Advertisement

ಹದಗೆಟ್ಟ ರಸ್ತೆ ದುರಸ್ತಿ ಮಾಡಿಸಿ ಸಂಚಾರಕ್ಕೆ ಅನುಕೂಲ ಕಲ್ಪಿಸಿ

11:34 AM Jul 25, 2019 | Naveen |

ರಮೇಶ್‌ ಕರುವಾನೆ
ಶೃಂಗೇರಿ:
ಪ್ರತಿನಿತ್ಯ ನೂರಾರು ವಾಹನಗಳು ಸಂಚರಿಸುವ ತಾಲೂಕಿನ ಮರ್ಕಲ್ ಗ್ರಾಪಂ ವ್ಯಾಪ್ತಿಯ ಕಿಗ್ಗಾ ಸಿರಿಮನೆ ರಸ್ತೆ ಹಾಳಾಗಿರುವುದರಿಂದ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ.

Advertisement

ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕಿಗ್ಗಾ ಶ್ರೀ ಋಷ್ಯಶೃಂಗೇಶ್ವರ ಸ್ವಾಮಿ ದೇವಾಲಯಕ್ಕೆ ಪ್ರತಿದಿನ ನೂರಾರು ಜನ ಪ್ರವಾಸಿಗರು ಆಗಮಿಸುತ್ತಾರೆ. ಪ್ರವಾಸಿಗರು ದೇವಾಲಯದಲ್ಲಿ ದರ್ಶನ ಮಾಡಿದ ನಂತರ ಇಲ್ಲಿಂದ 8 ಕಿ.ಮೀ. ದೂರ‌ದಲ್ಲಿರುವ ಪ್ರಸಿದ್ಧ ಪ್ರೇಕ್ಷಣೀಯ ಸ್ಥಳವಾದ ಸಿರಿಮನೆ ಜಲಪಾತ ವೀಕ್ಷಿಸಲು ತೆರಳುತ್ತಾರೆ. ಆದರೆ, ಸಿರಿಮನೆ ಜಲಪಾತಕ್ಕೆ ತೆರಳುವುದು ಹರಸಾಹಸವೇ ಆಗಿದೆ. ತೀವ್ರ ಹದಗೆಟ್ಟಿರುವ ರಸ್ತೆಯುದ್ಧಕ್ಕೂ ಅಲ್ಲಲ್ಲಿ ಭಾರೀ ಗಾತ್ರದ ಹೊಂಡಗಳು ನಿರ್ಮಾಣವಾಗಿವೆ. ಡಾಂಬರು ಕಾಣದೆ ದಶಕಗಳೇ ಕಳೆದಿವೆ. ಕಲ್ಲು-ಮಣ್ಣು, ಜಲ್ಲಿ ಕಲ್ಲು ಮೇಲೆದ್ದಿರುವುದರಿಂದ ಸಂಚಾರಕ್ಕೆ ಇನ್ನಿಲ್ಲದ ಅಡಚಣೆಯಾಗಿದೆ.

ಇದೀಗ ಮಳೆಗಾಲದ ಸಮಯದಲ್ಲಿ ಮಳೆ ನೀರೆಲ್ಲ ರಸ್ತೆ ಮೇಲೆ ಹರಿಯುವುದರಿಂದ ದುರಸ್ತಿ ಕಾಣದ ಕಿರಿದಾದ ರಸ್ತೆಯಲ್ಲಿ ಪ್ರಯಾಣಿಕರು ಪ್ರಯಾಸಪಡಬೇಕಿದೆ.

