Advertisement

ಕನ್ನಡ ಶಾಲೆಗೆ ಬೀಳ್ತಿದೆ ಬೀಗ!

11:03 AM Jul 28, 2019 | Naveen |

ಶೃಂಗೇರಿ: ತಾಲೂಕಿನ ಬಹುತೇಕ ಸರಕಾರಿ ಶಾಲೆಗಳು ಅಗತ್ಯ ಸೌಲಭ್ಯಗಳೊಂದಿಗೆ ಸುಸ್ಥಿತಿಯಲ್ಲಿವೆ. ಆದರೆ, ವರ್ಷದಿಂದ ವರ್ಷಕ್ಕೆ ಮಕ್ಕಳ ಕೊರತೆಯಿಂದ ಸರಕಾರಿ ಶಾಲೆಗಳು ಮುಚ್ಚುತ್ತಿರುವುದು ನೋವಿನ ಸಂಗತಿಯಾಗಿದೆ.

Advertisement

ತಾಲೂಕಿನಲ್ಲಿ 13 ಕಿರಿಯ ಪ್ರಾಥಮಿಕ ಶಾಲೆ, 34 ಹಿರಿಯ ಪ್ರಾಥಮಿಕ ಶಾಲೆ ಹಾಗೂ 6 ಪ್ರೌಢಶಾಲೆಗಳಿವೆ. ಕೂತಗೋಡು ಗ್ರಾಪಂ ವ್ಯಾಪ್ತಿಯ ವಡಗಿನಬೈಲು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕೇವಲ ಒಬ್ಬ ವಿದ್ಯಾರ್ಥಿ, ಮಲ್ನಾಡ್‌ ಶಾಲೆಯಲ್ಲಿ 6 ವಿದ್ಯಾರ್ಥಿಗಳು, ಕೆರೆಕಟ್ಟೆ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ 6ವಿದ್ಯಾರ್ಥಿಗಳು ಇದ್ದಾರೆ. ಮೆಣಸೆ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ವರ್ಷದಿಂದ ಆಂಗ್ಲ ಮಾಧ್ಯಮ ಆರಂಭಿಸಿದ್ದು, ತಾಲೂಕಿನಲ್ಲಿ ಅತೀ ಹೆಚ್ಚು ವಿದ್ಯಾರ್ಥಿಗಳು ಇದ್ದಾರೆ. ವೈಕುಂಠಪುರ ಪ್ರೌಢಶಾಲೆ ಅತೀ ಕಡಿಮೆ 37ವಿದ್ಯಾರ್ಥಿಗಳನ್ನು ಹೊಂದಿದೆ.

ಬಹುತೇಕ ಎಲ್ಲಾ ಶಾಲೆಗಳು ಅಗತ್ಯ ಶಿಕ್ಷಕರನ್ನು ಹೊಂದಿದ್ದು, ಈ ವರ್ಷ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರನ್ನು ಮತ್ತೂಂದು ಶಾಲೆಯಿಂದ ನಿಯೋಜಿಸಲಾಗಿದೆ. ಈ ವರ್ಷ ಸರಕಾರದ ನಿರ್ದೇಶನದಂತೆ ಮೂರು ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭಿಸಿದ್ದು, ಕಿಗ್ಗಾ ಹೋಬಳಿಯ ಬೇಗಾರ್‌ ಪಬ್ಲಿಕ್‌ ಶಾಲೆ ಮತ್ತು ಕಸಬಾ ಹೋಬಳಿಯ ವಿದ್ಯಾನಗರ ಮತ್ತು ಮೆಣಸೆ ಶಾಸಕರ ಮಾದರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಆರಂಭಿಸಲಾಗಿದೆ. ಸರಕಾರಿ ಶಾಲೆಗಳಿಗೆ ಎಲ್ಲಾ ಸೌಲಭ್ಯಗಳು ದೊರೆಯುತ್ತಿದ್ದರೂ ಪ್ರಸ್ತುತ ಮಕ್ಕಳ ಸಂಖ್ಯೆ ಸಮಸ್ಯೆ ಎದುರಿಸುತ್ತಿವೆ.

