ಕನ್ನಡ ಚಿತ್ರರಂಗದಲ್ಲಿ ಸಿನಿಮಾಗಳಿಗೆ ತನ್ನ ವಿಭಿನ್ನ ಸಂಗೀತ ಸಂಯೋಜನೆಯ ಮೂಲಕ ಗುರುತಿಸಿಕೊಂಡಿರುವ ಸಂಗೀತ ನಿರ್ದೇಶಕ ಶ್ರೀಧರ್ ವಿ. ಸಂಭ್ರಮ್. 2008ರಲ್ಲಿ ತೆರೆಕಂಡ ಕಿಚ್ಚ ಸುದೀಪ್ ಅಭಿನಯದ “ಮುಸ್ಸಂಜೆ ಮಾತು’ ಚಿತ್ರದ ಮೂಲಕ ಸ್ವತಂತ್ರ ಸಂಗೀತ ನಿರ್ದೇಶಕರಾಗಿ ಚಿತ್ರರಂಗಕ್ಕೆ ಪರಿಚಯವಾದ ಶ್ರೀಧರ್ ಸಂಭ್ರಮ್, ಬಳಿಕ “ಕೃಷ್ಣನ್ ಲವ್ ಸ್ಟೋರಿ’, “ಕೃಷ್ಣನ್ ಮ್ಯಾರೇಜ್ ಸ್ಟೋರಿ’, “ಜೈಲಲಿತ’, “ಬೆಳ್ಳಿ’, “ಕೃಷ್ಣಲೀಲಾ’, “ಕೃಷ್ಣ ರುಕ್ಕು’, “ಉಪೇಂದ್ರ ಮತ್ತೆ ಬಾ’, “ಕೃಷ್ಣ ಟಾಕೀಸ್’, “ಮುಗಿಲ್‌ಪೇಟೆ’ ಹೀಗೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಸೂಪರ್ ಹಿಟ್ ಹಾಡುಗಳನ್ನು ನೀಡುವ ಮೂಲಕ ಸಿನಿ ಸಂಗೀತ ಲೋಕದಲ್ಲಿ ತನ್ನದೇ ಛಾಪು ಮೂಡಿಸಿದವರು.
ಸದ್ಯ ಸದ್ದಿಲ್ಲದೆ ಕನ್ನಡ ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕನಾಗಿ ಒಂದು ದಶಕದ ಸಿನಿಯಾನ ಪೂರೈಸಿರುವ ಶ್ರೀಧರ್ ಸಂಭ್ರಮ್, ಈಗಿನ ತಲೆಮಾರಿನ ಸಂಗೀತ ಪ್ರಿಯರ ಅಭಿರುಚಿಗೆ ತಕ್ಕಂತೆ ಸಂಗೀತ ಸಂಯೋಜಿಸುವುದರಲ್ಲಿ ಸಿದ್ಧಹಸ್ತ ಎನಿಸಿಕೊಂಡಿರುವ ಸಂಗೀತ ನಿರ್ದೇಶಕ.
ಹೀಗಾಗಿಯೇ, ಈಗಿನ ಅನೇಕ ಯುವ ಸಿನಿಮಾ ನಿರ್ದೇಶಕರಿಗೂ ಶ್ರೀಧರ್ ಹಾಟ್ ಫೇವರೆಟ್ ಮ್ಯೂಸಿಕ್ ಡೈರೆಕ್ಟರ್ ಎನ್ನಬಹುದು. ಇತ್ತೀಚೆಗಷ್ಟೇ ಶ್ರೀಧರ್ ವಿ. ಸಂಭ್ರಮ್ ಸಂಗೀತ ಮತ್ತು ಹಿನ್ನೆಲೆ ಸಂಗೀತ ನಿರ್ದೇಶನದಲಿ ಮೂಡಿಬಂದ “ಮುಗಿಲ್ ಪೇಟೆ’ ಚಿತ್ರದ ಹಾಡುಗಳು ದೊಡ್ಡ ಮಟ್ಟಿಗೆ ಹಿಟ್ ಆಗಿದ್ದು, ಚಿತ್ರದಲ್ಲಿ ಶ್ರೀಧರ್ ಸಂಭ್ರಮ್ ಹಿನ್ನೆಲೆ ಸಂಗೀತಕ್ಕೆ ಚಿತ್ರರಂಗ ಮತ್ತು ಸಿನಿಪ್ರಿಯರಿಂದ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಈಗಾಗಲೇ ನಲವತ್ತಕ್ಕೂ ಹೆಚ್ಚು ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿರುವ ಶ್ರೀಧರ್ ಸಂಭ್ರಮ್, ಮುಂಬರಲಿರುವ ಮದರಂಗಿ ಕೃಷ್ಣ, ರಚಿತಾ ರಾಮ್ ಅಭಿನಯದ “ಲವ್ ಮಿ ಆರ್ ಹೇಟ್ ಮಿ’, ಅಜೇಯ್ ರಾವ್ ಅಭಿನಯದ “ಶೋಕಿವಾಲಾ’, “ಪುರುಷೋತ್ತಮ’ ಸೇರಿದಂತೆ ಎಂಟಕ್ಕೂ ಹೆಚ್ಚು ನಿರೀಕ್ಷಿತ ಸಿನಿಮಾಗಳಿಗೆ ಬ್ಯಾಕ್ ಟು ಬ್ಯಾಕ್ ಸಂಗೀತ ನಿರ್ದೇಶನ ಮಾಡುತ್ತಿದ್ದು, ಶೀಘ್ರದಲ್ಲಿಯೇ “ಹಾಫ್ ಸೆಂಚುರಿ’ ಬಾರಿಸುವ ಸಂಭ್ರಮದಲ್ಲಿದ್ದಾರೆ ಶ್ರೀಧರ್.
ಇದನ್ನೂ ಓದಿ:ಇಂದು ಬಂಧನ 2 ಚಿತ್ರಕ್ಕೆ ಮುಹೂರ್ತ: ರಾಜೇಂದ್ರ ಸಿಂಗ್ ಬಾಬು ನಿರ್ದೇಶನ
ತಮ್ಮ ಸಿನಿಮಾ ಯಾನದ ಬಗ್ಗೆ ಮಾತನಾಡುವ ಶ್ರೀಧರ್ ಸಂಭ್ರಮ್, “ಸುಮಾರು ಒಂದು ದಶಕಗಳಿಂದ ಸಂಗೀತ ನಿರ್ದೇಶಕನಾಗಿರುವ ನನಗೆ ಸಂಗೀತ ಮತ್ತು ಚಿತ್ರರಂಗ ಎಲ್ಲವನ್ನೂ ಕೊಟ್ಟಿದೆ. ಸಿನಿಮಾದವರು, ಪ್ರೇಕ್ಷಕರು ನನ್ನ ಕೆಲಸವನ್ನು ಮೆಚ್ಚಿಕೊಂಡಿರುವುದರಿಂದಲೇ, ನಾನಿನ್ನೂ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದೇನೆ. ನನಗೆ ಸಂಗೀತ, ಸಿನಿಮಾ ಬಿಟ್ಟು ಬೇರೇನೂ ಗೊತ್ತಿಲ್ಲ. ಪ್ರಾಮಾಣಿಕವಾಗಿ ಕೆಲಸದಲ್ಲಿ ತೊಡಗಿಸಿಕೊಂಡರೆ, ಖಂಡಿತವಾಗಿಯೂ ಸಿನಿಮಾ ನಮ್ಮ ಕೈಹಿಡಿಯುತ್ತದೆ ಎಂಬುದು ನನ್ನ ನಂಬಿಕೆ. ಈ ನಂಬಿಕೆಯೇ ನನ್ನನ್ನು ಇಲ್ಲಿಯವರೆಗೆ ಕರೆದುಕೊಂಡು ಬಂದಿದೆ’ ಎನ್ನುತ್ತಾರೆ.
ಅಂದಹಾಗೆ, ಇಂದು ಶ್ರೀಧರ್ ಸಂಭ್ರಮ್ ಅವರಿಗೆ ಜನ್ಮದಿನದ ಸಂಭ್ರಮ. ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಶ್ರೀಧರ್ ಅವರಿಂದ ಇನ್ನಷ್ಟು ಸೂಪರ್ ಹಿಟ್ ಹಾಡುಗಳು ಮುಂಬರುವ ದಿನಗಳಲ್ಲಿ ಹೊರಬರಲಿ ಎಂಬುದು ಸಿನಿಪ್ರಿಯರ ಆಶಯ.