Advertisement

ಹಬ್ಬಕ್ಕೆ ಸಿದ್ಧವಾಗುತ್ತಿದೆ ಗಣೇಶ ಮೂರ್ತಿ

12:05 PM Aug 25, 2019 | Naveen |

ಶೃಂಗೇರಿ: ಭಾದ್ರಪದ ಮಾಸದ ಸ್ವರ್ಣಗೌರಿ ಹಾಗೂ ಗಣಪತಿ ಹಬ್ಬಗಳಿಗೆ ಸಂಬಂಧಿಸಿ ತದಿಗೆ ಮತ್ತು ಚೌತಿ ಈ ಬಾರಿ ಒಂದೇ ದಿನ ಬರುವುದರಿಂದ ಎರಡೂ ಹಬ್ಬಗಳನ್ನು ಒಂದೇ ದಿನ ಆಚರಿಸಲಾಗುತ್ತದೆ.

Advertisement

ಹಿಂದುಗಳ ಪವಿತ್ರ ಹಬ್ಬವಾದ ಗೌರಿ ಮತ್ತು ಗಣಪತಿ ಹಬ್ಬಕ್ಕೆ ತಾಲೂಕಿನೆಲ್ಲೆಡೆ ಸಿದ್ಧತೆ ಆರಂಭಗೊಳ್ಳುತ್ತಿದ್ದು, ಗೌರಿಹಬ್ಬ ಹೆಣ್ಣುಮಕ್ಕಳ ಸಡಗರದ ಹಬ್ಬವಾಗಿದೆ. ಈಗಾಗಲೇ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಸ್ವರ್ಣಗೌರಿ ಹಬ್ಬದ ತಯಾರಿಗೆ ಮಹಿಳೆಯರು ಹತ್ತಿಯಿಂದ ಗೆಜ್ಜೆ ವಸ್ತ್ರಗಳ ತಯಾರಿಕೆಗೆ ಮುಂದಾಗಿದ್ದಾರೆ. ಇದರೊಂದಿಗೆ ಬಳೆ ಭಾಗಿನ ಸಾಮಗ್ರಿಗಳನ್ನು ಸಂಗ್ರಹಿಸುತ್ತಿದ್ದಾರೆ. ಅಲ್ಲದೇ, ಹಬ್ಬದ ಪೂಜೆಗೆ ಕಾತರದಿಂದ ಎದುರು ನೋಡುತ್ತಿದ್ದಾರೆ.

ಇಷ್ಟಕಾರ್ಯ ಸಿದ್ಧಿಗಾಗಿ ವಿಘ್ನ ನಿವಾರಕ ಗಣಪತಿ ಹಬ್ಬದ ಸಿದ್ಧತೆಗಳು ಬರದಿಂದ ಸಾಗುತ್ತಿವೆ. ವಿವಿಧ ಸಂಘ-ಸಂಸ್ಥೆಗಳು, ಸಾರ್ವಜನಿಕರು ಗಣಪತಿ ಹಬ್ಬದ ಆಚರಣೆಗೆ ಸಿದ್ಧಗೊಳ್ಳುತ್ತಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ, ಗಣಪತಿ ಪೆಂಡಾಲ್ ಮುಂತಾದ ಕಾರ್ಯದಲ್ಲಿ ಸ್ವಯಂಸೇವಕರು ತಲ್ಲೀನರಾಗಿದ್ದಾರೆ.

ತಾಲೂಕಿನ ಗ್ರಾಮೀಣ ಭಾಗದ ಯುವ ಕಲಾವಿದ ಹರೀಶ್‌ ವಿ. ಡೋಂಗ್ರೆ ತಮ್ಮ ವಿಶಿಷ್ಟ ಕಲಾ ಸಾಧನೆ ಮೂಲಕ ಗೌರಿ ಮತ್ತು ಗಣಪತಿ ಮೂರ್ತಿ ಸಿದ್ಧಪಡಿಸುತ್ತಿದ್ದಾರೆ. ಸ್ಥಳೀಯ ಕಲಾವಿದರಾದ ನಾಗೇಂದ್ರ ಪ್ರಸಾದ್‌, ಗೋಪಾಲಕೃಷ್ಣ ಅವರಿಗೆ ಸಾಥ್‌ ನೀಡುತ್ತಿದ್ದಾರೆ. ನಾಗರ ಪಂಚಮಿ ಹಬ್ಬದಿಂದ ಮೂರ್ತಿಗಳ ತಯಾರಿಕೆಯಲ್ಲಿ ತೊಡಗಿರುವ ಕಲಾವಿದರು ದ.ಕ. ಜಿಲ್ಲೆಯ ಹೆಂಚಿನ ಕಾರ್ಖಾನೆಯಿಂದ ಮಣ್ಣನ್ನು ತಂದು ಮೂರ್ತಿ ಕೆಲಸದಲ್ಲಿ ತೊಡಗಿದ್ದಾರೆ. ಕೆರೆ ಹಾಗೂ ಗದ್ದೆಗಳಿಂದಲೂ ಜೇಡಿ ಮಣ್ಣನ್ನು ತಂದು ಹತ್ತಿ ಮತ್ತು ತೆಂಗಿನ ನಾರುಗಳ ಮಿಶ್ರಣ ಮಾಡಿ ಗಣೇಶ ಮೂರ್ತಿ ತಯಾರಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಈಗಾಗಲೇ ಪರಿಸರ ಗಣಪ, ತಾಂಡವ ನೃತ್ಯ ಗಣಪ ಹೀಗೆ ಹಲವು ಬಗೆಯ ಮೂರ್ತಿಗಳಿಗೆ ಜೀವ ತುಂಬಿದ್ದಾರೆ.

ಪಟ್ಟಣದ ಗೌರಿಶಂಕರ್‌ ಸಭಾಂಗಣದಲ್ಲಿ ಸಾರ್ವಜನಿಕ ಗಣೇಶೋತ್ಸವಕ್ಕಾಗಿ ಈಗಾಗಲೇ ಗಣಪತಿ ಮೂರ್ತಿಯನ್ನು ಸಿದ್ಧ ಪಡಿಸಿದ್ದು, ಬಹುತೇಕ ಮೂರ್ತಿ ತಯಾರಿಕಾ ಕಾರ್ಯ ಮುಗಿದಿದೆ. ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಹರೀಶ್‌ ವಿ. ಡೋಂಗ್ರೆ ಅವರು, ಕಳೆದ 20ವರ್ಷಗಳಿಂದ ಗೌರಿ ಹಾಗೂ ಗಣಪತಿ ಮೂರ್ತಿಗಳ ತಯಾರಿಕೆಯಲ್ಲಿ ತೊಡಗಿದ್ದೇವೆ. ತಾಲೂಕು ಮಾತ್ರವಲ್ಲದೆ ಪಕ್ಕದ ಜಿಲ್ಲೆಗಳಿಂದಲೂ ನಮ್ಮ ಗಣೇಶ ಮೂರ್ತಿಗಳಿಗೆ ಬೇಡಿಕೆ ಇಡುತ್ತಾರೆ. ಸುಮಾರು 100ಕ್ಕೂ ಹೆಚ್ಚು ಮೂರ್ತಿಗಳನ್ನು ತಯಾರಿಸುತ್ತೇವೆ ಎಂದು ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next