ರಮೇಶ್ ಕರುವಾನೆ
ಶೃಂಗೇರಿ: ತಾಲೂಕಿನ ಮಸಿಗೆ ಗ್ರಾಮದ ಕಿರುಕೋಡು ಬಳಿ ಸದ್ದಿಲ್ಲದೇ ಕಳೆದ 2 ವರ್ಷದಿಂದ ಹಕ್ಕಿಗಳ ಕಲರವ ಕೇಳಿ ಬರುತ್ತಿದ್ದರೂ, ಪಕ್ಷಿಗಳ ವಾಸಸ್ಥಾನವಾಗಿರುವ ಕೆರೆ ಮಾತ್ರ ಅಭಿವೃದ್ಧಿ ಕಂಡಿಲ್ಲ. ಬದಲಾಗಿ, ಕೆರೆಯ ನೀರಿನಲ್ಲಿ ಪಾಚಿ ಕಟ್ಟಿ, ಗಿಡಗಂಟಿಗಳಿಂದ ತುಂಬಿಕೊಂಡಿರುವುದು ಕಂಡುಬರುತ್ತಿದೆ.
ಮೆಣಸೆ ಗ್ರಾಪಂ ವ್ಯಾಪ್ತಿಯ ಕಿರುಕೋಡು ಬಳಿಯ ಸರ್ವೆ ನಂ. 119ರ ಸುಮಾರು 4 ಎಕರೆ ವಿಸ್ತೀರ್ಣದ ದೊಡ್ಡ ಕೆರೆ ಇದೀಗ ಪಕ್ಷಿಗಳಿಗೆ ಆಶ್ರಯ ತಾಣವಾಗಿದೆ. ಈ ಕೆರೆಯ ಬಳಿ ಸುಮಾರು 250-300ಕ್ಕೂ ಹೆಚ್ಚು ಹ್ಕಕಿಗಳು ದೂರದೂರದ ಜಾಗಗಳಿಂದ ವಲಸೆ ಬರುತ್ತಿದ್ದು, ಒಂದಷ್ಟು ದಿನ ಇಲ್ಲಿಯೇ ವಾಸ್ತವ್ಯ ಹೂಡಿ ಮತ್ತೆ ತಮ್ಮ ಮೂಲ ಸ್ಥಳಕ್ಕೆ ಮರಳುತ್ತಿರುವುದು ಕಂಡು ಬರುತ್ತಿದೆ. ಮಳೆಗಾಲದ ಸಮಯದಲ್ಲಿ ಕೆಲವು ಪಕ್ಷಿಗಳು ವಂಶಾಭಿವೃದ್ಧಿ ಮಾಡಿಕೊಳ್ಳಲೆಂದೇ ಇಲ್ಲಿಗೆ ಬರುತ್ತವೆ. ಕಳೆದ ವರ್ಷಕ್ಕಿಂತ ಈ ವರ್ಷ ನಾನಾ ರೀತಿಯ ಪಕ್ಷಿಗಳು ಹಳದಿ ಮತ್ತು ಕಪ್ಪು ಕಾಲಿನ ಬೆಳ್ಳಕ್ಕಿಗಳು, ಕಪ್ಪು ಕೊಕ್ಕಿನ ಬೆಳ್ಳಕ್ಕಿಗಳು, ನೀರು ಕಾಗೆಗಳು ಹೆಚ್ಚಾಗಿ ಬರುತ್ತಿವೆ ಎನ್ನುತ್ತಾರೆ ಸ್ಥಳೀಯರು.
