Advertisement

ಹಾಳಾದ ಪಾದಚಾರಿ ಮಾರ್ಗ: ನಾಗರಿಕರಿಗೆ ಸಂಕಷ್ಟ

01:04 PM Aug 02, 2019 | Naveen |

ಶೃಂಗೇರಿ: ಪಟ್ಟಣದ ಮುಖ್ಯ ರಸ್ತೆ ಭಾರತೀ ಬೀದಿಯ ಪಾದಚಾರಿ ಮಾರ್ಗ ಸಂಪೂರ್ಣ ಹಾಳಾಗಿರುವುದರಿಂದ ನಾಗರಿಕರು ಓಡಾಡುವುದೇ ಕಷ್ಟವಾಗಿದೆ.

Advertisement

ರಸ್ತೆ ಇಕ್ಕೆಲಗಳಲ್ಲಿ ನಿರ್ಮಿಸಿರುವ ಫುಟ್ಪಾತ್‌ಗೆ ಹೊಂದಿಸಿರುವ ಕಾಂಕ್ರೀಟ್ ಸ್ಲ್ಯಾಬ್‌ಗಳು ಜಖಂಗೊಂಡಿವೆ. ಒಂದೆಡೆ ಈ ಫುಟ್ಪಾತ್‌ ಅತ್ಯಂತ ಕಿರಿದಾಗಿದ್ದು, ಜೊತೆಗೆ ಹೊಂಡಗಳಿಂದ ತುಂಬಿ ಹೋಗಿ ಪಾದಚಾರಿಗಳ ಓಡಾಟ ದುಸ್ತರವಾಗಿದೆ.

ಪಟ್ಟಣದ ಪ್ರವೇಶ ದ್ವಾರದಿಂದ ಹಿಡಿದು ಶ್ರೀ ಮಠದ ರಾಜಗೋಪುರದ ವರೆಗೆ ಹಾಕಲಾಗಿದ್ದ ಪಾದಚಾರಿ ರಸ್ತೆಯ ಕಾಂಕ್ರೀಟ್ ಸ್ಲ್ಯಾಬ್‌ ಹತ್ತಾರು ಕಡೆ ಜಖಂಗೊಂಡಿದೆ. ಈ ಸ್ಲ್ಯಾಬ್‌ಗಳನ್ನು ಅಧಿಕಾರಿಗಳು, ಜನಪ್ರತಿನಿಧಿಗಳು ನೋಡಿದರೂ ಕ್ರಮ ಕೈಗೊಂಡಿಲ್ಲ. ಕಾಂಕ್ರೀಟ್ ಸ್ಲ್ಯಾಬ್‌ಗಳ ಮೇಲೆ ಕೆಲವರು ದೊಡ್ಡ ವಾಹನಗಳನ್ನು ಓಡಿಸುವುದರ ಫಲವೇ ಜಖಂಗೊಳ್ಳಲು ಕಾರಣವಾಗಿದೆ. ಅಲ್ಲದೇ, ವಾಹನಗಳನ್ನು ನಿಲ್ಲಿಸುವುದರಿಂದ ಪಾದಚಾರಿಗಳಿಗೆ ಸಂಚರಿಸುವುದು ಕಷ್ಟಕರವಾಗಿದೆ.

ಪಟ್ಟಣದ ಚಪ್ಪರದ ಆಂಜನೇಯ ಸ್ವಾಮಿ ದೇವಸ್ಥಾನದ ಸಮೀಪದ ಪಾದಚಾರಿ ರಸ್ತೆ ಮೂಲಕ ತಾಲೂಕು ಕಚೇರಿಗೆ ಇದೇ ಬೈಪಾಸ್‌ ರಸ್ತೆ ಮೂಲಕ ಹೋಗಬೇಕಾಗಿದೆ. ಆದರೆ ಪಾದಚಾರಿ ರಸ್ತೆಯಿಂದ ಬೈಪಾಸ್‌ ರಸ್ತೆಗೆ ಹೋಗುವ ಸಂಪರ್ಕ ಕಾಂಕ್ರೀಟ್ ಸ್ಲ್ಯಾಬ್‌ ಜಖಂಗೊಂಡು ಅದಕ್ಕೆ ಅಳವಡಿಸಿದ ಕಬ್ಬಿಣದ ರಾಡುಗಳು ಹೊರಬಂದಿವೆ. ಮುಳ್ಳಿನ ಹಾರೆಯಂತಾಗಿದೆ. ಎಲ್ಲಿಯಾದರೂ ಆಪ್ಪಿ ತಪ್ಪಿ ನೋಡದೇ ಆ ಸ್ಲ್ಯಾಬ್‌ ಮೇಲೆ ನಡೆದಾಡಿದರೆ ಚರಂಡಿಯೊಳಗೆ ಬಿದ್ದು ಕೈ-ಕಾಲು ಮುರಿದುಕೊಳ್ಳುವುದು ನಿಶ್ಚಿತವಾಗಿದೆ.

