರದಾಂಬೆ, ಶ್ರೀ ಭವಾನಿಯಮ್ಮ, ಶ್ರೀಮಲಹಾನಿಕರೇಶ್ವರ ಸ್ವಾಮಿ, ಶ್ರೀ ವಿದ್ಯಾಶಂಕರ, ಶ್ರೀ ಶಂಕರಾಚಾರ್ಯರು ಪಂಚದೇವರಿಗೆ ತುಂಗಾ ನದಿಯಲ್ಲಿ ನಡೆದ ತೆಪ್ಪೋತ್ಸವದಲ್ಲಿ ಶ್ರೀಮಠದ ಪುರೋಹಿತರು ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು.

ಋತ್ವಿಜರು ತುಂಗೆಗೆ ರಥಾರತಿ, ನಾಗಾರತಿ ಬೆಳಗಿದರು. ಸುಮಂಗಲಿಯರು ತುಂಗೆಗೆ ಸಹಸ್ರ-ಸಹಸ್ರ ದೀಪಗಳ ಬಾಗಿನ ಸಮರ್ಪಿಸಿದರು. ಸಾವಿರಾರು ಭಕ್ತರು ತೆಪ್ಪೋತ್ಸವದಲ್ಲಿ ಭಾಗಿಯಾಗಿದ್ದರು. ಶ್ರೀ ಸ್ತಂಭ ಗಣಪತಿ, ಶ್ರೀ ಮಲಹಾನಿಕರೇಶ್ವರ ಸ್ವಾಮಿ, ಶ್ರೀ ಭವಾನಿ ಅಮ್ಮನವರ ಸನ್ನಿ ಧಿಯಲ್ಲಿ ರಂಗಪೂಜೆ, ಮಹಾಮಂಗಳಾರತಿ, ಅಷ್ಟಾವಧಾನ ಸೇವೆ ನೆರವೇರಿಸಲಾಯಿತು. ನಂತರ ಪರಕಾಳಿಯನ್ನು ದಹಿಸಲಾಯಿತು. ಶ್ರೀಮಠದ ಆಡಳಿತಾಧಿಕಾರಿ ಗೌರಿಶಂಕರ್‌, ಶ್ರೀ ಮಠದ ಅಧಿ ಕಾರಿಗಳಾದ ದಕ್ಷಿಣಾಮೂರ್ತಿ, ಶಿವಶಂಕರಭಟ್‌, ರಾಮಕೃಷ್ಣಯ್ಯ, ಶ್ರೀಪಾದರಾವ್‌, ಗೋಪಾಲಕೃಷ್ಣ, ಅರ್ಚಕರಾದ ಕೃಷ್ಣಭಟ್‌, ಶಿವಕುಮಾರ ಶರ್ಮ, ಸೀತಾರಾಮ ಶರ್ಮ, ನಾಗರಾಜ ಭಟ್‌ ಹಾಜರಿದ್ದರು.

ಶ್ರೀಮಠದ ಆವರಣದಲ್ಲಿರುವ ಶ್ರೀ ಚಂದ್ರಶೇಖರ ಭಾರತೀ ಸಭಾಂಗಣದಲ್ಲಿ ಬೆಂಗಳೂರಿನ ಚಿತ್ಕಲ ನೃತ್ಯ ಶಾಲೆಯ ಪಿ.ಪ್ರವೀಣ್‌ ಕುಮಾರ್‌ ಮತ್ತು ತಂಡದವರಿಂದ ಮಹಾಮಾಯ ನೃತ್ಯರೂಪಕ, ಬೆಂಗಳೂರಿನ ಕಲಾನಿ  ನೃತ್ಯ ಶಾಲೆಯ ವೀಣಾನಿ, ಅದಿತಿ ಶ್ರೀನಿ  ಗೋಪಾಲ್‌ ಮತ್ತು ಸುಕೃತಿ ಶ್ರೀನಿ ಗೋಪಾಲ್‌ರಿಂದ ನೃತ್ಯ ಕಾರ್ಯಕ್ರಮ ನಡೆಯಿತು.

Advertisement

ಶ್ರೀ ಭಾರತೀ ತೀರ್ಥ ಕಲ್ಚರಲ್‌ ಟ್ರಸ್ಟ್‌ ನಿರ್ಮಾಣದ ಜೇಸಿಸ್‌ ಶಾಲಾ ಮಕ್ಕಳು ಪ್ರಸ್ತುತಪಡಿಸಿದ ಕಲ್ಕಟ್ಟೆ ಎಚ್‌. ಎಂ.ನಾಗರಾಜರಾವ್‌ ರಚಿಸಿದ ರಂಗ ನಿರ್ದೇಶಕ ರಮೇಶ್‌ ಬೇಗಾರ್‌ ಅವರ ನಿರ್ದೇಶನದಲ್ಲಿ ಶೃಂಗೇರಿ ಸಂಕಥನ ಪುರಾಣ ಇತಿಹಾಸದ ಸಮ್ಮಿಲನ ನಾಟಕ ನೆರವೇರಿತು.

Advertisement

Udayavani is now on Telegram. Click here to join our channel and stay updated with the latest news.

Next