ಶೃಂಗೇರಿ-ಕೊಪ್ಪ ಮಾರ್ಗ ಮಧ್ಯೆ ಇರುವ ಉಳುವೆ ಪಕ್ಷಿಧಾಮ ಇದೀಗ ನಿರ್ವಹಣೆ ಕೊರತೆಯಿಂದ ಇತಿಹಾಸ ಪುಟಕ್ಕೆ ಸೇರಿದ್ದು, ಅಲ್ಲಿನ ಕೆರೆ ನೀರು ಕಲುಷಿತಗೊಂಡಿದೆ. ಹಕ್ಕಿಗಳಿಗೆ ಇಲ್ಲಿ ವಾಸ್ತವ್ಯ ಹೂಡಲು ಅನುಕೂಲವಾಗದ ಕಾರಣ ಕಿರುಕೋಡಿನ ಕೆರೆಗೆ ಆಶ್ರಯ ಪಡೆಯಲು ಬರುತ್ತಿವೆ ಎನ್ನಲಾಗಿದೆ. ಸಂಜೆ ವೇಳೆ ಇಲ್ಲಿ ಪಕ್ಷಿಗಳದ್ದೇ ರಾಜ್ಯ. ಹಕ್ಕಿಗಳ ಚಿಲಿ-ಪಿಲಿ ಇಂಚರ ಕೇಳಿ ಬರುತ್ತದೆ. ಉಳುವೆ ಪಕ್ಷಿಧಾಮದ ಕೆರೆತರಹ ಇಲ್ಲಿನ ಕಿರುಕೋಡು ಕೆರೆಯ ನೀರು ಕಲುಷಿತಗೊಳ್ಳದೆ ಪಕ್ಷಿಗಳ ವಾಸಸ್ಥಾನವಾಗಲಿ ಎಂಬುದು ಪಕ್ಷಿ ಪ್ರೀಯರ ಆಶಯವಾಗಿದೆ.
4 ಎಕರೆ ಜಾಗ ಹೊಂದಿರುವ ಈ ಕೆರೆಯ ನೀರು ಸ್ಥಳೀಯರಿಗೆ ಕುಡಿಯಲು, ಜಮೀನುಗಳ ಕೃಷಿಗೆ ಬಳಸಲಾಗುತ್ತದೆ. ಅರ್ಧದಷ್ಟು ಕೆರೆಯ ಜಾಗ ಈಗಾಗಲೇ ಒತ್ತ್ತುವರಿಯಾಗಿದೆ. ಇದ್ದ ಕೆರೆಯಲ್ಲಿ ಇದೀಗ ಅಂತರಗಂಗೆ, ಕಳೆ, ಗಿಡ-ಗಂಟಿಗಳು ತುಂಬಿಕೊಂಡು ಪಕ್ಷಿಗಳಿಗೆ ಅನಾನುಕೂಲವಾಗಿ ಪರಿಣಮಿಸಿದೆ. ಇಲ್ಲಿನ ಕೆರೆ ಅಭಿವೃದ್ಧಿ ಪಡಿಸಿ ಕೆರೆಗೆ ಒಂದು ಕಾಯಕಲ್ಪ ನೀಡಿದಲ್ಲಿ ಈ ಪ್ರದೇಶ ಸುಂದರ ಪಕ್ಷಿಧಾಮವಾಗುವಲ್ಲಿ ಸಂದೇಹವೇ ಇಲ್ಲ. ಸರ್ಕಾರ ತಜ್ಞರಿಂದ ಪರಿಶೀಲನೆ ನಡೆಸಿ ಪಕ್ಷಿಗಳ ವಾಸಕ್ಕೆ ಅನುಕೂಲ ಕಲ್ಪಿಸಬೇಕಾಗಿದೆ. ಅಲ್ಲದೇ, ಈಗಾಗಲೆ ಒತ್ತುವರಿಯಾದ ಕೆರೆಯ ಭೂಮಿಯನ್ನು ವಶಕ್ಕೆ ಪಡೆದು ಪ್ರಕೃತಿಯ ಅಂಗವೇ ಆಗಿರುವ ಪಕ್ಷಿಗಳಿಗೆ ಸಂತಾನೋತ್ಪತ್ತಿ ಮಾಡಲು ಅವಕಾಶ ಮಾಡಿಕೊಡಬೇಕಾಗಿದೆ. ಇಲ್ಲಿ ಪರಿಸರ ಪಕ್ಷಿಗಳಿಗೆ ಪೂರಕವಾಗಿದ್ದು, ಸಮೀಪದಲ್ಲೇ ಇರುವ ತುಂಗಾ ನದಿ ಹಾಗೂ ಸುತ್ತಲಿನ ಜಮೀನಿನಲ್ಲಿ ಹೇರಳವಾಗಿ ದೊರೆಯುವ ಆಹಾರ ಇವುಗಳ ವಾಸಕ್ಕೆ ಅನುಕೂಲಕರವಾಗಿದೆ. ಸರ್ಕಾರ ಈ ಬಗ್ಗೆ ಗಮನ ಹರಿಸಬೇಕೆಂಬುದು ಪಕ್ಷಿ ಪ್ರೇಮಿಗಳ ಒತ್ತಾಯವಾಗಿದೆ.