ರಸ್ತೆಯಿಂದ ಅರ್ಧ ಅಡಿ ಮೆಲ್ಭಾಗ ಎರಡೂ ಕಡೆಗಳಲ್ಲಿ ಚರಂಡಿ ಮೇಲ್ಭಾಗ ಕಾಂಕ್ರೀಟ್ ಸ್ಲ್ಯಾಬ್‌ ಹಾಕಿ ಪಾದಚಾರಿ ಮಾರ್ಗ ನಿರ್ಮಿಸಲಾಗಿತ್ತು. ಇದರಿಂದ ರಸ್ತೆ ಮತ್ತಷ್ಟು ಕಿರಿದಾಗಿದ್ದರೂ ಇಲ್ಲಿ ಓಡಾಡುವ ಪಾದಚಾರಿಗಳಿಗೆ ಅನುಕೂಲಕರವಾಗಿತ್ತು. ಆದರೆ, ಈಗ ಪಾದಚಾರಿಗಳ ಆತಂಕ ಹೆಚ್ಚಿಸಿದೆ. ಪಟ್ಟಣದ ಭಾರತೀ ಚೌಕದ ಬಳಿ, ಪಶು ವೈದ್ಯ ಆಸ್ಪತ್ರೆ ಬಳಿ ಸೇರಿದಂತೆ ಅನೇಕ ಕಡೆ ಪಾದಚಾರಿ ರಸ್ತೆ ಜಖಂಗೊಂಡಿದೆ.

Advertisement

ಭಾರತೀ ಬೀದಿಯ ಕೆಲವು ವ್ಯಾಪಾರಿಗಳಂತು ಫುಟ್ಪಾತ್‌ನಲ್ಲೇ ಅಂಗಡಿ ಸಾಮಾನುಗಳನ್ನಿಟ್ಟು ವ್ಯಾಪಾರ ನಡೆಸುವುದು ಮಾಮೂಲಿಯಾಗಿದೆ. ಸೋಮವಾರ ಸಂತೆ ದಿನವಂತೂ ಹಣ್ಣಿನ ಅಂಗಡಿಗಳ ವ್ಯಾಪಾರವನ್ನು ಫುಟ್ಪಾತ್‌ನಲ್ಲೇ ನಡೆಸಲಾಗುತ್ತದೆ. ಕೆಲವು ಅಂಗಡಿ-ಮಳಿಗೆಯವರು ಫುಟ್ಪಾತ್‌ ಸ್ಲ್ಯಾಬ್‌ ಮೇಲೆ ಜೆಸಿಬಿ ಹತ್ತಿಸಿ ಫುಟ್ಪಾತ್‌ ಸ್ಲ್ಯಾಬ್‌ಗಳನ್ನು ಒಡೆದು ಹಾಕಿರುವುದನ್ನು ಕಾಣಬಹುದು.

ಪಾದಾಚಾರಿಗಳಿಗೆ ಅತ್ತ ಪಾದಚಾರಿ ಮಾರ್ಗ ಕೂಡ ಸುಗಮ ಸಂಚಾರಕ್ಕೆ ಯೋಗ್ಯವಾಗಿಲ್ಲ. ಇತ್ತ ರಸ್ತೆಗಿಳಿಯಲು ಅವಕಾಶವಿಲ್ಲದೇ ಕಿರಿಕಿರಿ ಅನುಭವಿಸುವಂತಾಗಿದೆ. ನಿತ್ಯ ಶ್ರೀ ಶಾರದಾಂಬೆ ದರ್ಶನಕ್ಕೆ ತೆರಳುವ ಹಿರಿಯರು ಹಾಗೂ ಭಕ್ತರು, ಶಾಲಾ ಮಕ್ಕಳ ಪಾಡಂತೂ ಹೇಳತೀರದಾಗಿದೆ.

ಪಟ್ಟಣವನ್ನು ಸ್ವಚ್ಛವಾಗಿಟ್ಟುಕೊಳ್ಳುವುದೂ ಸೇರಿದಂತೆ ಫುಟ್ಪಾತ್‌ಗೆ ಹಾಕಲಾಗಿರುವ ಕಾಂಕ್ರೀಟ್ ಸ್ಲಾ ್ಯಬ್‌ ಮೇಲೆ ಓಡಾಡುವಾಗ ಸಾರ್ವಜನಿಕರು ಜಾಗರೂಕರಾಗಿರಬೇಕು. ಸಾರ್ವಜನಿಕರು ಸಹಕರಿಸದಿದ್ದಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಏನು ಮಾಡಲು ಸಾಧ್ಯ?
ಬಿ.ಎನ್‌.ಕೃಷ್ಣ,
ಪಪಂ ಮಾಜಿ ಸದಸ್ಯ
ರಸ್ತೆ ಅಗಲೀಕರಣ ಮಾತಿರಲಿ ಇರುವ ಪಾದಚಾರಿ ರಸ್ತೆಯಲ್ಲೂ ಈ ರೀತಿ ಹೊಂಡಗಳಾದರೆ ಓಡಾಡುವುದು ಹೇಗೆ? ಮಕ್ಕಳು, ವೃದ್ಧರ ಕಥೆ ದೇವರಿಗೇ ಪ್ರೀತಿ. ಪಪಂ ಅಧಿಕಾರಿಗಳು ಇತ್ತ ಗಮನ ಹರಿಸಿ ಪಾದಚಾರಿ ರಸ್ತೆಗೆ ಹಾಕಲಾಗಿರುವ ಕಾಂಕ್ರೀಟ್ ಸ್ಲಾ ್ಯಬ್‌ ಬದಲಿಸಬೇಕು.
ಕೆ.ಎಂ.ರಾಮಣ್ಣ,
 ದಸ್ತಾವೇಜು ಬರಹಗಾರ, ಶೃಂಗೇರಿ
Advertisement

Udayavani is now on Telegram. Click here to join our channel and stay updated with the latest news.

Next