ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆಯ ಶ್ರೀಸಿದ್ಧಿವಿನಾಯಕ, ಶೀಘ್ರ ವರಪ್ರದಾಯಕ ಎಂಬ ನಂಬಿಕೆ ಇದೆ. ಶಿವಮೊಗ್ಗ -ಹೊಸನಗರ ಹೆದ್ದಾರಿಯ ಪಕ್ಕದಲ್ಲಿಯೇ ಸಂಪೂರ್ಣ ಶಿಲಾಮಯ ದೇಗುಲವಾಗಿ ಭಕ್ತಾದಿಗಳನು ಆಕರ್ಷಿಸುತ್ತಿದೆ.
ದಶಕಗಳ ಇತಿಹಾಸ ಹೊಂದಿರುವ ಈ ದೇವಾಲಯ ಶಿಥಿಲಾವಸ್ಥೆಯಲ್ಲಿತ್ತು. ಈ ದೇವಾಲಯವನ್ನು ಕಳೆದ ವರ್ಷ ಏಪ್ರಿಲ್‌ನಲ್ಲಿ ಪುನರ್ ಪ್ರತಿಷ್ಠಾಪನೆ ಮಾಡಲಾಯಿತು.
1925 ರವರೆಗೂ ಇದು ಸಣ್ಣ ಊರಾಗಿತ್ತು. ಬಿದನೂರು ಅರಸರ ಕಾಲದಿಂದಲೂ ಈ ಪ್ರದೇಶವು ದೊಡ್ಡಿನಕೊಪ್ಪ ಎಂಬ ಹೆಸರು ಹೊಂದಿತ್ತು. ಮೈಸೂರು ರಾಜ್ಯದ ವೈಸ್‌ರಾಯ್ ಆಗಿದ್ದ ಲಾರ್ಡ್‌ರಿಪ್ಪನ್ 1926ರಲ್ಲಿ ಶಿವಮೊಗ್ಗದಿಂದ ಬಿದನೂರು ನಗರಕ್ಕೆ ತೆರಳುವ ಮಾರ್ಗದಲ್ಲಿ ದೊಡ್ಡಿನಕೊಪ್ಪದಲ್ಲಿ ಒಂದು ರಾತ್ರಿ ತಂಗಿದ್ದನಂತೆ. ಲಾರ್ಡ್ ರಿಪ್ಪನ್ ವಾಸ್ತವ್ಯ ಹೂಡಿದ್ದರ ನೆನಪಿಗಾಗಿ ಈ ಗ್ರಾಮಕ್ಕೆ ರಿಪ್ಪನ್‌ಪೇಟೆ ಎಂಬ ಹೆಸರನ್ನು ಇಡಲಾಯಿತು.
1925 ರ ಸುಮಾರಿನಲ್ಲಿ ಇಲ್ಲಿ ಸರ್ಕಾರಿ ಉದ್ಯೋಗ ಪಡೆದು ವಾಸವಿದ್ದ ಶೇಖದಾರರಿಗೆ(ರಾಜಸ್ವ ನಿರೀಕ್ಷಕರು) ಈ ಸ್ಥಳದಲ್ಲಿ ಇಲ್ಲಿ ಶ್ರೀಸಿದ್ಧಿವಿನಾಯಕ ದೇವಸ್ಥಾನ ನಿರ್ಮಾಣ ಮಾಡಲು ಕನಸಿನಲ್ಲಿ ಪ್ರೇರಣೆ ದೊರೆಯಿತು. ಆ ಸಮಯದಲ್ಲಿ ಇಲ್ಲಿನ ಸುತ್ತಮುತ್ತಲು ಪ್ರದೇಶದಲ್ಲಿ ಯಾವುದೇ ದೇವಾಲಯವಿರಲಿಲ್ಲ. ಶೇಖ್‌ದಾರರ ಬೆಂಬಲದಿಂದ ಗುರುಬಸಪ್ಪಗೌಡರು, ದೊಡ್ಡಿನಕೊಪ್ಪ ಶಾಂತವೀರಪ್ಪಗೌಡರು ಹಾಗೂ ರಾಮರಾಯರು,ಮಾಧವರಾವ್ ಪ್ರಭು,ಬಾಪುಖಾನ್, ಇಬ್ರಾಂಸಾಬ್ ಎಲ್ಲರೂ ದೇಗುಲ ನಿರ್ಮಾಣಕ್ಕೆ ಸೇರಿದರು. ಸಣ್ಣ ಗುಡಿ ಕಟ್ಟಿ ತೀರ್ಥಹಳ್ಳಿ ತಾಲ್ಲೂಕಿನ ಆಲ್ಮನೆ ಎಂಬಲ್ಲಿ ಭಗ್ನಗೊಂಡ ದೇವಸ್ಥಾನದಲ್ಲಿದ್ದ ವಿನಾಯಕ ಮೂರ್ತಿಯನ್ನು ತಂದು 1926 ರಲ್ಲಿ ಪ್ರತಿಷ್ಠಾಪಿಸಿದರು.
