Advertisement

ಕಾಡಿನಲ್ಲಿ ಕಾಲುವೆ ನಿರ್ಮಿಸಬೇಡಿ

11:43 AM Jul 26, 2019 | Team Udayavani |

ಶೃಂಗೇರಿ: ಮೆಣಸೆ ಗ್ರಾಪಂ ವ್ಯಾಪ್ತಿಯ ಕಿಕ್ರೆಯ ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆಯವರು ಹಿಟಾಚಿ ಯಂತ್ರ ಬಳಸಿ ನಡೆಸುತ್ತಿದ್ದ ಕಾಲುವೆ ಕಾಮಗಾರಿಯನ್ನು ಗ್ರಾಮಸ್ಥರು ತಡೆದ ಘಟನೆ ಗುರುವಾರ ನಡೆದಿದೆ.

Advertisement

ಅರಣ್ಯ ಇಲಾಖೆ ಕಳೆದ ಎರಡು ದಿನದಿಂದ ಕಿಕ್ರೆ ಗ್ರಾಮದ ಕಾಡಿನಲ್ಲಿ ಹಿಟಾಚಿ ಬಳಸಿ ಕಂದಕ ನಿರ್ಮಿಸುತ್ತಿತ್ತು. ಅರಣ್ಯ ಇಲಾಖೆಯವರು ನೆಡು ತೋಪಿನ ಸುತ್ತ ಕಂದಕ ನಿರ್ಮಿಸುತ್ತಿದ್ದಾರೆ ಎಂಬ ಮಾಹಿತಿ ತಿಳಿದ ಗ್ರಾಮಸ್ಥರು ಕಾಮಗಾರಿಗೆ ತೀವ್ರ ವಿರೋಧ ವ್ಯಕ್ತಪಡಿಸಿ ತಡೆಯೊಡ್ಡಿದರು.

ಸ್ಥಳಕ್ಕೆ ಅರಣ್ಯ ಇಲಾಖಾ ಅಧಿಕಾರಿಗಳು ಬರುವಂತೆ ಪಟ್ಟು ಹಿಡಿದ ಗ್ರಾಮಸ್ಥರು, ಕಂದಕ ತೋಡುವುದನ್ನು ನಿಲ್ಲಿಸಬೇಕು ಮತ್ತು ಹಿಟಾಚಿ ಯಂತ್ರವನ್ನು ಕೊಂಡೊಯ್ಯಬೇಕು ಎಂದು ಒತ್ತಾಯಿಸಿದರು.

ಕಂದಕ ನಿರ್ಮಾಣದಿಂದ ರೈತರಿಗೆ, ಜಾನುವಾರುಗಳಿಗೆ ಹಾಗೂ ಕಾಡು ಪ್ರಾಣಿಗಳಿಗೆ ತೊಂದರೆ ಉಂಟಾಗುತ್ತದೆ. ಅಲ್ಲದೇ, ಕಂದಕ ನಿರ್ಮಿಸುವ ಸಂದರ್ಭದಲ್ಲಿ ಕಾಡು ಮರಗಳು ಉರುಳಿ ಬೀಳುತ್ತವೆ ಎಂದು ದೂರಿದರು.

ಮೆಣಸೆ ಗ್ರಾಪಂ ಸದಸ್ಯ ರಾಜೇಶ್‌ ಮಾತನಾಡಿ, ಇತ್ತೀಚೆಗೆ ನಡೆದ ಗ್ರಾಮ ಸಭೆಯಲ್ಲಿ ಸೆಕ್ಷನ್‌ 4(1)ನಿಂದ ಸೆಕ್ಷನ್‌ 17ಮೀಸಲು ಅರಣ್ಯ ಎಂದು ಘೋಷಿಸುವುದಕ್ಕೆ ಇಲಾಖೆ ಮುಂದಾಗಿದ್ದು, ಅದಕ್ಕೆ ಇನ್ನೂ ಕಾಲವಕಾಶವಿದೆ. ರೈತರು ಒತ್ತುವರಿ ಮಾಡಿಕೊಂಡಿರುವ ಜಮೀನು ಹೊರತುಪಡಿಸಿ, ಮೀಸಲು ಅರಣ್ಯ ಎಂದು ಘೋಷಣೆಯಾದ ನಂತರ ಇಲಾಖೆ ಕ್ರಮ ಕೈಗೊಳ್ಳಲಿ. ಗ್ರಾಮ ಸಭೆಯಲ್ಲಿ ಅರಣ್ಯದಲ್ಲಿ ಕಂದಕ ಮಾಡುವುದಿಲ್ಲ ಎಂದು ಭರವಸೆ ನೀಡಿ, ಇದೀಗ ಕಂದಕ ತೋಡುತ್ತಿರುವುದು ಸರಿಯಲ್ಲ. ಇದಕ್ಕೂ ಮೀರಿ ಕಂದಕ ತೋಡುವುದಾದರೆ ಹಿಟಾಚಿಯನ್ನು ತಡೆಯುವುದಾಗಿ ಎಚ್ಚರಿಸಿದರು.

Advertisement

ಗ್ರಾಮಸ್ಥರಾದ ಗೋಪಾಲ್ ಮಾತನಾಡಿದರು. ಸ್ಥಳಕ್ಕೆ ಅರಣ್ಯ ಇಲಾಖೆಯ ಅರಣ್ಯ ಸಂರಕ್ಷಕ ಗಿರೀಶ್‌, ವನಪಾಲಕ ಚಂದ್ರಪ್ಪ ಆಗಮಿಸಿ, ಗ್ರಾಮಸ್ಥರಲ್ಲಿ ಅರಣ್ಯ ಪ್ರದೇಶವನ್ನು ಉಳಿಸಲು, ಇನ್ನಷ್ಟು ಒತ್ತುವರಿ ತಡೆಯಲು ಕಂದಕ ಮಾಡುತ್ತಿದ್ದೇವೆ. ಯಾವ ರೈತರಿಗೂ ತೊಂದರೆಯಾಗದಂತೆ ಕಂದಕ ನಿರ್ಮಿಸಲಾಗುತ್ತದೆ ಎಂದರು.

ಸಾಕಷ್ಟು ಸಂಖ್ಯೆಯಲ್ಲಿ ಮಹಿಳೆಯರು ಸೇರಿದಂತೆ ಸೇರಿದ್ದ ಗ್ರಾಮಸ್ಥರು ಹಿಟಾಚಿಯನ್ನು ವಾಪಾಸ್‌ ಕಳುಹಿಸುವಲ್ಲಿ ಯಶಸ್ವಿಯಾದರು.

ಸ್ಥಳದಲ್ಲಿ ಮೇಗಳಬೈಲು ಶಿವಶಂಕರ್‌, ಚಂದ್ರಶೇಖರ್‌, ಶಿವಸ್ವಾಮಿ, ಕೊಂಡಗೆರೆ ಕಳಸಪ್ಪ, ಸುಜಾತಾ ಭಾಸ್ಕರ್‌, ನೇತ್ರಾವತಿ, ತಾಪಂ ಸದಸ್ಯ ರಾಮಕೃಷ್ಣ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ನಟರಾಜ್‌, ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಹೆಬ್ಬಿಗೆ ಕೃಷ್ಣಮೂರ್ತಿ, ಚಂದ್ರು, ಸತೀಶ, ಮೋನಪ್ಪ, ಕಳಸಪ್ಪ ನಾಯ್ಕ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next