ಕುಷ್ಟಗಿ: ತಾಲೂಕಿನ ನಿಡಶೇಸಿ ಗ್ರಾಮದ ಶ್ರೀ ಚನ್ನಬಸವ ಶಿವಯೋಗಿಗಳ ಜಾತ್ರೆ ನಿಮಿತ್ತ ಮಹಾ ರಥೋತ್ಸವ, ಸಾಮೂಹಿಕ ಮದುವೆ ಹಾಗೂ ಅಡ್ಡಪಲ್ಲಕ್ಕಿ ಮಹೋತ್ಸವ ಶುಕ್ರವಾರ ವೈಭವದಿಂದ ಜರುಗಿತು.
ಶುಕ್ರವಾರ ಬೆಳಗ್ಗೆ ನಿಡಶೇಸಿ ಮಠದ ಆವರಣದಲ್ಲಿರುವ ಕರ್ತೃ ಗದ್ದುಗೆಗೆ ಅಭಿಷೇಕ, ಕಳಸಾರೋಹಣ ಧಾರ್ಮಿಕ ಕಾರ್ಯಗಳು ಜರುಗಿದವು. ಮಠಾಧಿಧೀಶರಾದ ಶ್ರೀ ಚನ್ನಬಸವ ಶಿವಾಚಾರ್ಯ ಸ್ವಾಮಿಗಳ ಭಾವಚಿತ್ರ, ಅಡ್ಡಪಲ್ಲಕ್ಕಿ ಮಹೋತ್ಸವದಲ್ಲಿ ಮಹಿಳೆಯರ ಕುಂಭ ಮೆರವಣಿಗೆಯಲ್ಲಿ ಪುರವಂತರವೀರಗಾಸೆ ನೃತ್ಯ, ಭಕ್ತರ ಶಸ್ತ್ರ ಧಾರಣ ನೆರವೇರಿತು.
ಇದೇ ವೇಳೆ ನಿಡಶೇಸಿ ಮಠದ ಆವರಣದಲ್ಲಿರುವ ಶ್ರೀ ಚನ್ನಬಸವೇಶ್ವರ ಮೂರ್ತಿಗೆ, ಶ್ರೀಮಠದ ಆವರಣದಲ್ಲಿರುವ ಶ್ರೀ ವೀರಭದ್ರೇಶ್ವರ ಮೂರ್ತಿಗೆ ಹಾಗೂ ಕರ್ತೃ ಗದ್ದುಗೆಗೆ ಅಭಿಷೇಕ ನಂತರ ಕಳಸಾರೋಹಣ ನೆವೇರಿಸಲಾಯಿತು. ಮಧ್ಯಾಹ್ನ 3 ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮದ ನಂತರ ಭಕ್ತರಿಗಾಗಿ ಅನ್ನ ಸಂತರ್ಪಣೆ ಕಾರ್ಯ ಜರುಗಿತು. ಇದೇ ವೇಳೆ ಕಂಪ್ಲಿಯ ಸಾಂಗತ್ರಯ ಸಂಸ್ಕೃತ, ಜೋತಿಷ್ಯ, ಪುರಾಣ ಪಾಠಶಾಲೆಯ ಪ್ರಾಚಾರ್ಯ ಶ್ರೀಶಶಿಧರ ಶಾಸ್ತ್ರಿಗಳಿಗೆ ಶ್ರೀ ಮಠದಿಂದ ತುಲಾಭಾರ ಕಾರ್ಯ ಜರುಗಿತು.
ಸಂಜೆ ಗ್ರಾಮದ ಚನ್ನಬಸವ ಶಿವಯೋಗಿಗಳ ಮಹಾರಥೋತ್ಸವ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು. ಸಾಗಿದ ರಥಕ್ಕೆ ಭಕ್ತರು ಉತ್ತತ್ತಿ ಹಾರಿಸಿ, ಧನ್ಯತಾ ಭಾವ ಮೆರೆದರು. ನಂತರ ಮಠದ ಆವರಣದ ವೇದಿಕೆಯಲ್ಲಿ ಧರ್ಮ ಸಭೆಯಲ್ಲಿ ಶಿವಾನುಭವ ಚಿಂತನ ಪ್ರವಚನ ಮಹಾಮಂಗಳ ಹಾಗೂ ಚಳಗೇರಿಯ ಶ್ರೀ ವೀರಸಂಗಮೆಶ್ವರ ಶಿವಾಚಾರ್ಯ ಸ್ವಾಮೀಜಿ, ಮದ್ದಾನಿಮಠದ ಶ್ರೀ ಕರಿಬಸವೇಶ್ವರ ಶಿವಾಚಾರ್ಯ ಸ್ವಾಮೀಜಿ, ಮಂಗಳೂರಿನ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ನಿಡಶೇಸಿಯ ಶ್ರೀ ಚನ್ನಬಸವ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯವಹಿಸಿದ್ದರು.