Advertisement

ಕತ್ತಲೆಯಿಂದ ಬೆಳಕಿನೆಡೆಗೆ ಸಾಗಿ

11:49 AM Aug 29, 2019 | Team Udayavani |

ಶೃಂಗೇರಿ: ಕತ್ತಲು ಅಜ್ಞಾನ. ಬೆಳಕು ಜ್ಞಾನ. ಕತ್ತಲಿನಿಂದ ಬೆಳಕಿನೆಡೆಗೆ ಸಾಗುವುದೇ ಮಾನವನ ಮುಖ್ಯ ಗುರಿ. ಅದನ್ನು ಬಿಟ್ಟು ನಾವಿಂದು ಲೌಕಿಕ ಹಾದಿಯಲ್ಲಿ ಕಾಲ ವ್ಯರ್ಥ ಮಾಡುತ್ತಿದ್ದೇವೆ ಎಂದು ಆದಿಚುಂಚನಗಿರಿ ಶಾಖಾ ಮಠದ ಶ್ರೀ ಗುಣನಾಥ ಸ್ವಾಮೀಜಿ ಹೇಳಿದರು.

Advertisement

ಶ್ರೀ ಆದಿಚುಂಚನಗಿರಿ ಶಾಖಾ ಮಠದಲ್ಲಿ ಆಯೋಜಿಸಿದ್ದ ಕೊನೆಯ ಶ್ರಾವಣ ಪೂಜೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಅನ್ನ ಎಂಬುದು ಹಸಿವನ್ನು ನೀಗಿಸುತ್ತದೆ. ಸರ್ವ ಜನಾಂಗದವರು ಸ್ವೀಕರಿಸುವ ಉನ್ನತ ಪ್ರಸಾದ. ಹಾಗೆಯೇ, ಅಧ್ಯಾತ್ಮ ಎಂಬುದು ಸರ್ವರಿಗೂ ಲಭಿಸುವ ಮೌಲ್ಯ. ಈ ಮೌಲ್ಯಗಳನ್ನು ದಕ್ಕಿಸಿಕೊಂಡರೆ ಜೀವನದಲ್ಲಿ ಉನ್ನತಿ ಕಾಣಲು ಸಾಧ್ಯ. ಬೆಳಕು ನಮ್ಮದಾಗಬೇಕಾದರೆ ಭಗವಂತನ ಚಿಂತನೆ ಮುಖ್ಯ. ನಾವೆಲ್ಲರೂ ಒಂದೇ ಎಂಬ ಮನೋಭಾವನೆ ಇರಬೇಕು. ನಾವು ಮಾಡುವ ಕಾರ್ಯದಲ್ಲಿ ಶ್ರದ್ಧೆ ಇರಬೇಕು. ದೇವರಲ್ಲಿ ಮತ್ತು ಅಧ್ಯಾತ್ಮದಲ್ಲಿ ನಂಬಿಕೆ ಬೇಕು. ಮಾನವ ಬೆಳಕಿಗಾಗಿ ನಿರಂತರ ಹುಡುಕಾಟ ಮಾಡಬೇಕು. ಆಗ ಮಾತ್ರ ಅಲೌಕಿಕ ಬೆಳಕು ಗೋಚರವಾಗುತ್ತದೆ ಎಂದರು.

ಹಾಸನ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಮಾತನಾಡಿ, ನಮ್ಮ ಸಂಸ್ಕೃತಿಯ ಮಹಾಮಹಿಮರು ಬೆಳಕಿನತ್ತ ಸಾಗಿದರು. ಅವರ ದೂರದೃಷ್ಟಿತ್ವ ಅಧ್ಯಾತ್ಮಿಕದ ಕಡೆಯಿತ್ತು. ಸ್ವಾರ್ಥದ ಬದುಕಿನಲ್ಲಿ ಕತ್ತಲು ಹೆಚ್ಚು. ನಿಸ್ವಾರ್ಥದಲ್ಲಿ ಬೆಳಕಿನ ಕಿಡಿ ಹೊರಹೊಮ್ಮಲು ಸಾಧ್ಯ. ಕತ್ತಲಿನಿಂದ ಬೆಳಕಿನೆಡೆಗೆ ಸಾಗುವುದೇ ಮಾನವನ ನಿಜವಾದ ಗುರಿ. ಈ ಹಾದಿ ಸಿಗಬೇಕಾದರೆ ನಮ್ಮೊಳಗಿನ ಅಹಂಕಾರವನ್ನು ಕಳಚಬೇಕು ಎಂದು ತಿಳಿಸಿದರು.

ಮಂಗಳೂರು ಆದಿಚುಂಚನಗಿರಿ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಮಾತನಾಡಿ, ಭಗವಂತನು ಸರ್ವರಲ್ಲೂ ಇದ್ದಾನೆ ಎಂಬ ನಂಬಿಕೆಯಿಂದ ಗುರುಗಳಾದ ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರು ಅನ್ನ, ಆಹಾರ, ಆರೋಗ್ಯ, ಶಿಕ್ಷಣ, ಅರಣ್ಯ, ಅಭಯ ಎಂಬ ಯೋಜನೆಯನ್ನು ಹುಟ್ಟು ಹಾಕಿದರು. ಸರ್ವರಿಗೂ ಸಮಬಾಳು-ಸಮಪಾಲು ಎಂಬ ಅವರ ವಿಶಾಲ ದೃಷ್ಟಿಕೋನ ಸರ್ವರಿಗೂ ಮಾದರಿ. ಅವರು ಹಾಕಿಕೊಟ್ಟ ಹಾದಿಯಲ್ಲಿ ನಾವಿಂದು ಮುನ್ನಡೆಯುವ ಯತ್ನದಲ್ಲಿದ್ದೇವೆ ಎಂದರು.

Advertisement

ಪೂಜಾ ಕಾರ್ಯಕ್ರಮದಲ್ಲಿ ದಸರಿಗಟ್ಟ ಆದಿಚುಂಚನಗಿರಿ ಶಾಖಾ ಮಠದ ಚಂದ್ರಶೇಖರನಾಥ ಸ್ವಾಮೀಜಿ, ಕಬಳಿ ಮಠದ ಶಿವಪುತ್ರನಾಥ ಸ್ವಾಮೀಜಿ, ಚಿಕ್ಕಬಳ್ಳಾಪುರ ಮಠದ ಮಂಗಳನಾಥ ಸ್ವಾಮೀಜಿ, ಚುಂಚನಕಟ್ಟೆ ಮಠದ ಶಿವಾನಂದನಾಥ ಸ್ವಾಮೀಜಿ, ಚಿಕ್ಕಮಗಳೂರು ಬಿಜಿಎಸ್‌ ಶಾಖೆ ಆಡಳಿತಾಧಿಕಾರಿ ಕೆ.ಸಿ.ನಾಗೇಶ್‌, ಕಿರಣ್‌ ಕುಮಾರ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next