ಆಂಗ್ಲ ಮಾಧ್ಯಮಕ್ಕೆ ಉತ್ತಮ ಪ್ರತಿಕ್ರಿಯೆ: ಈ ವರ್ಷ ತಾಲೂಕಿನ ಮೂರು ಶಾಲೆಗಳಲ್ಲಿ ಆಂಗ್ಲ ಮಾಧ್ಯಮವನ್ನು ಆರಂಭಿಸಲಾಗಿದ್ದು, ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೇಗಾರು ಪಬ್ಲಿಕ್‌ ಶಾಲೆಯಲ್ಲಿ ಎಲ್ಕೆಜಿಗೆ ತರಗತಿ ದಾಖಲಾತಿ ಉತ್ತಮವಾಗಿದ್ದು, ಮೆಣಸೆ ಮತ್ತು ವಿದ್ಯಾನಗರ ಶಾಲೆಯಲ್ಲಿ ಆಂಗ್ಲ ಮಾಧ್ಯಮಕ್ಕೆ ಹೆಚ್ಚು ವಿದ್ಯಾರ್ಥಿಗಳು ದಾಖಲಾಗಿದ್ದಾರೆ.

ಈಗಾಗಲೇ ಸರಕಾರ ಪಠ್ಯಪುಸ್ತಕವನ್ನು ಎಲ್ಲಾ ಶಾಲೆಗಳಿಗೂ ವಿತರಿಸಿದ್ದು, ಕ್ಷೀರಭಾಗ್ಯ, ಮಧ್ಯಾಹ್ನದ ಬಿಸಿಯೂಟ ಸಮರ್ಪಕವಾಗಿ ನಡೆಯುತ್ತಿದೆ. ಸಮವಸ್ತ್ರ ಇನ್ನೂ ವಿತರಣೆ ಆಗಬೇಕಿದೆ. ಶೂ ಖರೀದಿಸಲು ಆಯಾ ಶಾಲೆಯ ಎಸ್‌ಡಿಎಂಸಿ ಖಾತೆಗೆ ಹಣ ಜಮಾ ಮಾಡಲಾಗಿದ್ದು, ಜು.31 ರೊಳಗೆ ಖರೀದಿ ಮಾಡಬೇಕಿದೆ. ಇನ್ನೂ ಸೈಕಲ್ ವಿತರಣೆ ಕಾರ್ಯ ಬಾಕಿ ಉಳಿದಿದೆ.

Advertisement

ಎಸ್ಸೆಸ್ಸೆಲ್ಸಿ ಫಲಿತಾಂಶ: ತಾಲೂಕು 2018-19ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ರಾಜ್ಯದ 204 ಬ್ಲಾಕ್‌ನಲ್ಲಿ ನಾಲ್ಕನೇ ಸ್ಥಾನ ಪಡೆದಿದೆ. ಜಿಲ್ಲೆಯಲ್ಲಿ ಸತತವಾಗಿ ಪ್ರಥಮ ಸ್ಥಾನ ಪಡೆದುಕೊಳ್ಳುತ್ತಿದೆ. 2016ರಲ್ಲೂ ತಾಲೂಕು ರಾಜ್ಯದಲ್ಲಿ ನಾಲ್ಕನೇ ಸ್ಥಾನ ಪಡೆದಿತ್ತು.

ಸರ್ವ ಶಿಕ್ಷಾ ಅಭಿಯಾನದಲ್ಲಿ ಅನೇಕ ಶಾಲೆಗಳು ಕೌಂಪೌಂಡ್‌ ಹೊಂದಿದ್ದು, ಉಳಿದ ಶಾಲೆಗಳು ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಕಾಂಪೌಂಡ್‌ ನಿರ್ಮಾಣ ಮಾಡಲಾಗಿದೆ. ತಾಲೂಕಿನ ಕೆಲವು ಶಾಲೆಗಳ ಕಟ್ಟಡ ದುರಸ್ತಿಯಾಗಬೇಕಿದ್ದು, ಪ್ರೌಢಶಾಲೆ ಕಟ್ಟಡ ಸುಸ್ಥಿತಿಯಲ್ಲಿದೆ.

ಮೆಣಸೆ ಶಾಸಕರ ಮಾದರಿ ಶಾಲೆ ವಿಶಿಷ್ಠವಾಗಿದ್ದು, ವಿದ್ಯಾರ್ಥಿಗಳನ್ನು ಗ್ರಾಮೀಣ ಪ್ರದೇಶದಿಂದ ಕರೆತರಲು ಬಸ್‌ ವ್ಯವಸ್ಥೆ ಹೊಂದಿದೆ. ಕಳೆದ ಐದು ವರ್ಷದಿಂದ ಬಸ್‌ ಮೂಲಕ ವಿದ್ಯಾರ್ಥಿಗಳನ್ನು ಕರೆ ತರಲಾಗುತ್ತಿದೆ. ಶಾಲೆ ಉತ್ತಮ ಒಳಾಂಗಣ ಸಭಾಂಗಣ ಹೊಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next