ಶೃಂಗೇರಿ: ತಾಲೂಕಿನಾದ್ಯಂತ ಮಳೆಯ ಅಬ್ಬರ ಮುಂದುವರೆದಿದ್ದು, ಸತತ ಮೂರನೇ ದಿನವೂ ತುಂಗಾ ನದಿ ಪ್ರವಾಹ ವಿಕೋಪಕ್ಕೆ ಹೋಗಿದ್ದರಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ತುಂಗಾ ನದಿ ಪ್ರವಾಹ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಉಪ ನದಿಗಳಾದ ನಂದಿನಿ, ನಳಿನಿ, ಮಾಲತಿ ನದಿಗಳು ಕೂಡ ಉಕ್ಕಿ ಹರಿಯುತ್ತಿವೆ. ರೈತಾಪಿ ವರ್ಗ, ಕಾರ್ಮಿಕರು ಮನೆಯಿಂದ ಹೊರ ಬಾರದ ಸ್ಥಿತಿ ನಿರ್ಮಾಣವಾಗಿದೆ. ದಿನವಿಡಿ ಪ್ರವಾಹದ ನೀರು ತಗ್ಗು ಪ್ರದೇಶಗಳಿಗೆ ನುಗ್ಗಿದೆ. ಪಟ್ಟಣವನ್ನು ಸಂಪರ್ಕಿಸುವ ಬಹುತೇಕ ರಸ್ತೆಗಳು ಜಲಾವೃತವಾಗಿದ್ದು, ಇದರಿಂದ ಸಂಚಾರ ಅಸ್ತವ್ಯಸ್ತವಾಗಿದೆ.
ಪಟ್ಟಣದಿಂದ ಜಯಪುರ ರಸ್ತೆಗೆ ಸಂಪರ್ಕ ಕಲ್ಪಿಸುವ ಕೆವಿಆರ್ ರಸ್ತೆ ಸಂಪೂರ್ಣ ಜಲಾವೃತವಾಗಿದೆ. ಹಲವು ಮನೆಗಳಿಗೆ ನೀರು ನುಗ್ಗಿದೆ. ಶ್ರೀಮಠದಿಂದ ಗುರುನಿವಾಸಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಪ್ರವಾಹದ ನೀರಿನಲ್ಲಿ ಮುಳುಗಿದೆ. ಶ್ರೀಮಠದ ಭೋಜನ ಶಾಲೆಯ ನೆಲ ಮಾಳಿಗೆಗೆ ನೀರು ನುಗ್ಗಿದ್ದು, ಅಲ್ಲಿ ಭೋಜನ ವ್ಯವಸ್ಥೆ ರದ್ದುಪಡಿಸಲಾಗಿತ್ತು.
ಮೆಣಸೆ ಸೇತುವೆ ಬಳಿ ತೆಕ್ಕೂರು ಕಡೆ ಸಾಗುವ ರಸ್ತೆಯಲ್ಲೂ ಪ್ರವಾಹದ ನೀರು ನಿಂತಿದೆ. ವಿದ್ಯಾರಣ್ಯಪುರ ಸಂಪರ್ಕಿಸುವ ರಸ್ತೆ ನೀರಿನಲ್ಲಿ ಮುಳುಗಿದೆ. ಬೈಪಾಸ್ ರಸ್ತೆಯಲ್ಲಿ ಸತತ ಮೂರನೇ ದಿನವೂ ನೀರು ನಿಂತಿದ್ದು, ಪಟ್ಟಣದಲ್ಲಿ ಏಕಮುಖ ಸಂಚಾರ ವ್ಯವಸ್ಥೆ ಇದ್ದರೂ,ಪ್ರವಾಹದ ಹಿನ್ನೆಲೆಯಲ್ಲಿ ಎರಡೂ ಕಡೆ ಸಂಚಾರವಿದೆ. ವಾಹನ ನಿಲುಗಡೆ ಸ್ಥಳ ಗಾಂಧಿ ಮೈದಾನ ಮುಳುಗಿದ್ದರಿಂದ ವಾಹನಗಳು ಪಟ್ಟಣದಲ್ಲಿಯೇ ನಿಲುಗಡೆಯಾಗಿವೆ.
ಶೃಂಗೇರಿ ಕಾರ್ಕಳ ರಸ್ತೆಯ ತನಿಕೋಡು ಬಳಿ ಪ್ರವಾಹದ ನೀರು ನಿಂತಿದ್ದು, ಸಂಚಾರಕ್ಕೆ ಅಡ್ಡಿಯಾಗಿತ್ತು. ಗ್ರಾಮೀಣ ಪ್ರದೇಶದ ಅನೇಕ ಕಡೆ ಕಾಡು ಮರಗಳು,ಅಡಕೆ ಮರ ಉರುಳಿ ಅಪಾರ ಹಾನಿ ಸಂಭವಿಸಿದೆ. ಕೆಲವೆಡೆ ಭೂಕುಸಿತದಿಂದ ಮನೆಗಳಿಗೂ ಹಾನಿ ಸಂಭವಿಸಿದೆ.ಬೇಗಾರ್‌ನ ಮಾಲತಿ ನದಿ ಉಕ್ಕಿ ಹರಿದು ರೈತರ ಗದ್ದೆ, ತೋಟಗಳು ಜಲಾವೃತವಾಗಿದೆ.
ಪಟ್ಟಣದಲ್ಲಿ ಕುಡಿಯುವ ನೀರಿನ ಸರಬರಾಜಿನಲ್ಲಿ ಅಡಚಣೆಯಾಗಿದೆ. ಪಟ್ಟಣ ಹಾಗೂ ಗ್ರಾಮೀಣ ಭಾಗದ ಎಲ್ಲೆಡೆ ವಿದ್ಯುತ್ ಸಂಪರ್ಕ ಸಂಪೂರ್ಣ ಸ್ಥಗಿತಗೊಂಡಿದೆ. ಮೊಬೈಲ್ ಸಂಪರ್ಕದಿಂದ ವಂಚಿತರಾದ ಜನರು ಪರದಾಡುವಂತಾಗಿದೆ.
ಹಾನಿ: ಮೆಣಸೆ ಗ್ರಾಪಂ ವ್ಯಾಪ್ತಿಯ ಮೆಣಸೆಯ ಸೀತಮ್ಮ, ನೆಮ್ಮಾರಿನ ಗುಂಡೇಗೌಡ, ಜಯಮ್ಮ, ಕಿರೂರಿನ ಸತೀಶ್, ಯಡದಳ್ಳಿಯ ಶ್ರೀನಿವಾಸಗೌಡ, ಬೆಳಂದೂರಿನ ಲಕ್ಷಿ ್ಮೕ ಮತ್ತು ವಿಜೇಂದ್ರ, ಉಳುವಳ್ಳಿಯ ಮಂಜುನಾಥ್ ಅವರ ಮನೆ ಹಾಗೂ ಕಾವಡಿಯ ಶ್ರೀನಿವಾಸ್ ಅವರ ಕೊಟ್ಟಿಗೆಗೆ ಹಾನಿಯಾಗಿದೆ.