ಮಂಗಳೂರು: ದೇವರು – ಮನುಷ್ಯನ ನಡುವಿನ ಅವಿನಾಭಾವ ಕೊಂಡಿ ಎಂದರೆ ಭಕ್ತಿ, ಶ್ರದ್ಧೆ ಮತ್ತು ನಂಬಿಕೆ. ಈ ಮೂರು ಅಂಶಗಳನ್ನು ಜಾಗೃತಗೊಳಿಸಿಕೊಂಡರೆ ದೈವ ಸಾಕ್ಷಾತ್ಕಾರವಾಗುತ್ತದೆ ಎಂದು ಹೊರನಾಡು ಶ್ರೀ ಅನ್ನಪೂರ್ಣೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರ ಭೀಮೇಶ್ವರ ಜೋಶಿ ಹೇಳಿದರು.
ಗುರುಪುರ ಶ್ರೀ ಸತ್ಯದೇವತಾ ಧರ್ಮದೇವತಾ ಮಹೋತ್ಸವ ಸಮಿತಿ ವತಿಯಿಂದ ಎ. 28ರ ವರೆಗೆ ನಡೆಯುವ ಶ್ರೀ ಸತ್ಯದೇವತಾ ಧರ್ಮದೇವತಾ ಮಂದಿರದ ಪುನಃ ಪ್ರತಿಷ್ಠಾ ರಜತ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಜಿ. ಜನಾರ್ದನ ಕೃಷ್ಣ ಭಟ್ ಮಂಟಪದ ಸತ್ಯಶ್ರೀ ವೇದಿಕೆಯಲ್ಲಿ ಬುಧವಾರ ಉದ್ಘಾಟಿಸಿ ಮಾತನಾಡಿದರು.
ದೇವರ ಲೀಲೆ, ಮಾಯೆ ಮತ್ತು ಅಸ್ತಿತ್ವವು ಅಳಿಯುವುದಕ್ಕೆ ಮತ್ತು ಅಳಿಸುವುದಕ್ಕೆ ಸಾಧ್ಯವಾಗದೇ ಇರುವ ವಿಶಿಷ್ಟ ಪ್ರಕ್ರಿಯೆ. ಶ್ರದ್ಧಾ ಭಕ್ತಿಯಿಂದ ಮತ್ತು ಗೌರವ ಪೂರ್ವಕವಾಗಿ ದೇವರ ಸೇವೆ ಮಾಡಿದರೆ ದೈವ ಸಾಕ್ಷಾತ್ಕಾರವಾಗುತ್ತದೆ. ಆ ಮೂಲಕ ದೈವತ್ವದ ಬಿಂದುವೊಂದು ನಮ್ಮಲ್ಲಿ ಸಿಂಧುವಾಗಿ ಜೀವನ ಪರಿಪೂರ್ಣ ವಾಗುತ್ತದೆ ಎಂದವರು ತಿಳಿಸಿದರು.
ಜಿ. ಅಣ್ಣಪ್ಪ ಪ್ರಭು ಮಂಗಳೂರು ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿಗಳಾದ ಜಗನ್ನಾಥ ಶೆಣೈ, ಎಂ.ಎನ್. ಹೆಗ್ಡೆ, ಮಂಗಳೂರು ಕಾಮತ್ ಕೆಟರರ್ನ ಸುಧಾಕರ ಕಾಮತ್, ಸುರೇಂದ್ರ ಕುಡ್ವ ಮೂಲ್ಕಿ, ಗುರುಪುರ ಶ್ರೀ ವರದರಾಜ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಪಾಂಡುರಂಗ ಕಾಮತ್, ಖಂಡಿಗೆ ಪಾಂಡುರಂಗ ಪ್ರಭು ಸುರತ್ಕಲ್, ಗುರುದತ್ತ ಎಸ್. ಪೈ ಬೆಂಗಳೂರು, ಶ್ರೀ ಸತ್ಯಸಾಯಿ ಸೇವಾ ಸಮಿತಿಯ ಜಯಪುರ ಜಯವಂತ ಭಟ್, ಜೆ.ಪಿ. ನಾಯಕ್ ಮುಂಬಯಿ, ನಾಗರಾಜ ಪೈ ಮಂಗಳೂರು, ವಿಷ್ಣು ಕಾಮತ್ ಗುರುಪುರ ಮುಖ್ಯ ಅತಿಥಿಗಳಾಗಿದ್ದರು. ವೇ|ಮೂ| ಜಿ. ಅಶೋಕ್ ಭಟ್ ಮೊದಲಾದವರು ಉಪಸ್ಥಿತರಿದ್ದರು. ಭೀಮೇಶ್ವರ ಜೋಶಿ ಹಾಗೂ ಇತರ ಗಣ್ಯರನ್ನು ಈ ವೇಳೆ ಗೌರವಿಸಲಾಯಿತು.
ರತ್ನಾಕರ ಗುರುಪುರ ಪ್ರಸ್ತಾವನೆ ಗೈದರು. ಎಚ್. ರಾಘವೇಂದ್ರ ರಾವ್ ಸ್ವಾಗತಿಸಿ, ಲಕ್ಷ್ಮಣ್ ಶೆಟ್ಟಿ ಗುರುಪುರ ವಂದಿಸಿದರು. ಸೌಜನ್ಯಾ ಹೆಗ್ಡೆ ನಿರೂಪಿಸಿದರು. ಮಧುರಾಜ್ ಅತಿಥಿ ಪರಿಚಯ ಮಾಡಿದರು.