ಆಗ ಈ ಸ್ಥಳವು ಮಂಗಳೂರು ಹೆಂಚಿನಲ್ಲಿ ರೂಪುಗೊಂಡ ಸಣ್ಣ ಗುಡಿಯಾಗಿತ್ತು. ನಂತರ 1933 ರಲ್ಲಿ ಅದನ್ನು ವಿಸ್ತರಿಸಿ ದೊಡ್ಡಗುಡಿಯಾಗಿ ಪುನರ್ ನಿರ್ಮಿಸಲಾಯಿತು. 1973 ಇಲ್ಲಿನ ಠಾಣೆಯಲ್ಲಿ ಎಸ್.ಐ.ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮೈಸೂರಿನ ಮರಿಸ್ವಾಮಿ ಎಂಬುವರ ನೇತೃತ್ವದಲ್ಲಿ ಊರಿನ ಹಿರಿ¿åರೆಲ್ಲ ಸೇರಿ ದೇಗುಲಕ್ಕೆ ಭದ್ರ ಅಡಿಪಾಯ ಹಾಕಿದರು. 1992 ರಲ್ಲಿ ಮತ್ತೆ ಅಷ್ಟಬಂಧ, ಪುನರ್ ಪ್ರತಿಷ್ಠಾನೆ ಕಾರ್ಯಕ್ರಮ ನಡೆಸಲಾಯಿತು. ಇಲ್ಲಿ ಸಿದ್ಧಿನಾಯಕ ದೇಗುಲದ ಜೊತೆಗೆ ಅನ್ನಪೂಣೇಶ್ವರಿ ಅಮ್ಮನವರ ದೇವಸ್ಥಾನ, ನವಗ್ರಹ ಮಂಟಪ, ತೀರ್ಥಮಂಟಪ ಸಹ ಇದೆ.
ಪ್ರತಿ ಸಂಕಷ್ಟ ಚತುರ್ಥಿಯಂದು ವಿಶೇಷ ಪೂಜೆ ನಡೆಯುತ್ತದೆ. ಪ್ರತಿ ವರ್ಷ ಗಣೇಶೋತ್ಸವದಲ್ಲಿ ಗ್ರಾಮದ ಎಲ್ಲರೂ ಸೇರಿ ಒಂದೇ ಗಣೇಶ್ ಮೂರ್ತಿ ಪ್ರತಿಷ್ಠಾಪನೆ ಮಾಡುತ್ತಾರೆ. ಎಲ್ಲಾ ಹಬ್ಬ ಹರಿದಿನಗಳಂದು ವಿಶೇಷ ಅಲಂಕಾರ ಪೂಜೆ ನಡೆಯುತ್ತದೆ. ಹರಕೆ ಹೊತ್ತ ಭಕ್ತರಿಗೆ ಶೀಘ್ರ ವರ ಕೊಡುವ ದೇವರೆಂಬ ಅಚಲ ನಂಬಿಕೆ ಇದ್ದು ನಿತ್ಯವೂ ಭಕ್ತರ ದಂಡು ನೆರೆಯುತ್ತದೆ.
ಎನ್.ಡಿ.ಹೆಗಡೆ ಆನಂದಪುರಂ