ಈ ರಸ್ತೆ ಮರ್ಕಲ್ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಹತ್ತಾರು ಹಳ್ಳಿಗಳಿಗೆ ಕಲ್ಪಿಸುವ ರಸ್ತೆಯಾಗಿದೆ. ಗ್ರಾಮಸ್ಥರು ಪಟ್ಟಣ, ಆಸ್ಪತ್ರೆ ಸೇರಿದಂತೆ ಎಲ್ಲಾ ಕಾರ್ಯಗಳಿಗೆ ವಾಹನಗಳಲ್ಲಿ ಇದೇ ರಸ್ತೆಯಲ್ಲಿ ಸಂಚರಿಸಬೇಕು. ಈ ರಸ್ತೆಯಲ್ಲಿ ಬಸ್‌ ಸಂಚಾರ ವ್ಯವಸ್ಥೆ ಇಲ್ಲ. ಖಾಸಗಿ ವಾಹನಗಳನ್ನು ಬಿಟ್ಟರೆ ಶಾಲಾ-ಕಾಲೇಜು ಹಾಗೂ ಆಸ್ಪತ್ರೆಗೆ ನಡೆದುಕೊಂಡೇ ಹೋಗಬೇಕಾಗಿದೆ. ಬಡತನ ರೇಖೆಗಿಂತ ಕೆಳಗಿರುವವರು ಅಗತ್ಯ ಕೆಲಸಗಳಿಗೆ ಬರಬೇಕಾದರೆ ಹಾಗೂ ರೋಗಿಗಳು ತುರ್ತು ಚಿಕಿತ್ಸೆಗೆ ತೆರಳಲು ಹರಸಾಹಸ ಪಡಬೇಕಾಗಿದೆ. ಈ ಹಿಂದೆ ಪ್ರಧಾನಮಂತ್ರಿ ಗ್ರಾಮ ಸಡಕ್‌ ಯೋಜನೆಯಡಿ ರಸ್ತೆಯ ಅಭಿವೃದ್ಧಿಗೊಂಡಿತ್ತು. ಆದರೆ, ಇದೀಗ ಈ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಇದೇ ಮಾರ್ಗದಲ್ಲಿ ಪ್ರತಿನಿತ್ಯ ಜನಪ್ರತಿನಿಧಿಗಳು, ಅಧಿಕಾರಿಗಳು ಸಂಚರಿಸುತ್ತಲೇ ಇರುತ್ತಾರೆ. ರಸ್ತೆ ಸಂಪೂರ್ಣ ಹಾನಿಗೊಂಡಿದ್ದರೂ ಜಿಲ್ಲಾಡಳಿತ, ತಾಲೂಕು ಆಡಳಿತ, ಜನಪ್ರತಿನಿಧಿಗಳು ತಲೆಕೆಡಿಸಿಕೊಂಡಿಲ್ಲ. ಇನ್ನಾದರೂ ಈ ಭಾಗದಲ್ಲಿನ ರಸ್ತೆಯ ಅಭಿವೃದ್ಧಿಗೆ ಆದ್ಯತೆ ನೀಡುವರೋ ಕಾದು ನೋಡಬೇಕಿದೆ.

ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಗಮನಕ್ಕೆ ಬಂದಿದೆ. ರಸ್ತೆ ಅಭಿವೃದ್ಧಿ ಬಗ್ಗೆ ತುರ್ತಾಗಿ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಲ್ಲದೇ, ಈ ಬಗ್ಗೆ ಜಿಪಂ ಸಭೆಯಲ್ಲಿ ಚರ್ಚಿಸಲಾಗುವುದು.
ಬಿ.ಶಿವಶಂಕರ್‌, ಜಿಪಂ ಸದಸ್ಯರು
ಜನಪ್ರತಿನಿಧಿಗಳ ಅಸಡ್ಡೆ ಪ್ರತಿನಿತ್ಯ ಕಿಗ್ಗಾ-ಶೃಂಗೇರಿ ನಡುವೆ ಓಡಾಡುವುದು ಯಾತನೆಯೇ ಸರಿ. ರಸ್ತೆ ಇಷ್ಟೊಂದು ಹದಗೆಟ್ಟಿದ್ದರೂ ಜನಪ್ರತಿನಿಧಿಗಳು ಅಸಡ್ಡೆ ತೋರುತ್ತಿರುವುದು ಆಶ್ಚರ್ಯ ತಂದಿದೆ. ಸಂಬಂಧಪಟ್ಟ ಅಧಿಕಾರಿಗಳು ರಸ್ತೆ ಅಭಿವೃದ್ಧಿಗೆ ಗಮನ ಹರಿಸಬೇಕಿದೆ ಎಂದು ಸ್ಥಳೀಯರಾದ ದೇವರಹಕ್ಲು ಸುಬ್ರಹ್ಮಣ್ಯ, ಸುನೀಲ್, ನಂದನ್‌, ನವೀನ್‌, ಭರತ್‌, ಪ್ರಣಮ್‌, ಪ್ರಶಾಂತ್‌ ಮತ್ತಿತರರು ಆಗ್ರಹಿಸಿದ್ದಾರೆ.
Advertisement

Udayavani is now on Telegram. Click here to join our channel and stay updated with the latest news.

Next